ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ರೇವಣ್ಣ ಕೃಪೆ ಇರೋರ ಆಯ್ಕೆ ಖಚಿತ

Vishwanath S
Updated On : 27 Aug 2013, 12:42 pm

ಹೊಳೆನರಸೀಪುರ: ಯಾರು ಏನೇ ಪ್ರಯತ್ನಿಸಿದರೂ, ತಿಪ್ಪರಲಾಗ ಹಾಕಿದರೂ ರೇವಣ್ಣೋರ ಕೃಪಾಕಟಾಕ್ಷ ಯಾರ ಮೇಲೆ ಬೀಳುತ್ತೋ ಅವರೇ ಅಧ್ಯಕ್ಷರಾಗೋದು ಗ್ಯಾರಂಟಿ ಎಂಬ ಮಾತು ಪಟ್ಟಣದಲ್ಲಿ ಎಲ್ಲರಿಗೂ ತಿಳಿದಿರುವ ಸತ್ಯವೇ ಆಗಿದೆ.
ಆದ್ದರಿಂದಲೇ ಪ್ರಸಕ್ತ ಪುರಸಭೆ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಗಳಿಗೆ ರಾಜ್ಯ ಸರ್ಕಾರ ಮೀಸಲಾತಿಯನ್ನು ನಿಗಧಿಗೊಳಿಸಿದ್ದರೂ, ಯಾರೊಬ್ಬರೂ ತಾನು ಅಧ್ಯಕ್ಷರಾಗಬೇಕು ಎಂದು ಮುಂದೆ ಬರುವ ಧೈರ್ಯ ತೋರುತ್ತಿಲ್ಲ.
ಇಲ್ಲಿನ ಪುರಸಭೆಗೆ ಆಯ್ಕೆಯಾಗಿರುವ ಬಹುತೇಕ ಜೆಡಿಎಸ್ ಸದಸ್ಯರೆಲ್ಲರೂ ಮಾಜಿ ಸಚಿವ, ಶಾಸಕ ಎಚ್.ಡಿ.ರೇವಣ್ಣ ಕೃಪಾಕಟಾಕ್ಷ ಬಲದಿಂದ ಪುರಸಭೆಗೆ ಆಯ್ಕೆಯಾದವರೇ ಹೊರತು, ಅವರ ಸ್ವಂತ ಬಲದಿಂದ ಅಥವಾ ಅದ್ವಿತೀಯ ಸಾಧನೆಯಿಂದ ಏನಲ್ಲ. ಈ ಸತ್ಯ ಖುದ್ದು ಸದಸ್ಯರಿಗೆ ತಿಳಿದಿರುವ ಕಾರಣದಿಂದಲೇ, ಯಾರೊಬ್ಬರೂ ಯಾವುದೇ ತೀರ್ಮಾನಗಳಿರಲಿ, ಯಾವುದೇ ಸ್ಥಾನಮಾನಗಳಿರಲಿ ರೇವಣ್ಣ ಕೊಟ್ಟರೆ ಉಂಟು, ಇಲ್ಲದಿದ್ದಲ್ಲಿ ಮೌನವೇ ಆಭರಣ.. ಎಂಬಂತೆ ಇದ್ದಾರೆ.
ರಾಜ್ಯ ಸರ್ಕಾರ ಅಂತೂ ಐದು ತಿಂಗಳ ನಂತರ ಸ್ಥಳೀಯ ಸಂಸ್ಥೆಗಳಿಗೆ ಮೀಸಲಾತಿ ನಿಗಧಿಗೊಳಿಸಿದ್ದು, ಇಲ್ಲಿನ ಪುರಸಭೆ ಅಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆಗೂ, ಉಪಾಧ್ಯಕ್ಷ ಸ್ಥಾನ ಪರಿಶಿಷ್ಟ ಜಾತಿಗೆ ಮೀಸಲುಗೊಳಿಸಿದೆ.  ಪುರಸಭೆಯ 23 ಸದಸ್ಯ ಬಲದ ಪೈಕಿ 16 ಸ್ಥಾನವನ್ನು ಜೆಡಿಎಸ್, 5 ಸ್ಥಾನ ಕಾಂಗ್ರೆಸ್ ಹಾಗೂ 2 ಸ್ಥಾನಗಳಲ್ಲಿ ಪಕ್ಷೇತರ ಅಭ್ಯರ್ಥಿಗಳು ಗೆದ್ದಿದ್ದಾರೆ.
