ರೇವಣ್ಣ, ಎಚ್ಡಿಕೆ ಓದಿದ ಶಾಲೆಗೆ ನವೀಕರಣದ ಭಾಗ್ಯ
ಕ.ಪ್ರವಾರ್ತೆ , ಹೊಳೆನರಸೀಪುರ , ಆ.26
ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹಾಗೂ ಮಾಜಿ ಸಚಿವ, ಜೆಡಿಎಸ್ ನಾಯಕ ಎಚ್.ಡಿ.ರೇವಣ್ಣ ಅವರು ಓದಿದ ಪಟ್ಟಣದ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆಗೆ ಅಂತೂ ನವೀಕರಣದ ಭಾಗ್ಯ ಇದೀಗ ಒದಗಿ ಬಂದಿದೆ.
ಪಟ್ಟಣದ ಪುರಸಭಾ ಪಾರ್ಕ್ ಪಕ್ಕದಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ ಕಟ್ಟಡವು 1922ರಲ್ಲಿ ನಿರ್ಮಿಸಿದ್ದು, ಅತ್ಯಂತ ಹಳೆಯ ಕಟ್ಟಡವಾಗಿದ್ದು ಹಲವು ಕೊರತೆಗಳಿಂದ ಸೊರಗುತ್ತಿತ್ತು. ಈ ಕಾರಣದಿಂದಾಗಿ ಶಾಲೆ ಕಟ್ಟಡವನ್ನು ಅಭಿವೃದ್ಧಿಪಡಿಸುವ ಯೋಜನೆಯನ್ನು ಕೈಗೆತ್ತಿಕೊಂಡಿರುವ ಶಾಸಕ ಎಚ್.ಡಿ.ರೇವಣ್ಣ ಅವರು, ಸೋಮವಾರ ಶಾಲೆಗೆ ಖುದ್ದು ಭೇಟಿ ನೀಡಿ ಅಲ್ಲಿನ ಕೊರತೆ ಹಾಗೂ ಸಮಸ್ಯೆಗಳನ್ನು ಪರಿಶೀಲನೆ ನಡೆಸಿದರು.
ಈ ಸಂದರ್ಭದಲ್ಲಿ ಜಿಪಂ ಎಂಜಿನಿಯರಿಂಗ್ ವಿಭಾಗದ ಇಇ ನಾಗರಾಜ್, ಎಇಇ ಸುರೇಶ್ಬಾಬು ಇಂಜಿನಿಯರ್ ಪ್ರಭು, ಪ್ರಶಾಂತ್, ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಯೋಗೇಶ್, ತಾ.ಪಂ ಇಓ ತಮ್ಮಣ್ಣೇಗೌಡ ಮೊದಲಾದವರೊಂದಿಗೆ ಶಾಲೆ ಆವರಣದಲ್ಲಿಯೇ ದೀರ್ಘ ಚರ್ಚೆ ನಡೆಸಿದ ಶಾಸಕ ಎಚ್.ಡಿ.ರೇವಣ್ಣ ಅವರು, ಶಾಲೆಯ ಮುಂಭಾಗದಲ್ಲಿನ ಹಳೆಯ ವಾಸುಶಿಲ್ಪವನ್ನು ಹಾಗೆಯೇ ಉಳಿಸಿಕೊಂಡು ಶಿಥಿಲಾವಸ್ಥೆಯಲ್ಲಿರುವ ಕಟ್ಟಡದ ಹಿಂಬಾಗದ ಕೊಠಡಿಗಳನ್ನು ತೆರವುಗೊಳಿಸಿ ನೂತನ ಕೊಠಡಿಗಳ ನಿರ್ಮಾಣಕ್ಕೆ ಮುಂದಾಗುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಶಿಥಿಲವಾಗಿರುವ ಕೊಠಡಿಗಳನ್ನು ತೆರವುಗೊಳಿಸಿ, ಅದರಲ್ಲಿನ ಮರ ಮುಟ್ಟುಗಳನ್ನು ಹರಾಜು ಮಾಡಿ ಬಂದ ಹಣವನ್ನು ಶಾಲಾ ಅಭಿವೃದ್ಧಿಗೆ ಬಳಕೆ ಮಾಡಿಕೊಳ್ಳುವಂತೆ ತಿಳಿಸಿದರು. 36 ಲಕ್ಷ ರು. ಅನುದಾನದಲ್ಲಿ ನೂತನವಾಗಿ ಆರು ಕೊಠಡಿಗಳನ್ನು ನಿರ್ಮಿಸಲು ಸೂಚನೆ ನೀಡಿದರು.
ಪ್ರಸ್ತುತ ಇದೇ ಕಟ್ಟಡದಲ್ಲಿ ತಾತ್ಕಾಲಿಕವಾಗಿ ನಡೆಯುತ್ತಿರುವ ಬಾಲಕಿಯರ ಸರ್ಕಾರಿ ಸ್ವತಂತ್ರ ಪದವಿ ಪೂರ್ವ ಕಾಲೇಜನ್ನು ಪಟ್ಟಣದ ಹೌಸಿಂಗ್ ಬೋರ್ಡ್ ಬಡಾವಣೆಯಲ್ಲಿನ ಸರ್ಕಾರಿ ಶಾಲಾ ಕಟ್ಟಡಕ್ಕೆ ವರ್ಗಾಯಿಸುವಂತೆ ಸೂಚನೆ ನೀಡಿದರು.
ಶಾಲಾ ಕಟ್ಟಡದ ಮುಂಭಾಗದಲ್ಲಿನ ಕಟ್ಟಡದ ವಾಸ್ತುಶಿಲ್ಪಕ್ಕೆ ಧಕ್ಕೆಯಾಗದಂತೆ ಅಗತ್ಯವಾಗಿರುವ ದುರಸ್ಥಿ ಕಾರ್ಯವನ್ನು ಕೈಗೊಂಡು, ಸುಣ್ಣ-ಬಣ್ಣಗಳನ್ನು ಹಾಕಿ, ಅಗತ್ಯವಾದ ಮರಮುಟ್ಟುಗಳನ್ನು ಹಾಕುವಂತೆ ಗುತ್ತಿಗೆದಾರರಿಗೆ ಸೂಚನೆ ನೀಡಿದರು.
ಇದೇ ಕಟ್ಟಡದಲ್ಲಿ ನಡೆಯುತ್ತಿದ್ದ ಬಾಲಕಿಯರ ಸ್ವತಂತ್ರ ಪದವಿ ಪೂರ್ವ ಕಾಲೇಜಿನ ವಿಜ್ಞಾನ ವಿಭಾಗಕ್ಕೆ ಪ್ರಯೋಗಾಲಯ ಸಲಕರಣೆಗಳು ಹಾಗೂ ಪೀಠೋಪಕರಣ ಕೊಡಿಸಿಕೊಡುವುದಾಗಿ ರೇವಣ್ಣ ತಿಳಿಸಿದರು.