ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಸೆ. 10 ಎಸ್ಮಾ ಕಾಯ್ದೆ ಖಂಡಿಸಿ ಸಾರಿಗೆ ಮುಷ್ಕರ

Vishwanath S
Updated On : 27 Aug 2013, 12:45 pm

ಕನ್ನಡಪ್ರಭ ವಾರ್ತೆ ,  ಹಾಸನ ,  ಆ. 26
ರಾಜ್ಯ ಸರ್ಕಾರ ಎಸ್ಮಾ  ಕಾಯ್ದೆಯನ್ನು ಜಾರಿತ ತರಲು ಸಿದ್ಧತೆ ಮಾಡಿರುವುದನ್ನು ಖಂಡಿಸಿ ಹಾಗೂ ನಾನಾ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ನೌಕರರು ಸೆ.10ರಂದು ಹಾಸನ ವಿಭಾಗ ಕಚೇರಿ ಮುಂದೆ ಧರಣಿ ನಡೆಸುತ್ತಿರುವುದಾಗಿ ಆಲ್ ಇಂಡಿಯಾ ಟ್ರೇಡ್ ಯೂನಿಯನ್ ಕಾಂಗ್ರೆಸ್ (ಎಐಬಿಯುಸಿ) ಕಾರ್ಯದರ್ಶಿ ಎಸ್.ನಾಗರಾಜ್ ತಿಳಿಸಿದರು.
   ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎಸ್ಮಾ ಕಾಯ್ದೆಯ ಮೂಲಕ ಅಗತ್ಯ ಸೇವೆಗಳಾದ ಸಾರ್ವಜನಿಕ ಸಾರಿಗೆ, ಆರೋಗ್ಯ ಸೇವೆ, ವಿದ್ಯುತ್ ಪೂರೈಕೆ ಮತ್ತು ಅಗತ್ಯ ವಸ್ತುಗಳ ಮಾರಾಟದಲ್ಲಿ ಸಮಸ್ಯೆ ಉಂಟಾಗದಂತೆ ತಡೆಯಲು ರಾಜ್ಯ ಸರ್ಕಾರ ಮತ್ತೆ ಎಸ್ಮಾ ಕಾಯ್ದೆಯನ್ನು ಜಾರಿಗೆ ತಂದು ಕಾರ್ಮಿಕರ ಮುಷ್ಕರವನ್ನು ಪ್ರತಿಬಂಧಿಸುವ ದಿಕ್ಕಿನಲ್ಲಿ ಹೊರಟಿದೆ.
  ಹಾಗೂ ಇಂತಹ ವಲಯದಲ್ಲಿ ಮುಷ್ಕರವಾದರೆ ಅತ್ಯಂತ ಕಠಿಣವಾದ ಶಿಕ್ಷೆಯನ್ನು ವಿಧಿಸಲು ಈ ಕಾನೂನಿನಲ್ಲಿ ಅವಕಾಸ ಕಲ್ಪಿಸಲಾಗಿದೆ. ಇದೊಂದು ಅತ್ಯಂತ ಕರಾಳವಾದ ಕಾಯ್ದೆ ಹಾಗೂ ಇಡೀ ಕಾರ್ಮಿಕ ವರ್ಗದ ಮುಷ್ಕರದ ಹಕ್ಕನ್ನು ಕಸಿಯುವ ಪ್ರಯತ್ನವಾಗಿದೆ ಎಂದು ಆರೋಪಿಸಿದರು.
 ಈ ಕಾನೂನು ದುಡಿಯುವ ವರ್ಗಕ್ಕೆ ಸಂವಿಧಾನಾತ್ಮಕವಾಗಿ ಮತ್ತು ಕಾನೂನಿನ ಚೌಕಟ್ಟಿನಲ್ಲಿ ಇರುವಂತಹ ಹಕ್ಕುಗಳನ್ನು ದರೋಡೆ ಮಾಡಲು ಹೊರಟಿದೆ.
 ಅಗತ್ಯ ಸೇವೆಗಳಲ್ಲಿ ದುಡಿಯುವ ನೌಕರರ ಸಮಸ್ಯೆಗಳನ್ನು ದ್ವಿಪಕ್ಷೀಯ ಮಾತುಕತೆ ಮೂಲಕ ಅಥವಾ ರಾಜಿಸಂಧಾನದ ಮೂಲಕ ಬಗೆಹರಿಸುವಂತೆ ಆಡಳಿತ ವರ್ಗಗಳನ್ನು ಆದೇಶಿಸಿ ಒಪ್ಪಂದಕ್ಕೆ ಬರುವಂತೆ ಒತ್ತಾಯಿಸುವ ಕಾನೂನು ಅವಶ್ಯಕತೆ ಇದೆ. ರಾಜ್ಯದ ಕಾಂಗ್ರೆಸ್ ಸರ್ಕಾರ ದುಡಿಯುವ ವರ್ಗದ ಹಕ್ಕನ್ನು ಮೊಟಕು ಮಾಡುವ ನಿರ್ಧಾರ ತೆಗೆದುಕೊಂಡಿರುವಾಗ ಕೇಂದ್ರದಲ್ಲಿ ಇರುವ ಕಾಂಗ್ರೆಸ್ ನೇತೃತ್ವದ ಸರ್ಕಾರ ಐಎಎಸ್ ಅಧಿಕಾರಿಗಳನ್ನು ಅಮಾನತ್ತು ಮಾಡಲು ಆಸ್ಪದ ಕೊಡದಂತೆ ಕಾನೂನು ತರಲು ಹೊರಟಿದೆ ಎಂದು ದೂರಿದರು.