16 ಸ್ಥಾನಗಳನ್ನು ಗಳಿಸಿ ಅಧಿಕಾರ ಗದ್ದುಗೆ ಹಿಡಿಯಲಿರುವ ಜೆಡಿಎಸ್‌ನಲ್ಲಿ ಸಾಮಾನ್ಯ ಮಹಿಳೆ ವರ್ಗದಿಂದ ವಾರ್ಡ್ ಸಂಖ್ಯೆ 8 ರಲ್ಲಿ ಎಚ್.ಆರ್.ಕಲಾವತಿ ಹಾಗೂ ವಾರ್ಡ್ ಸಂಖ್ಯೆ 16 ರಲ್ಲಿ ತುಳಸಿ ಎಚ್.ಜೆ.ಕುಮಾರ್ ಆಯ್ಕೆಯಾಗಿದ್ದಾರೆ. ಇನ್ನುಳಿದಂತೆ ವಾರ್ಡ್ 19ರಲ್ಲಿ ಕಾಂಗ್ರೆಸ್‌ನ ಯು.ಆರ್.ಚೈತ್ರ ಜಯ ಗಳಿಸಿದ್ದಾರೆ.
ಸಾಮಾನ್ಯ ಮಹಿಳಾ ವರ್ಗದಿಂದ ಯಾವುದೇ ವರ್ಗದ ಮಹಿಳೆ ಬೇಕಾದರೂ ಸ್ಪರ್ಧಿಸಬಹುದಾದ ಅವಕಾಶಗಳಿದ್ದರೂ, 16ನೇ ವಾರ್ಡ್‌ನಲ್ಲಿ ಗೆದ್ದಿರುವ ತುಳಸಿ ಅವರಿಗೆ ಅಧ್ಯಕ್ಷ ಸ್ಥಾನ ಸಿಗುವ ಸಾಧ್ಯತೆ ಕಡಿಮೆ. ಕಾರಣ ಕಳೆದ ಅವಧಿಯಲ್ಲಿ ಪುರಸಭೆಗೆ ವಿನೋದಗೋವಿಂದ ಅಧ್ಯಕ್ಷೆಯಾಗಿದ್ದು, ಗೋವಿಂದ ಅವರ ಸಹೋದರ ಪುರಸಭೆ ಮಾಜಿ ಸದಸ್ಯ ಎಚ್.ಜೆ.ಕುಮಾರ್ ಅವರ ಪತ್ನಿ ತುಳಸಿ ಈ ಬಾರಿ 16ನೇ ವಾರ್ಡ್‌ನಿಂದ ಆಯ್ಕೆಯಾಗಿರುವ ಕಾರಣದಿಂದ ಒಂದೇ ಕುಟುಂಬಕ್ಕೆ ಎರಡೆರಡು ಬಾರಿ ಅಧ್ಯಕ್ಷ ಸ್ಥಾನ ಸಿಗುವ ಸಾಧ್ಯತೆಗಳಿಲ್ಲ ಎನ್ನಲಾಗುತ್ತಿದೆ.
