ಹೊ.ನ.ಪುರ. ಸರ್ಕಾರಿ ಕಾಲೇಜಿಗೆ ನ್ಯಾಕ್ ಅಧಿಕಾರಿಗಳ ಭೇಟಿ
ಕ.ಪ್ರ.ವಾರ್ತೆ , ಹೊಳೆನರಸೀಪುರ , ಆ.26
ಯುಜಿಸಿ ಶ್ರೇಣಿ ನೀಡಿಕೆಯ ಕುರಿತಂತೆ ಅಗತ್ಯ ಸೌಲಭ್ಯ ಹಾಗೂ ಶೈಕ್ಷಣಿಕ ಪ್ರಗತಿ ಪರಿಶೀಲನೆಗಾಗಿ ಮೈಸೂರು ವಿಶ್ವವಿದ್ಯಾಲಯದ ನ್ಯಾಕ್ ಅಧಿಕಾರಿಗಳ ತಂಡ ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿಗೆ ಭೇಟಿ ನೀಡಿ ಕಾಲೇಜಿನಲ್ಲಿನ ಸವಲತ್ತುಗಳ ಸಮೀಕ್ಷೆ ನಡೆಸಿತು.
ಪ್ರಾಂಶುಪಾಲ ಪ್ರೊ.ಎಂ.ಬಿ.ಇರ್ಷಾದ್ ಸಹೋದ್ಯೋಗಿಗಳೊಂದಿಗೆ ನ್ಯಾಕ್ ತಂಜವನ್ನು ಸ್ವಾಗತಿಸಿ, ಕಾಲೇಜಿನಲ್ಲಿನ ಮೂಲಭೂತ ಸೌಕರ್ಯ ಸೇರಿದಂತೆ ದಾಖಲೆಗಳನ್ನು ಸಮೀಕ್ಷಾ ತಂಡದ ಮುಂದಿರಿಸಿ ಮುಂದಿನ ಶೈಕ್ಷಣಿಕ ಅಭಿವೃದ್ಧಿಗೆ ನ್ಯಾಕ್ ತಂಡ ಉತ್ತಮ ಶ್ರೇಣಿ ನೀಡುವಂತೆ ಮನವಿ ಮಾಡಿತು.
ನ್ಯಾಕ್ ತಂಡದ ಮುಖ್ಯಸ್ಥ ಬಾಲಸುಬ್ರಮಣ್ಯಂ ಅವರ ತಂಡ ಬೆಳಗಿನಿಂದ ಸಂಜೆಯವರೆಗೆ ಕಾಲೇಜಿನ ಎಲ್ಲ ಮಾಹಿತಿ ಪಡೆಯಿತು. ಕಾಲೇಜಿನ ಸವಲತ್ತು ಕುರಿತಂತೆ ಸಲಹೆ ನೀಡಿದರಲ್ಲದೆ, ಪ್ರಸ್ತುತ ಕಾಲೇಜಿನಲ್ಲಿನ ವಾತಾವರಣ ಮತ್ತು ಆಡಳಿತದ ನೀತಿ ತಮ್ಮ ಮನಸ್ಸಿಗೆ ತೃಪ್ತಿ ತಂದಿದ್ದರೂ ಸಣ್ಣ ಪುಟ್ಟ ಕೊರತೆಗಳನ್ನು ತಿದ್ದಿಕೊಂಡಲ್ಲಿ ಯುಜಿಸಿ ಎ ಶ್ರೇಣಿ ನೀಡಲಿದೆ ಎಂಬ ಭರವಸೆ ನೀಡಿದರು.
ಕಾಲೇಜು ಶಿಕ್ಷಣ ಇಲಾಖೆಯ ಜಂಟಿ ನಿರ್ದೇಶಕ ಪ್ರಭಾಕರ್ ಅವರೊಂದಿಗೆ ಅಧಿಕಾರಿಗಳಾದ ಬಾಲಸುಬ್ರಮಣ್ಯಂ, ಡಾ.ಕೆ.ಮಹೇಶ್, ವೇಣುಗೋಪಾಲ್ ಹಾಗೂ ಸೋಮಶೇಖರ್ ಇದ್ದರು.
ಮುಂದಿನ 45 ದಿನದೊಳಗೆ ಯುಜಿಸಿ ಮತ್ತೊಂದು ತಂಡ ಆಗಮಿಸಿ ಇನ್ನೊಮ್ಮೆ ಕಾಲೇಜಿನ ಬಗ್ಗೆ ಪೂರ್ಣ ತಪಾಸಣೆ ನಡೆಸಲಿದೆ. ಆದ್ದರಿಂದ ತಾವುಗಳು ನೀಡಿರುವ ಸಲಹೆಯನ್ನು ಚಾಚು ತಪ್ಪದೆ ಅನುಷ್ಠಾನಕ್ಕೆ ತರುವಂತೆ ಸೂಚಿಸಿ ವರದಿಯನ್ನು ಮೇಲಾಧಿಕಾರಿಗಳಿಗೆ ಸಲ್ಲಿಸುವುದಾಗಿ ತಂಡದ ಮುಖ್ಯಸ್ಥರು ತಿಳಿಸಿದರು.