 ಅಷ್ಟೇ ಅಲ್ಲದೆ ಸಂಸ್ಥೆಯ ಹಾಸನ ವಿಭಾಗದಲ್ಲಿ ನಿಗದಿತ ದಿನಾಂಕದಂದು ನೌಕರರಿಗೆ ವೇತನವನ್ನು ಕೊಡುತ್ತಿಲ್ಲ. ಶೇ.30ಕ್ಕೂ ಹೆಚ್ಚು ನೌಕರರ ಕೊರತೆ ಇದೆ. ಅದನ್ನು ನೇಮಕಾತಿ ಮಾಡಿಕೊಳ್ಳುತ್ತಿಲ್ಲ. ಆದ್ದರಿಂದ ವಾಹನ ರಿಪೇರಿ ಮಾಡಲು ಸಾಧ್ಯವಾಗದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಇದರ ಪರಿಣಾಮವಾಗಿ ರಾಜ್ಯದಲ್ಲಿ ಅಪಘಾತಗಳು ಹೆಚ್ಚಾಗಿ ಪ್ರಯಾಣಿಕರ ಪ್ರಾಣಹಾನಿಯಾಗುತ್ತಿದೆ. ಅದನ್ನು ಚಾಲಕರ ಮೇಲೆ ಆರೋಪ ಮಾಡಲಾಗುತ್ತಿದೆ ಎಂದು ಕಿಡಿಕಾರಿದರು.
 ವಾಹನದ ಬಿಡಿ ಭಾಗಗಳು ಕಳಪೆ ಗುಣಮಟ್ಟದ್ದಾಗಿದ್ದು, ಅದು ಕೂಡ ಅಪಘಾತಕ್ಕೆ ಕಾರಣಾಗುತ್ತಿದೆ. ಗುಣಮಟ್ಟದ ಡೀಸೆಲಲ್ಸಿಗುತ್ತಿಲ್ಲ. ಸರ್ಕಾರಿ ಖಾಸಗಿಯವರಿಗೆ ಪ್ರತಿ ಲೀಟರ್‌ಗೆ 50 ಪೈಸೆ ಹೆಚ್ಚು ಮಾಡಿ ಸಾರಿಗೆ ಸಂಸ್ಥೆಗೆ ಪ್ರತಿ ಲೀಟರ್‌ಗೆ 12 ರು.ಗಳ ಹೆಚ್ಚು ಮಾಡಲಾಗಿದೆ. ಇದರಿಂದ ಖರ್ಚು ಹೆಚ್ಚಾಗಿ ಆದಾಯ ಕಡಿಮೆಯಾಗುತ್ತಿದೆ. ಪರ್ಮಿಟ್ ಇಲ್ಲದ ಖಾಸಗಿ ಬಸ್, ಮ್ಯಾಕ್ಸಿಕ್ಯಾಬ್‌ಗಳು, ಸಾರಿಗೆ ಸಂಸ್ಥೆಯ ಮಾರ್ಗಗಳಲ್ಲಿ ಸಂಚರಿಸಿ ನಷ್ಟವಾಗುತ್ತಿದೆ. ಇದನ್ನು ಸರ್ಕಾರ ತಡೆಗಟ್ಟಬೇಕು ಎಂದರು.
 ಈ ಬಗ್ಗೆ ರಾಜ್ಯ ಸರ್ಕಾರ ಕ್ರಮಕೈಗೊಳ್ಳುತ್ತಿಲ್ಲ. ಆದ್ದರಿಂದ ಎಸ್ಮಾ ಕಾಯ್ದೆಯನ್ನು ಖಂಡಿಸಿ ಹಾಗೂ ನಾನಾ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಸೆ.10ರಂದು ಮುಷ್ಕರ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು. ಕೆಎಸ್‌ಆರ್‌ಟಿಸಿ ಸ್ಟಾಫ್ ಅಂಡ್ ವರ್ಕರ್ ಯೂನಿಯನ್ ಅಧ್ಯಕ್ಷ ಡಿ.ಜೆ.ಶಿವನಂಜೇಗೌಡ, ಪ್ರಧಾನ ಕಾರ್ಯದರ್ಶಿ ಜಿ.ಟಿ.ರಂಗೇಗೌಡ ಮೊದಲಾದವರು ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement