ರಾಷ್ಟ್ರೀಯ ಸೇವಾ ಯೋಜನೆ ಚಟುವಟಿಕೆಗಳಿಗೆ ಚಾಲನೆ
ಗೊರೂರು (ಹಾಸನ ತಾ.): ಎ.ಎನ್. ವರದರಾಜುಲು ಪ್ರಥಮ ದರ್ಜೆ ಕಾಲೇಜಿನಲ್ಲಿ ರಾಷ್ಟ್ರೀಯ ಸೇವಾ ಯೋಜನೆಯ ಚಟುವಟಿಕೆಗಳಿಗೆ ಚಾಲನೆ ನೀಡಲಾಯಿತು. ಕಾಲೇಜಿನ ಇತಿಹಾಸ ವಿಭಾಗದ ಮುಖ್ಯಸ್ಥ ಡಾ. ನೇಮತ್ ಉಲ್ಲಾ ಷರೀಫ್ ಕಾರ್ಯಕ್ರಮ ಉದ್ಘಾಟಿಸಿ, ವಿದ್ಯಾರ್ಥಿಗಳು ಪಠ್ಯ ಚಟುವಟಿಕೆಗಳೊಂದಿಗೆ ಸ್ವಯಂ ಸೇವಾ ಮನೋಭಾವ ಅಳವಡಿಸಿಕೊಳ್ಳಬೇಕು. ಆ ಮೂಲಕ ನಾಯಕತ್ವದ ಗುಣ ಬೆಳೆಸಿಕೊಳ್ಳಲು ಇದು ಸಹಾಯಕವಾಗುತ್ತದೆ ಎಂದರು.
ಕನ್ನಡ ವಿಭಾಗದ ಮುಖ್ಯಸ್ಥರಾದ ಜಿ.ಎನ್. ಅನಸೂಯ ಮಾತನಾಡಿ, ನಾವು ಕೇವಲ ಬಹಿರಂಗವಾಗಿ ಸ್ವಚ್ಛವಾಗಬಾರದು, ಅಂತರಂಗವೂ ಅಷ್ಟೇ ಶುಚಿತ್ವವಾಗಬೇಕು. ಈ ಕೆಲಸವನ್ನು ರಾಷ್ಟ್ರೀಯ ಸೇವಾ ಯೋಜನೆ ಮಾಡುತ್ತದೆ. ಅಲ್ಲದೆ ರಾಷ್ಟ್ರೀಯ ಭಾವೈಕ್ಯತೆ ಸೃಷ್ಟಿಸುತ್ತದೆ ಮತ್ತು ಶಿಸ್ತು, ಸಂಯಮ, ಸಮಯ ಪಾಲನೆಯ ಬಗ್ಗೆ ತಿಳಿಸಿಕೊಡುತ್ತದೆ ಎಂದು ಹೇಳಿದರು.
ಮುಖ್ಯ ಅತಿಥಿ ಕಾಲೇಜಿನ ಅಧೀಕ್ಷಕ ಎಚ್.ಎನ್. ಶೇಷಾದ್ರಿ, ರಾಷ್ಟ್ರೀಯ ಸೇವಾ ಯೋಜನೆಯ ಅವಶ್ಯಕತೆಯ ಬಗ್ಗೆ ವಿದ್ಯಾರ್ಥಿಗಳಿಗೆ ಮನವರಿಕೆ ಮಾಡಿಕೊಟ್ಟರು.
ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಡಾ. ಎಂ.ಆರ್. ಚಂದ್ರಶೇಖರ್ ಮಾತನಾಡಿ, ಕಾಲೇಜಿನಲ್ಲಿ 1991 ರಲ್ಲಿ ರಾಷ್ಟ್ರೀಯ ಸೇವಾ ಯೋಜನಾ ಘಟಕ ಆರಂಭವಾಗಿದ್ದು, ಇದಕ್ಕೆ ತನ್ನದೇ ಆದ ಇತಿಹಾಸವಿದೆ. ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸಲು ಹಾಗೂ ವ್ಯಕ್ತಿತ್ವ ಮತ್ತು ಬಾಂಧವ್ಯವನ್ನು ಹೇಗೆ ರೂಪಿಸಿಕೊಳ್ಳಬೇಕು ಎಂಬುದರ ಬಗ್ಗೆ ತಿಳಿಸುವಂತಹ ಮಾಧ್ಯಮ ರಾಷ್ಟ್ರೀಯ ಸೇವಾ ಯೋಜನಾ ಘಟಕವಾಗಿದೆ ಎಂದು ತಿಳಿಸಿದರು.
ವಿದ್ಯಾರ್ಥಿಗಳು ಶ್ರಮದಾನದ ಜೊತೆಗೆ ಸಹಬಾಳ್ವೆ, ನಾಯಕತ್ವ ಹಾಗೂ ವರ್ತಮಾನದ ಪರಿಸ್ಥಿತಿ ಅರಿತು ನಡೆಯುವ ಗುಣ ಮೈಗೂಡಿಸಿಕೊಳ್ಳಲು ರಾಷ್ಟ್ರೀಯ ಸೇವಾ ಯೋಜನೆ ಸಹಕಾರಿ. ಯಾವುದೇ ಕೆಲಸ ಕೈಗೊಂಡಾಗ ಅರ್ಪಣಾ ಮನೋಭಾವನೆ ಬೆಳೆಯ ಬೇಕೆಂದರು.
ರಾಷ್ಟ್ರೀಯ ಸೇವಾ ಯೋಜನಾಧಿಕಾರಿ ಎಚ್.ಡಿ. ಲೋಕೇಶ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಯಶವಂತ್‌ಕುಮಾರ್ ಸ್ವಾಗತಿಸಿದರು. ಕೆ.ಎನ್. ಸಂತೋಷ್ ವಂದಿಸಿದರು. ಕೆ.ಎನ್. ದಿವ್ಯ ನಿರೂಪಿಸಿದರು.