ಶುಂಠಿ ಬೆಳೆ ಸುಧಾರಿತ ಬೇಸಾಯ ಕುರಿತು ಉಪನ್ಯಾಸ
ಹಾಸನ: ಕೃಷಿ ಮಹಾವಿದ್ಯಾಲಯ, ಕೃಷಿ ಇಲಾಖೆ ಮತ್ತು ಇಂಡೋಫಿಲ್ ಕಂಪನಿ ಆಶ್ರಯದಲ್ಲಿ ಗ್ರಾಮೀಣ ಕೃಷಿ ಕಾರ್ಯಾನುಭವ ಶಿಬಿರದ ಅಡಿಯಲ್ಲಿ ಶುಂಠಿ ಬೆಳೆಯ ಸುಧಾರಿತ ಬೇಸಾಯ ಕ್ರಮಗಳ ಬೆಳೆ ಉಪನ್ಯಾಸ ಕಾರ್ಯಕ್ರಮ ಮರ್ಕುಲಿ ಗ್ರಾಮದಲ್ಲಿ ಏರ್ಪಡಿಸಲಾಗಿತ್ತು.
ಕೃಷಿ ಮಹಾವಿದ್ಯಾಲಯ ಪ್ರಾಧ್ಯಾಪಕರು, ತೋಟಗಾರಿಕಾ ತಜ್ಞ ಸಿದ್ದಗಂಗಯ್ಯ, ತಳಿ ತಜ್ಞ ಡಾ. ಮಹಾದೇವು, ಕೊಯ್ಲೋತ್ತರ ಸಂಸ್ಕರಣಾ ವಿಧಾನಗಳ ತಜ್ಞ ಡಾ.ನಟರಾಜ್, ಗ್ರಾಮೀಣ ಕೃಷಿ ಕಾರ್ಯಾನುಭವ ಶಿಬಿರದ ಸಹ ಸಂಯೋಜಕ ಡಾ. ಜಿ. ನಾಗೇಶ್ ಇದ್ದರು. ಬ್ಯಾಡರ ಗೌಡಪ್ಪ ಅಧ್ಯಕ್ಷತೆ ವಹಿಸಿದ್ದರು. ಮುಖಂಡ ತಿಮ್ಮಪ್ಪೇಗೌಡ ಮುಖ್ಯ ಅತಿಥಿಯಾಗಿದ್ದರು.
ಅಂತಿಮ ವರ್ಷದ ಬಿ.ಎಸ್ಸಿ ಕೃಷಿ ವಿದ್ಯಾರ್ಥಿಗಳು ಶುಂಠಿ ಸುಧಾರಿತ ಬೇಸಾಯ ಕ್ರಮಗಳ ಬಗ್ಗೆ ವಿಚಾರ ಸಂಕಿರಣ ನಡೆಸಿಕೊಟ್ಟರು. ರೈತರ ಸಂದೇಹಗಳಿಗೆ ತಜ್ಞರು ಉತ್ತರಿಸಿದರು. ಗೌಡಪ್ಪ ಮಾತನಾಡಿ, ಇಂದು ಕೃಷಿ ಇಲಾಖೆಯೇ ರೈತರ ಮನೆ ಬಾಗಿಲಿಗೆ ಬಂದಿದೆ. ಅದನ್ನು ರೈತರು ಸದುಪಯೋಗಪಡಿಸಿಕೊಳ್ಳಬೇಕು ಎಂದರು. ಕಾರ್ಯಕ್ರಮದಲ್ಲಿ ಸುಮಾರು 300 ರೈತರು ಪಾಲ್ಗೊಂಡಿದ್ದರು.