ಇಂದು ಕಾನೂನು ಅರಿವು ಕಾರ್ಯಕ್ರಮ
ಹಾಸನ: ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ವಕೀಲರ ಸಂಘ ಹಾಗೂ ಸರ್ಕಾರಿ ಕಲಾ ಕಾಲೇಜು (ರಾಜ್ಯಶಾಸ್ತ್ರ ವಿಭಾಗ) ಆಶ್ರಯದಲ್ಲಿ ಆ. 31 ರಂದು ನಗರದ ಸರ್ಕಾರಿ ಕಲಾ ಕಾಲೇಜು ಸಭಾಂಗಣದಲ್ಲಿ ಬೆಳಗ್ಗೆ 9 ಗಂಟೆಗೆ ಕೌಟುಂಬಿಕ ದೌರ್ಜನ್ಯ, ಬಾಲಕಾರ್ಮಿಕರ ಪದ್ಧತಿ ತಡೆ ಕಾಯ್ದೆ ಮತ್ತು ಲೈಂಗಿಕ ದೌರ್ಜನ್ಯದಿಂದ ಮಕ್ಕಳ ರಕ್ಷಣೆ ಕುರಿತು ಕಾನೂನು ಅರಿವು ಕಾರ್ಯಕ್ರಮ ಏರ್ಪಡಿಸಲಾಗಿದೆ. ಜಿಲ್ಲಾ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಅಧ್ಯಕ್ಷ ಜೆ.ಎಸ್.ಸೋಮಶೇಖರ್ ಕಾರ್ಯಕ್ರಮ ಉದ್ಘಾಟಿಸುವರು. ಸರ್ಕಾರಿ ಕಲಾ ಕಾಲೇಜು ಪ್ರಾಂಶುಪಾಲ ಡಾ. ಐ.ಎಂ.ಮೋಹನ್ ಅಧ್ಯಕ್ಷತೆ ವಹಿಸುವರು. ನ್ಯಾ. ಆರ್.ಡಿ.ಹುದ್ದಾರ್, ಎಸ್.ಎ.ಮುಸ್ತಫ ಹುಸೇನ್, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ದೇವರಾಜೇಗೌಡ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು.
ಇಂದು ರಾಷ್ಟ್ರಮಟ್ಟದ ಪೇಟೆಂಟ್ ಕಾರ್ಯಾಗಾರ
ಹಾಸನ: ನಗರದ ಮಲೆನಾಡು ತಾಂತ್ರಿಕ ಮಹಾವಿದ್ಯಾಲಯದಲ್ಲಿ ಆ 31 ರಂದು ರಾಷ್ಟ್ರಮಟ್ಟದ ಪೇಟೆಂಟ್
ಹಾಗೂ ಇನೋವೇಶನ್ಸ್ ಎಂಬ ಕಾರ್ಯಾಗಾರ ಏರ್ಪಡಿಸಲಾಗಿದೆ. ಬೆಳಗ್ಗೆ 10 ಗಂಟೆಗೆ ಮಲೆನಾಡು ತಾಂತ್ರಿಕ ಶಿಕ್ಷಣ ಸಮಿತಿ ಅಧ್ಯಕ್ಷ ಅಶೋಕ್ ಹಾರನಹಳ್ಳಿ ಉದ್ಘಾಟಿಸುವರು.
ನಾಳೆ ಕವನ ಸಂಕಲನ ಬಿಡುಗಡೆ
ಹಾಸನ: ನ್ಯಾಯಮೂರ್ತಿ ನಿಟ್ಟೂರು ಶ್ರೀನಿವಾಸರಾವ್ ಸ್ಮಾರಕ ಸೇವಾಸಂಸ್ಥೆಯಿಂದ ನಗರದ ಕನ್ನಡ ಸಾಹಿತ್ಯ ಪರಿಷತ್ ಸಭಾಂಗಣದಲ್ಲಿ ಸೆ. 1 ರಂದು ಬೆಳಗ್ಗೆ 10.30ಕ್ಕೆ ನಿಟ್ಟೂರು ಶ್ರೀನಿವಾಸರಾವ್ ಜನ್ಮೋತ್ಸವ ಅಂಗವಾಗಿ ಮೇಲುಕೋಟೆ ಇಳೈ ಅಳ್ವಾರ್ ಸ್ವಾಮೀಜಿ ದಿವ್ಯಸಾನ್ನಿಧ್ಯದಲ್ಲಿ ನಿಟ್ಟೂರು ಸ್ಮಾರಕ ಪ್ರಶಸ್ತಿ ಪುರಸ್ಕಾರ ಮತ್ತು ಎನ್.ಗಂಗಾಧರ ಅವರ 'ನಿನ್ನ ಕಂಗಳ ಬಿಸಿಯ ಹನಿಗಳು' ಕವನ ಸಂಕಲನ ಬಿಡುಗಡೆ ಸಮಾರಂಭ ಏರ್ಪಡಿಸಲಾಗಿದೆ. ಹಿರಿಯ ಶಿಕ್ಷಣ ತಜ್ಞ ಸಿ.ಎಸ್.ಕೃಷ್ಣಸ್ವಾಮಿ ಅಧ್ಯಕ್ಷತೆ ವಹಿಸುವರು. ಹಾಸನ ಗ್ಲೋಬಲ್ ಎಜು ಫ್ಯಾಷನ್ ಸಂಸ್ಥೆಯ ವಾಸು ಕಾರ್ಯಕ್ರಮ ಉದ್ಘಾಟಿಸುವರು. ಡಾ.ಗುರುರಾಜ ಹೆಬ್ಬಾರ್, ಕಸಾಪ ಜಿಲ್ಲಾಧ್ಯಕ್ಷ ಡಾ.ಜನಾರ್ದನ್, ಹಾಸನ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷತೆ ಲೀಲಾವತಿ, ಅಮೋಘ್ ವಾಹಿನಿ ವ್ಯವಸ್ಥಾಪಕ ಕೆ.ಪಿ.ಎಸ್.ಪ್ರಮೋದ್, ಮೈಸೂರಿನ ಸಮಾಜ ಸೇವಕ ಕೆ.ರಘುರಾಂ, ಚಿತ್ರ ನಿರ್ಮಾಪಕ ಎಸ್.ವೆಂಕಟೇಶ್ ಭಾಗವಹಿಸುವರು. ಸಾಹಿತಿ ಗೊರೂರು ಅನಂತರಾಜು, ಕವಿ ಎನ್.ಗಂಗಾಧರ, ಸಮಾಜ ಸೇವಕ ಬಿ.ಎಸ್.ಅಮೃತ್ ಆರಾಧ್ಯ, ಡಿ.ಎಂ.ಜಯಮ್ಮ, ಸಮಂಗಲಿ ಪತ್ರಿಕೆ ಸಂಪಾದಕ ಎಚ್.ವಿ.ಪುಟ್ಟಸ್ವಾಮಿ ಹಾಗೂ ಚಿತ್ರ ಕಲಾವಿದ ಹೇಮಂತ್ಗೌಡ ಅವರಿಗೆ ನಿಟ್ಟೂರು ಶ್ರೀನಿವಾಸರಾವ್ ಸ್ಮಾರಕ ಪ್ರಶಸ್ತಿ ನೀಡಿ ಪುರಸ್ಕರಿಸಲಾಗುವುದು ಎಂದು ಸಂಸ್ಥೆಯ ಅಧ್ಯಕ್ಷ ಟಿ.ವಿ.ಗಿರೀಶ್ ತಿಳಿಸಿದ್ದಾರೆ.
ಜಲಾಶಯಗಳ ನೀರಿನ ಮಟ್ಟ
ಹಾಸನ: ಹೇಮಾವತಿ ಜಲಾಶಯಕ್ಕೆ ಶುಕ್ರವಾರ 4490 ಕ್ಯುಸೆಕ್ ನೀರು ಹರಿದು ಬಂದಿದೆ. ಗರಿಷ್ಠ ನೀರಿನ ಮಟ್ಟ 2922 ಅಡಿ ಇದ್ದು, ಪ್ರಸುತ್ತ ನೀರಿನ ಮಟ್ಟ 2921.72 ಅಡಿ ಇದೆ. ಜಲಾಶಯದಿಂದ ನದಿಗೆ 125 ಕ್ಯುಸೆಕ್, ನಾಲೆಗೆ 4250 ಕ್ಯುಸೆಕ್ ನೀರು ಬಿಡಲಾಗುತ್ತಿದೆ. ಜಲಾಶಯದಲ್ಲಿ 36.822 ಟಿಎಂಸಿ ನೀರು ಸಂಗ್ರಹವಾಗಿದೆ.
ಯಗಚಿ ಜಲಾಶಯ: ಇಂದಿನ ನೀರಿನ ಮಟ್ಟ 3164.562 ಅಡಿ, ಒಳ ಹರಿವು 100 ಕ್ಯುಸೆಕ್, ಹೊರ ಹರಿವು ನಾಲೆಗೆ 175, ಒಟ್ಟು 3.600 ಟಿಎಂಸಿ ನೀರು ಸಂಗ್ರಹವಾಗಿದೆ.
ವಾಟೆ ಹೊಳೆ: ಇಂದಿನ 3165.35 ಅಡಿ, ಒಳ ಹರಿವು 20 ಕ್ಯುಸೆಕ್, ನಾಲೆಗೆ 105 ಕ್ಯುಸೆಕ್, 1.285 ಟಿಎಂಸಿ ನೀರು ಸಂಗ್ರಹವಾಗಿದೆ.
