ಸರ್ಕಾರದ ನೂರು ದಿನ, ನೂರಾರು ನಿರ್ಣಯ ಪುಸ್ತಕ ಬಿಡುಗಡೆ
ಕ.ಪ್ರ.ವಾರ್ತೆ , ಹಾಸನ , ಆ. 26
ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಕಾಂಗ್ರೆಸ್ ಸರ್ಕಾರ ನೂರು ದಿನ ಪೂರೈಸಿದ ಹಿನ್ನೆಲೆಯಲ್ಲಿ ಸರ್ಕಾರ ಈ ಅವಧಿಯಲ್ಲಿ ಜಾರಿಗೆ ತಂದಿರುವ ಹೊಸ ಯೋಜನೆಗಳು, ಕಾರ್ಯಕ್ರಮಗಳನ್ನು ತಿಳಿಸುವ ನೂರು ದಿನ-ನೂರಾರು ನಿರ್ಣಯ ನಾಡಿನ ನಾಳೆಯ ನೋಟ ಎಂಬ ಪುಸ್ತಕವನ್ನು ಜಿಲ್ಲಾಧಿಕಾರಿ ವಿ.ಅನ್ಬುಕುಮಾರ್ ಸೋಮವಾರ ಬಿಡುಗಡೆ ಮಾಡಿದರು.
ಅನ್ಬುಕುಮಾರ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರಾಜ್ಯ ಸರ್ಕಾರ 100 ದಿನ ಪೂರೈಸಿದ್ದು ಅನ್ನಭಾಗ್ಯ, ಕ್ಷೀರಭಾಗ್ಯ, ಮೈತ್ರಿ, ಮನಸ್ವಿನಿ ಸೇರಿದಂತೆ ಹಲವಾರು ಪ್ರಮುಖ ಯೋಜನೆಗಳನ್ನು ರೂಪಿಸಿ ಜಾರಿಗೆ ತಂದಿದೆ.
ಜಿಲ್ಲೆಯಲ್ಲಿ 3,76,171 ಬಿಪಿಎಲ್ ಕುಟುಂಬ ಹಾಗೂ 23,832 ಅಂತ್ಯೋದಯ ಕುಟುಂಬ ಸೇರಿದಂತೆ ಒಟ್ಟು 4,00,003 ಪಡಿತರ ಚೀಟಿದಾರರು ಈ ಸೌಲಭ್ಯ ಪಡೆಯುತ್ತಿದ್ದಾರೆ. ಆರೋಗ್ಯವಂತ ಮಕ್ಕಳಿಗಾಗಿ ಕ್ಷೀರ ಭಾಗ್ಯ ಯೋಜನೆ ಜಾರಿಗೆ ತಂದಿದೆ. ರಾಜ್ಯಾದ್ಯಂತ 62 ಲಕ್ಷ ಮಕ್ಕಳಿಗೆ ಹಾಲು ವಿತರಿಸಲಾಗುತ್ತಿದೆ. ಜಿಲ್ಲೆಯಲ್ಲಿ 1,68,152 ಶಾಲಾ ಮಕ್ಕಳು ಹಾಗೂ 94,515 ಅಂಗನವಾಡಿ ಮಕ್ಕಳೂ ಸೇರಿದಂತೆ ಒಟ್ಟು 2,62,667 ಮಕ್ಕಳು ಈ ಯೋಜನೆಯ ಸದುಪಯೋಗ ಪಡೆಯುತ್ತಿದ್ದಾರೆ ಯಾವುದೇ ಶಾಲೆ ಅಥವಾ ಅಂಗನವಾಡಿಗಳಲ್ಲಿ ಹಾಲಿನ ಪುಡಿಯ ಕೊರತೆ ಇಲ್ಲದಂತೆ ಜಿಲ್ಲಾಡಳಿತ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದೆ ಎಂದು ಹೇಳಿದರು.