ಈ ಕಾರಣದಿಂದಾಗಿ 15 ನೇ ವಾರ್ಡ್‌ನಿಂದ ಪರಿಶಿಷ್ಟ ಮಹಿಳೆ ವರ್ಗದಿಂದ ಆಯ್ಕೆಯಗಿರುವ ಎನ್.ಲಕ್ಷ್ಮಿ ಅವರಿಗೆ ಮೊದಲ ಅವಕಾಶ ಸಿಗುವ ಲಕ್ಷಣಗಳು ದಟ್ಟವಾಗಿವೆ. ಇದು ಸಾಧ್ಯವಾಗದಿದ್ದ ಪಕ್ಷದಲ್ಲಿ 8 ನೇ ವಾರ್ಡ್‌ನಿಂದ ಆಯ್ಕೆಯಾಗಿರುವ ಎಚ್.ಆರ್.ಕಲಾವತಿ ಮೊದಲ ಅವಧಿಗೆ ಅಧ್ಯಕ್ಷೆಯಾಗುವ ಅವಕಾಶ ಗಿಟ್ಟಿಸಿಕೊಂಡರೂ ಅಚ್ಚರಿಯಿಲ್ಲ ಎಂಬ ಮಾತುಗಳು ಕೇಳಿಬರುತ್ತಿದೆ.
ಇನ್ನುಳಿದಂತೆ ಉಪಾಧ್ಯಕ್ಷ ಸ್ಥಾನಕ್ಕೆ ಹೆಚ್ಚಿನ ಪೈಪೋಟಿ ಇಲ್ಲದಿದ್ದರೂ ಜೆಡಿಎಸ್‌ನಿಂದ 13 ಮತ್ತು 23ನೇ ವಾರ್ಡ್‌ನ ಕೇವಲ ಇಬ್ಬರು ಸದಸ್ಯರು ಮಾತ್ರವೇ ಪರಿಶಿಷ್ಟ ಜಾತಿಯಿಂದ ಆಯ್ಕೆಯಾಗಿದ್ದಾರೆ. 13 ನೇ ವಾರ್ಡ್‌ನಿಂದ ಪಟ್ಟಣದ ಎಲ್ಲಾ ವಾರ್ಡ್‌ಗಳ ಅಭ್ಯರ್ಥಿಗಳಿಗಿಂತಲೂ ಹೆಚ್ಚಿನ ಅಂತರದಿಂದ ಜಯಗಳಿಸಿರುವ ಜೆಡಿಎಸ್‌ನ ಎಚ್.ಎಸ್.ಸ್ವಾಮಿ ಹಾಗೂ ಎರಡನೇ ಬಾರಿಗೆ ಪುರಸಭೆಗೆ ಆಯ್ಕೆಯಾಗಿರುವ 23 ನೇ ವಾರ್ಡ್‌ನನ ಎಚ್.ಕೆ.ರಘುರಾಮ್ ಅವರ ನಡುವೆ ಪೈಪೋಟಿ ಇಲ್ಲದೇ ಇದ್ದರೂ ಮೊದಲ ಅವಧಿಗೆ ಯಾರು ಉಪಾಧ್ಯಕ್ಷರಾಗುತ್ತಾರೆ ಎಂಬುದಷ್ಟೇ ಈಗ ಉಳಿದಿರುವ ಕುತೂಹಲ.
ಎಚ್.ಎಸ್.ಸ್ವಾಮಿ ಕಾಂಗ್ರೆಸ್ ತೊರೆದು ಜೆಡಿಎಸ್ ಸೇರಿ ಸದಸ್ಯರಾಗಿದ್ದಾರೆ. ಆದರೆ ಎಚ್.ಕೆ.ರಘುರಾಮ್ ಜೆಡಿಎಸ್‌ನಿಂದಲೇ ಎರಡು ಬಾರಿ ಆಯ್ಕೆಯಾಗಿರುವ ಸೌಮ್ಯ ಸ್ವಭಾವದ ಹಾಗೂ ಇದ್ದುದರಲ್ಲಿ ತೀರಾ ಸಾಮಾನ್ಯ ಮನುಷ್ಯ ಎಂಬ ಹಣೆಪಟ್ಟಿ ಹೊತ್ತಿರುವ ಸದಸ್ಯನಾಗಿರುವ ಕಾರಣದಿಂದ ಮೊದಲ ಅವಧಿಯ ಉಪಾಧ್ಯಕ್ಷ ಸ್ಥಾನ ರಘುರಾಮ್‌ಗೆ ಲಭಿಸಿದರೂ ಅಚ್ಚರಿಯಿಲ್ಲ.

-ಎಚ್.ಡಿ.ಗುರುಪ್ರಸಾದ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement