ವಿಹಿಂಪ ನಾಯಕರ ಬಂಧಮುಕ್ತಕ್ಕೆ ಆಗ್ರಹಿಸಿ ಪ್ರತಿಭಟನೆ
ಕ.ಪ್ರ.ವಾರ್ತೆ , ಹಾಸನ , ಆ. 26
ವಿಶ್ವ ಹಿಂದೂ ಪರಿಷತ್ ಹಾಗೂ ಬಿಜೆಪಿ ನಾಯಕರನ್ನು ಬಂಧಿಸಿರುವ ಉತ್ತರ ಪ್ರದೇಶದ ಸಮಾಜವಾದಿ ಪಕ್ಷದ ಸರ್ಕಾರದ ಕ್ರಮವನ್ನು ಖಂಡಿಸಿ ಜಿಲ್ಲಾ ವಿಶ್ವಹಿಂದೂ ಪರಿಷತ್ ಕಾರ್ಯಕರ್ತರು ಸೋಮವಾರ ನಗರದಲ್ಲಿ ಪ್ರತಿಭಟನೆ ನಡೆಸಿದರು.
ಪ್ರತಿಭಟನಾಕಾರರು ನಗರದ ಹೇಮಾವತಿ ಪ್ರತಿಮೆ ಮುಂದೆ ಉತ್ತರ ಪ್ರದೇಶದ ಸಮಾಜವಾದಿ ಪಕ್ಷದ ನೀತಿಯನ್ನು ಖಂಡಿಸಿ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಉತ್ತರ ಪ್ರದೇಶದ ಆಯೋಧ್ಯೆಯ ವಿವಾದ ಸ್ಥಳದಿಂದ ಯಾತ್ರೆ ನಡೆಸುವುದಾಗಿ ಹೇಳಿದ್ದ ವಿಶ್ವ ಹಿಂದೂ ಪರಿಷತ್ ಪ್ರಮುಖ ನಾಯಕರಾದ ಪ್ರವೀಣ್‌ತೊಗಾಡಿಯಾ, ಅಶೋಕ್‌ಸಿಂಘಾಲ್, ಬಿಜೆಪಿ ನಾಯಕ ರಾಮ್
ವಿಲಾಸ್ ವೇದಾಂತಿ, ಶಾಸಕ ರಾಮಚಂದ್ರ ಯಾದವ್ ಸೇರಿದಂತೆ 1600 ಕ್ಕೂ ಹೆಚ್ಚು ಕಾರ್ಯಕರ್ತರನ್ನು ಉತ್ತರ ಪ್ರದೇಶ ಸರ್ಕಾರ ಪ್ರತಿಭಟನೆ ನಡೆಸುವ ಮುನ್ನವೆ ಬಂಧಿಸಿದ್ದು ಸರಿಯಾದ ಕ್ರಮವಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪರಿಷತ್‌ನ ಈ ಯಾತ್ರೆಯು ಯಾವುದೇ ರಾಜಕೀಯ ಉದ್ದೇಶ ಹೊಂದಿರಲಿಲ್ಲ. ಧಾರ್ಮಿಕ ಯಾತ್ರೆಯನ್ನು ತಡೆಯುವ ಸರ್ಕಾರದ ಕ್ರಮ ಖಂಡನೀಯ. ದೇಶದಲ್ಲಿ ಯಾತ್ರೆ ನಡೆಸುವಂತಹ ಹಕ್ಕನ್ನು ಜನರು ಹೊಂದಿದ್ದಾರೆ. ಅದನ್ನು ತಡೆಯುವ ಮೂಲಕ ಉತ್ತರ ಪ್ರದೇಶ ಸರ್ಕಾರ ಪ್ರಜಾಪ್ರಭುತ್ವದ ವಿರುದ್ಧವಾಗಿ ನಡೆದು ಕೊಳ್ಳುತ್ತಿದ್ದೆ. ಇದು ರಾಜಕೀಯ ಯಾತ್ರೆ ಅಲ್ಲದಿದ್ದರೂ ಉದ್ದೇಶ ಪೂರ್ವಕವಾಗಿ ನಾಯಕರನ್ನು ಬಂಧಿಸಲಾಗಿದೆ ಎಂದು ದೂರಿದರು.
ಬಂಧಿತ ನಾಯಕರನ್ನೆಲ್ಲ ಈಗಾಗಲೇ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಧಾರ್ಮಿಕ ಯಾತ್ರೆಯನ್ನು ನಡೆಸಲು ಉದ್ದೇಶಿಸಿದ್ದ ನಾಯಕರನ್ನು ಏಕಾಏಕಿ ಯಾವುದೇ ಸೂಚನೆ ನೀಡದೇ ಬಂಧಿಸಿರುವುದು ಸರಿಯಲ್ಲ ಎಂದೂ ಆರೋಪಿಸಿದರು.
ವಿಶ್ವ ಹಿಂದೂ ಪರಿಷತ್ ಹಾಗೂ ಬಿಜೆಪಿ ನಾಯಕರನ್ನು ಕೂಡಲೇ ಬಂಧಮುಕ್ತಗೊಳಿಸಬೇಕು. ಇಲ್ಲವಾದಲ್ಲಿ ಇದರ ವಿರುದ್ಧ ದೇಶಾದ್ಯಂತ ಉಗ್ರ ಹೋರಾಟ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದರು. ಪ್ರತಿಭಟನೆಯಲ್ಲಿ ವಿಶ್ವ ಹಿಂದೂ ಪರಿಷತ್‌ನ ಶ್ರೀನಿವಾಸಗೌಡ, ಕಟ್ಟಾಯ ಶಿವಕುಮಾರ್, ಮಂಜುನಾಥ್ ಶರ್ಮಾ, ರವಿ ಇತರರು ಇದ್ದರು.