ಹೆಣ್ಣು ಮಕ್ಕಳ ಶಾಲೆ ದಾಖಲಾತಿಗೆ ಪ್ರೋತ್ಸಾಹ: ರಾಜ್ಯಾದ್ಯಂತ ಸರ್ಕಾರಿ ಶಾಲೆಗಳಿಗೆ ಒಂದನೇ ತರಗತಿಗೆ ಹೆಣ್ಣು ಮಕ್ಕಳ ದಾಖಲಾತಿಗೆ ಉತ್ತೇಜಿಸಲು ಪ್ರತಿದಿನದ ಹಾಜರಾತಿಗೆ 2 ರು. ಪ್ರೋತ್ಸಾಹಧನ ನೀಡಲಾಗುವುದು. ಶೀಘ್ರದಲ್ಲೇ ಇದರ ಅನುಷ್ಠಾನ ಪ್ರಾರಂಭವಾಗಲಿದೆ. ಜಿಲ್ಲೆಯಲ್ಲಿ 302 ಅಪೌಷ್ಠಿಕ ಮಕ್ಕಳಿದ್ದು ಅವರಿಗೆ ವಿಶೇಷ ಪೌಷ್ಠಿಕ ಆಹಾರ ಯೋಜನೆಯಡಿ ಪೌಷ್ಠಿಕ ಆಹಾರ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ಮಾಹಿತಿ ನೀಡಿದರು.
40 ವರ್ಷ ಮೇಲ್ಪಟ್ಟ ವಿಧವೆ ಮತ್ತು ಬಡತನ ರೇಖೆಗಿಂತ ಕೆಳಗಿರುವ ವಿವಾಹ ವಿಚ್ಛೇದಿತ ಮಹಿಳೆಯರಿಗೆ ಮಾಸಿಕ 500 ರು. ನೀಡುವ ಮನಸ್ವಿನಿ ಯೋಜನೆ ಜಾರಿಗೆ ತರಲಾಗಿದೆ. ಲಿಂಗ ಅಲ್ಪಸಂಖ್ಯಾತರಿಗೆ ಮಾಸಿಕ 500 ರು.ನೀಡುವ ಮೈತ್ರಿ ಯೋಜನೆ ಜಾರಿಗೊಳಿಸಲಾಗಿದೆ. ಅಂಬೇಡ್ಕರ ಅಭಿವೃದ್ಧಿ ನಿಗಮದಿಂದ ಸಾಲ ಮನ್ನಾ ಯೋಜನೆಯಡಿ ಪರಿಶಿಷ್ಟ ವರ್ಗದ 110 ಫಲಾನುಭವಿಗಳ 27 ಲಕ್ಷ ಸಾಲ ಮನ್ನಾ ಆಗಿದೆ. ಪರಿಶಿಷ್ಟ ಜಾತಿಯ 6455 ಫಲಾನುಭವಿಗಳ 9,85 ಕೋಟಿ ರೂ ಸಾಲ ಮನ್ನಾ ಆಗಿದೆ.
ತಾಲೂಕು ಆಸ್ಪತ್ರೆಯಲ್ಲಿ ಡಯಾಲಿಲಿಸ್ ಘಟಕ: ದೇವರಾಜ ಅರಸು ಅಭಿವೃದ್ಧಿ ನಿಗಮದಿಂದ ಹಿಂದುಳಿದ ವರ್ಗಗಳ 18,348 ಫಲಾನುಭವಿಗಳಿಗೆ 15.33 ಕೋಟಿ ರು. ಸಾಲ ಮನ್ನಾ ಮಾಡಿದೆ. ಜಿಲ್ಲೆಯಲ್ಲಿ ಅಲ್ಪಸಂಖ್ಯಾತ 2776 ಫಲಾನುಭಾವಿಗಳಿಗೆ 6.12 ಕೋಟಿ ರು. ಸಾಲ ಮನ್ನಾ ಆಗಿದೆ. ಗ್ರಾಮೀಣ ಹಾಗೂ ದುರ್ಗಮ ಪ್ರದೇಶದ ಜನರಿಗೆ ಸಾಮಾನ್ಯ ಕಾಯಿಲೆಗಳಿಗೆ ಮಾಹಿತಿ ನೀಡಲು ಆರೋಗ್ಯ ಸಹಾಯಕವಾಣಿ-104 ಪ್ರಾರಂಭಿಸಲಾಗಿದೆ. ಪ್ರತಿ ಜಿಲ್ಲೆಯ ಒಂದು ತಾಲೂಕು ಆಸ್ಪತ್ರೆಯಲ್ಲಿ ಡಯಾಲಿಸಿಸ್ ಘಟಕ ತೆರೆಯಲಾಗುವುದು.
ಐರಾವತ, ರಾಜಹಂಸ ಮತ್ತು ನೂತನ ನಗರ ಸಾರಿಗೆ ವಾಹನ ಸೇರಿದಂತೆ ಒಟ್ಟು 571 ಹೊಸ ವಾಹನಗಳು ಈ ಅವಧಿಯಲ್ಲಿ ಸೇರ್ಪಡೆಗೊಂಡಿವೆ. ರಾಯಚೂರು, ಹೊಸಪೇಟೆ, ಕಾರವಾರ, ಮಂಗಳೂರು, ಹಾಸನ ಮತ್ತು ಹುಮನಾಬಾದ್ನಲ್ಲಿ ಟ್ರಕ್ಟರ್ಮಿನಲ್ಗಳನ್ನು ನಿರ್ಮಿಸಲಾಗುವುದು.
ರಾಜ್ಯಾದ್ಯಂತ ಪೊಲೀಸ್ ಇಲಾಖೆಯನ್ನು ಮತ್ತಷ್ಟು ಬಲಪಡಿಸಲು ಒತ್ತು ನೀಡಲಾಗಿದೆ. 51 ಕೋಟಿ ರು. ವೆಚ್ಚದಲ್ಲಿ 32 ಹೊಸ ಪೊಲೀಸ್ ಠಾಣೆಗಳನ್ನು ತೆರೆಯಲಾಗುತ್ತಿದೆ. ಎಲ್ಲಾ ಜಿಲ್ಲೆಗಳಲ್ಲಿ ಹೆದ್ದಾರಿ ಗಸ್ತು ವಾಹನಗಳನ್ನು ಸೇರ್ಪಡೆಗೊಳಿಸಲಾಗುತ್ತಿದೆ. ಬೆಂಗಳೂರು, ಮೈಸೂರು, ಮಂಗಳೂರು, ಬೆಳಗಾವಿ ಮತ್ತು ಹುಬ್ಬಳಿ ದಾರವಾಡಗಳನ್ನು 150 ಕೋಟಿ ರು. ವೆಚ್ಚದಲ್ಲಿ ಸುರಕ್ಷಿತ ನಗರಗಳನ್ನಾಗಿ ಪರಿವರ್ತಿಸಲು ಯೋಜನೆಯನ್ನು ರೂಪಿಸಲಾಗಿದೆ.
13,755 ಟನ್ ರಸಗೊಬ್ಬರ ದಾಸ್ತಾನು: ಸಹಕಾರ ಸಂಸ್ಥೆಗಳಿಂದ ರೈತರು ಪಡೆಯುವ 2 ಲಕ್ಷದವರೆಗಿನ ಸಾಲಕ್ಕೆ ಶೂನ್ಯ ಬಡ್ಡಿ, 2ರಿಂದ 3 ಲಕ್ಷದವರೆಗೆಗಿನ ಸಾಲಕ್ಕೆ ಶೇಕಡ 1ರ ಬಡ್ಡಿಯಂತೆ ಅಲ್ಪಾವಧಿ ಸಾಲ ನೀಡಲಾಗುತ್ತಿದೆ. 10ಲಕ್ಷದವರೆಗಿನ ಮಧ್ಯಮಾವಧಿ ಮತ್ತು ದೀರ್ಘಾವಧಿ ಸಾಲಗಳಿಗೆ ಶೇ.3 ರ ಬಡ್ಡಿ ದರವನ್ನು ಮುಂದುವರಿಸಲಾಗಿದೆ.
