ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ: ಶಿಕ್ಷಕ ಬಂಧನ, ಅಮಾನತು
ಹಾಸನ: 7ನೇ ತರಗತಿ ವಿದ್ಯಾರ್ಥಿನಿಗೆ ಶಿಕ್ಷಕನೊಬ್ಬ ಲೈಂಗಿಕ ಕಿರುಕುಳ ನೀಡಿರುವ ಘಟನೆ ತಾಲೂಕಿನ ಕೆಂಚಮಾರನಹಳ್ಳಿಯಲ್ಲಿ ಸೋಮವಾರ ತಡವಾಗಿ ಬೆಳಕಿಗೆ ಬಂದಿದೆ.
ಈ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಭಾಸ್ಕರ್ (45) ಎಂಬಾತನೇ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿ ಈಗ ಪೊಲೀಸರ ಅತಿಥಿಯಾಗಿರುವ ಶಿಕ್ಷಕ.
ಶಾಲೆಯ 7ನೇ ತರಗತಿ ವಿದ್ಯಾರ್ಥಿನಿಯೊಬ್ಬಳು ಶಾಲೆಗೆ ತೆರಳುತ್ತಿದ್ದಾಗ, ಶಿಕ್ಷಕ ಭಾಸ್ಕರ್ ಕಳೆದ ಒಂದು ವಾರದಿಂದ ವಿದ್ಯಾರ್ಥಿನಿಯೊಂದಿಗೆ ಅಸಭ್ಯವಾಗಿ ವರ್ತಿಸಿದ್ದಾರೆ. ವಿದ್ಯಾರ್ಥಿನಿಯನ್ನು ಕೊನೆಯ ಬೆಂಚಿನಲ್ಲಿ ಕೂರುವಂತೆ, ಸ್ಟೋರ್ ರೂಮ್ನ ಬಾಗಿಲು ತೆಗೆಯುವಂತೆ ಒತ್ತಾಯಿಸುತ್ತಿದ್ದ. ಹಾಗೂ ವಿದ್ಯಾರ್ಥಿನಿಯ ಮೈ ಕೈ ಮುಟ್ಟಿ ಮಾತನಾಡಿಸುತ್ತಿದ್ದ ಎಂದೂ ಆರೋಪಿಸಲಾಗಿದೆ.
ಅಲ್ಲದೆ ವಿದ್ಯಾರ್ಥಿನಿಯನ್ನು ತನ್ನ ಬೈಕ್ನಲ್ಲಿ ಕೂರುವಂತೆಯೂ ಪೀಡಿಸುತ್ತಿದ್ದರಿಂದ ವಿದ್ಯಾರ್ಥಿನಿ ಶಾಲೆಗೆ ಹೋಗಲು ಹಿಂಜರಿದಿದ್ದಾಳೆ. ಇದನ್ನು ಪ್ರಶ್ನಿಸಿದ ಪೋಷಕರಿಗೆ ವಿದ್ಯಾರ್ಥಿನಿ ತನ್ನ ಶಾಲೆಯ ಶಿಕ್ಷಕ ಮಾಡುತ್ತಿದ್ದ ಕಾಮಚೇಷ್ಟೆಯನ್ನು ತಿಳಿಸಿದ್ದಾಳೆ. ವಿಷಯ ತಿಳಿದ ಪೋಷಕರು ಗ್ರಾಮಸ್ಥರ ಗಮನಕ್ಕೆ ತಂದಿದ್ದಾರೆ.
ನಂತರ ಗ್ರಾಮಸ್ಥರೆಲ್ಲ ಸೋಮವಾರ ಶಾಲೆಗೆ ಭೇಟಿ ನೀಡಿ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದ ಶಿಕ್ಷಕ ಭಾಸ್ಕರ್ನನ್ನು ಹಿಡಿದು ಹಿಗ್ಗಾಮಗ್ಗಾ ಥಳಿಸಿ, ಧರ್ಮದೇಟು ನೀಡುತ್ತಾರೆ. ಅಷ್ಟರಲ್ಲಿ ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಹಾಸನ ಗ್ರಾಮಾಂತರ ಪೊಲೀಸರು ಭಾಸ್ಕರ್ನನ್ನು ಬಂಧಿಸಿದ್ದಾರೆ. ಶಿಕ್ಷಕನ ವಿರುದ್ಧ ಪೋಷಕರು ಹಾಸನ ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಯ ವಿರುದ್ಧ ಕ್ರಮ ಕೈಗೊಂಡಿದ್ದಾರೆ.
ಶಿಕ್ಷಕ ಅಮಾನತು: ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದ ಆರೋಪದ ಮೇಲೆ ಶಿಕ್ಷಕ ಭಾಸ್ಕರ್ನನ್ನು ಅಮಾನತು ಮಾಡಿರುವುದಾಗಿ ಹಾಗೂ ಆತನ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಡಿಡಿಪಿಐ ಬಸವರಾಜು ತಿಳಿಸಿದ್ದಾರೆ.