ಜಿಲ್ಲೆಯಲ್ಲಿ 90,540 ಟನ್ ರಸಗೊಬ್ಬರ ಸರಬರಾಜಾಗಿದ್ದು 76,790 ಟನ್ ವಿತರಣೆಯಾಗಿದೆ. ಹಾಲಿ 13,755 ಟನ್ ದಾಸ್ತಾನಿದೆ. ಪ್ರತಿ ಲೀ.ಹಾಲಿಗೆ ನೀಡಲಾಗುತ್ತಿದ್ದ 2 ರು. ಪ್ರೋತ್ಸಾಹಧನವನ್ನು 4 ರು.ಗಳಿಗೆ ಹೆಚ್ಚಳ ಮಾಡಲಾಗಿದ್ದು ಇದಕ್ಕಾಗಿ ರಾಜ್ಯದಾದ್ಯಂತ 818 ಕೋಟಿ ರು.ವೆಚ್ಚ ಮಾಡಲಾಗುತ್ತಿದೆ. ಜಿಲ್ಲೆಯಲ್ಲಿ 59749 ಮಂದಿಗೆ ಇದರಿಂದ ಲಾಭವಾಗಲಿದೆ. ಕುರಿ, ಮೇಕೆ ಅಕಸ್ಮಿಕ ಸಾವಿಗೀಡಾದಲ್ಲಿ ತಲಾ 3 ಸಾವಿರ ರು. ಪರಿಹಾರ ಧನ ನೀಡುವ ಯೋಜನೆ ಜಾರಿಗೊಳಿಸಲಾಗಿದೆ.
ಪ್ರವಾಸೋದ್ಯಮಕ್ಕೆ ಒತ್ತು ನೀಡಲಾಗಿದೆ. ಇದಕ್ಕಾಗಿ 60 ಕೋಟಿ ರು.ಗಳನ್ನು ಒದಗಿಸಲಾಗಿದೆ. ಈಲ್ಲೆಯಲ್ಲಿ ಮಂಜರಾಬಾದ್ ಕೋಟೆ, ಚನ್ನರಾಯಪಟ್ಟಣ ತಾ. ಬೆಲಸಿಂದ ಅರಣ್ಯ ಪ್ರದೇಶ ಸ್ಭೆರಿದಂತೆ ವಿವಿಧ ಪ್ರವಾಸೋದ್ಯಮ ಸ್ಥಳಗಳ ಅಭಿವೃದ್ಧಿಗೆ ಯೋಜನೆ ರೂಪಿಸಲಾಗಿದೆ. ಎತ್ತಿನಹೊಳೆ ಯೋಜನೆಗಾಗಿ 1000 ಕೋಟಿ ರು.ಗಳನ್ನು ಒದಗಿಸಲಾಗಿದ್ದು ಈ ಮೂಲಕ ಬೆಂಗಳೂರು, ಕೋಲಾರ ಮತ್ತು ತುಮಕೂರು ಜಿಲ್ಲೆಗಳಿಗೆ ಕುಡಿಯುವ ನೀರು ಪೂರೈಕೆಯಾಗಲಿದೆ.
ಜಿಲ್ಲಾ ಎಸ್ಪಿ ರವಿ ಡಿ.ಚನ್ನಣ್ಣನವರ್, ಜಿಪಂ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಉಪೇಂದ್ರ ಪ್ರತಾಪಸಿಂಗ್, ಪ್ರೊಬೇಷನರಿ ಐಎಎಸ್ ಅಧಿಕಾರಿ ರಾಮಚಂದ್ರ ಇದ್ದರು.
ಜಿಲ್ಲೆಯಲ್ಲಿ ಅತಿವೃಷ್ಟಿ: ಪರಿಹಾರ ಕಾಮಗಾರಿಗೆ ರು. 3 ಕೋಟಿ ಬಿಡುಗಡೆ
ಹಾಸನ: ಅತಿಯಾದ ಮಳೆಯಿಂದಾಗಿ ಜಿಲ್ಲೆಯಲ್ಲಿ ಅತಿವೃಷ್ಟಿ ಉಂಟಾಗಿದ್ದು, ಇದರ ಪರಿಹಾರ ಕಾರ್ಯಗಳಿಗೆ ಸರ್ಕಾರದಿಂದ 3 ಕೋಟಿ ರು. ಬಿಡುಗಡೆಯಾಗಿದ್ದು, ತುರ್ತು ಕಾಮಗಾರಿಗಳನ್ನು ಈಗಾಗಲೇ ಕೈಗೊಂಡಿರುವುದಾಗಿ ಜಿಲ್ಲಾಧಿಕಾರಿ ವಿ.ಅನ್ಬುಕುಮಾರ್ ತಿಳಿಸಿದರು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಿಲ್ಲೆಯಲ್ಲಿ ಅತಿಯಾದ ಮಳೆಯಿಂದ ಬೆಳೆ ಮತ್ತು ಸಾಕಷ್ಟು ಮನೆಗಳು ಹಾನಿಗೊಂಡಿದ್ದು, ಪರಿಹಾರ ಕಾಮಗಾರಿಗಳನ್ನು ಕೈಗೊಳ್ಳಲು ತಹಸೀಲ್ದಾರರಿಗೆ ಸೂಚಿಸಲಾಗಿದೆ. ಹಾಗೂ ಅರಸೀಕೆರೆಯಲ್ಲಿ ಗೋಶಾಲೆ ತೆರೆಯಲು ಆದೇಶಿಸಿರುವುದಾಗಿ ಹೇಳಿದರು.
50 ಸಾವಿರ ರು. ಪರಿಹಾರ: ಹೇಮಾವತಿ ಜಲಾಶಯದ ಹಿನ್ನೀರಿನಲ್ಲಿ ಮೀನು ಹಿಡಿಯಲು ಹೋದ ಸಂದರ್ಭದಲ್ಲಿ ದೋಣಿ ಮುಳುಗಿ ಸಾವನ್ನಪ್ಪಿದ ಮೂವರು ಮೀನುಗಾರರ ಕುಟುಂಬಕ್ಕೆ 50 ಸಾವಿರ ರು.ಪರಿಹಾರ ನೀಡಲಾಗಿದೆ. ಮೀನುಗಾರರ ಸುರಕ್ಷತೆ ಬಗ್ಗೆಯೂ ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು.
ಶೀತ ಪೀಡಿತ ಪ್ರದೇಶಗಳ ಸ್ಥಳಾಂತರ ಕುರಿತ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಅವರು ಅಂತಹ ಸ್ಥಳಗಳಿಗೆ ತಾವು ಖುದ್ದಾಗಿ ಭೇಟಿ ನೀಡಿ ಪರಿಶೀಲಿಸಿ ನಂತರ ಅಧಿಕಾರಿಗಳೊಂದಿಗೆ ಚರ್ಚಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದ ಅವರು, ಅಪಘಾತಗಳ ನಿಯಂತ್ರಣಕ್ಕಾಗಿ ತಡೆಗೋಡೆ ನಿರ್ಮಿಸಲು ಕೆರೆಗಳನ್ನು ಗುರುತಿಸುವಂತೆ ಲೋಕೋಪಯೋಗಿ ಇಲಾಖೆಗೆ ಸೂಚಿಸಿರುವುದಾಗಿ ಹೇಳಿದರು.
ಹಾಸನ ನಗರದ ಸ್ವಚ್ಛತೆ ಹಾಗೂ ಕಸವನ್ನು ಸೂಕ್ತ ಸ್ಥಳದಲ್ಲಿ ವಿಲೇವಾರಿ ಮಾಡಲು ಸೂಚನೆ ನೀಡಲಾಗಿದ್ದು, ನಗರದಲ್ಲಿ ಹತ್ತು ಟ್ರ್ಯಾಕ್ಟರ್ಗಳನ್ನು ಕಸ ವಿಲೇವಾರಿಗೆ ಬಳಸಲಾಗುತ್ತಿದೆ. ಒಂದು ಟ್ರ್ಯಾಕ್ಟರ್ ದಿನವೊಂದಕ್ಕೆ ಮೂರು ಟ್ರಿಪ್ ಕಸ ವಿಲೇವಾರಿ ಮಾಡಬೇಕು. ಈ ರೀತಿ ಪ್ರತಿ ಟ್ರ್ಯಾಕ್ಟರ್ ಕೆಲಸ ನಿರ್ವಹಿಸಿದಲ್ಲಿ ನಗರದಲ್ಲಿ ಕಸ ಇರುವುದಿಲ್ಲ. ಈ ಹಿನ್ನೆಲೆಯಲ್ಲಿ ಕಸ ವಿಲೇ ಮಾಡುವ ಜಾಗದಲ್ಲಿ ಸಿಸಿ ಕ್ಯಾಮರ ಅಳವಡಿಸಲು ಚಿಂತಿಸಲಾಗಿದೆ ಎಂದರು. ನಗರದಲ್ಲಿ ಸುಗಮ ರಸ್ತೆ ಸಂಚಾರಕ್ಕಾಗಿ ಸಂಚಾರಿ ಸೂಚನಾ ಫಲಕಗಳನ್ನು ಅಳವಡಿಸಲು, ವೇಗ ನಿಯಂತ್ರಣ, ಜಿಬ್ರಾ ಕ್ರಾಸಿಂಗ್ ಮಾಡಲು ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.
ಹೇಮಾವತಿಯಲ್ಲಿ ಮೀನುಗಾರಿಕೆ ನಡೆಸದಂತೆ ಆದೇಶ
ಹಾಸನ: ಹೇಮಾವತಿ ಜಲಾಶಯದ ಹಿನ್ನಿರಿನಲ್ಲಿ ಮೀನುಗಾರಿಕೆ ಮಾಡುವಾಗ ತೆಪ್ಪ ಮುಳುಗಿ ಆ.22 ರಂದು ಮೂರು ಜನ ಮೀನುಗಾರರು ಮೃತಪಟ್ಟ ಹಿನ್ನೆಲೆಯಲ್ಲಿ ಮುಂದಿನ ದಿನಗಳಲ್ಲಿ ಪ್ರಾಣಹಾನಿ ತಡೆಯುವ ಮತ್ತು ಶಾಂತಿ ಸುವ್ಯವಸೆ ಕಾಪಾಡುವ ದೃಷ್ಟಿಯಿಂದ ಹೇಮಾವತಿ ಜಲಾಶಯ ಹಾಗೂ ಜಲಾಶಯದ ಹಿನ್ನೀರಿನ ವ್ಯಾಪ್ತಿಯಲ್ಲಿ ಮುಂದಿನ ಆದೇಶ ನೀಡುವವರೆಗೆ ಕರ್ನಾಟಕ ಸಹಕಾರಿ ಮೀನುಗಾರಿಕೆ ಮಹಾಮಂಡಳಿ ಸೇರಿದಂತೆ ಯಾರೂ ಮೀನುಗಾರಿಕೆ ನಡೆಸದಿರಲು ಹಾಸನ ಜಿಲ್ಲಾ ದಂಡಾಧಿಕಾರಿ ಹಾಗೂ ಜಿಲ್ಲಾಧಿಕಾರಿ ವಿ.ಅನ್ಬುಕುಮಾರ್ ಆದೇಶ ಮಾಡಿದ್ದಾರೆ.