ಸೆ. 6 ರಿಂದ ದಸರಾ ಕ್ರೀಡಾಕೂಟ
ಅರಸೀಕೆರೆ: ಸೆಪ್ಟಂಬರ್ 6 ರಿಂದ ದಸರಾ ಕ್ರೀಡಾಕೂಟ ಪಟ್ಟಣದ ಜೇನುಕಲ್ ಕ್ರೀಡಾಂಗಣದಲ್ಲಿ ನಡೆಯಲಿದೆ. ಕ್ರೀಡಾಕೂಟದಲ್ಲಿ ಪಾಲ್ಗೊಳ್ಳುವ 16 ವರ್ಷ ವಯೋವಾನದ ತಾಲೂಕಿನ ಕ್ರೀಡಾಪಟುಗಳು ತಮ್ಮ ಅಗತ್ಯ ದಾಖಲಾತಿಗಳೊಂದಿಗೆ ಅಂದು ಹಾಜರಿರಬೇಕು. ಸೆ.7 ರಂದು ಕ್ರೀಡಾಂಗಣದಲ್ಲಿ ಗ್ರಾಮೀಣ ದಸರಾ ಕ್ರೀಡಾಕೂಟ ನಡೆಯಲಿದೆ. ಇದರಲ್ಲಿ ಪಟ್ಟಣ ವಾಸಿಗಳಿಗೆ ಅವಕಾಶ ಇರುವುದಿಲ್ಲ. ಗ್ರಾಮೀಣ ಕ್ರೀಡಾ ಕೂಟದಲ್ಲಿ ಪಾಲ್ಗೊಳ್ಳ ಬಯಸುವ ಕ್ರೀಡಾ ಪಟುಗಳು ಗ್ರಾಮೀಣ ವಾಸ ದೃಢೀಕರಣ ಪತ್ರವನ್ನು ಹಾಜರುಪಡಿಸಬೇಕಾಗುತ್ತದೆ ಎಂದು ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಕ ತಿಮ್ಮೇಶ್ ತಿಳಿಸಿದ್ದಾರೆ. ಮಾಹಿತಿಗೆ 9880488183 ಸಂಪರ್ಕಿಸಿ.
ವಸ್ತು ಪ್ರದರ್ಶನ
ಹಾಸನ: ಮಾವಿನಕೆರೆಯ ಜವಾಹರ್ ನವೋದಯ ವಿದ್ಯಾಲಯದಲ್ಲಿ ಆ. 31 ರಂದು ಕ್ಲಸ್ಟರ್ ಮಟ್ಟದ ಅಥ್ಲೆಟಿಕ್ ಆಯ್ಕೆ ಮತ್ತು ಪ್ರದರ್ಶನ ಏರ್ಪಡಿಸಲಾಗಿದೆ. ಜಿಲ್ಲಾಧಿಕಾರಿ ಹಾಗೂ ಜವಾಹಾರ ನವೋದಯ ವಿದ್ಯಾಲಯದ ವ್ಯವಸ್ಥಾಪಕ ಸಮಿತಿ ಅಧ್ಯಕ್ಷ ಅನ್ವುಕುಮಾರ್ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು. ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಬಸವರಾಜು, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಶ್ಯಾಮಲಾದೇವಿ, ಹಾಸನ ಕೇಂದ್ರಿಯ ವಿದ್ಯಾಲಯ ಪ್ರಾಂಶುಪಾಲ ಜೆ.ವೈ.ಪಾಟೀಲ್, ಲೋಕೋಪಯೋಗಿ ಇಲಾಖೆ ಕಾರ್ಯಪಾಲಕ ಎಂಜಿನಿಯರ್ ಕೃಷ್ಣಮೂರ್ತಿ ವಿಶೇಷ ಆಹ್ವಾನಿತರು.
ಪ್ರಾಧಿಕಾರದ ಸಭೆ
ಹಾಸನ: ಜಿಲ್ಲಾಧಿಕಾರಿ ಹಾಗೂ ಪ್ರಾದೇಶಿಕ ಸಾರಿಗೆ ಪ್ರಾಧಿಕಾರ ಅಧ್ಯಕ್ಷ ವಿ.ಅನ್ಬುಕುಮಾರ್ ಅಧ್ಯಕ್ಷತೆಯಲ್ಲಿ ಸೆ.6 ರಂದು 9 ರಂದು ಬೆಳಿಗ್ಗೆ 11 ಕ್ಕೆ ಜಿಲ್ಲಾಧಿಕಾರಿ ಕಚೇರಿ ನ್ಯಾಯಾಲಯ ಸಭಾಂಗಣದಲ್ಲಿ ಪ್ರಾಧಿಕಾರಿದ ಸಭೆ ನಡೆಯಲಿದೆ ಎಂದು ಪ್ರಾದೇಶಿಕ ಸಾರಿಗೆ ಅಧಿಕಾರಿ ಹಾಗೂ ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಕಾರ್ಯದರ್ಶಿ ಆರ್.ಡಿ.ಅಲ್ಮೇಡ ತಿಳಿಸಿದ್ದಾರೆ.
ಯುವ ಕಾಂಗ್ರೆಸ್ ಸದಸ್ಯತ್ವ ಪ್ರಕ್ರಿಯೆಗೆ ವಿದ್ಯುಕ್ತ ಚಾಲನೆ
ಜಾವಗಲ್: ಹೋಬಳಿಯಲ್ಲಿ ಯುವ ಕಾಂಗ್ರೆಸ್ ಸದಸ್ಯತ್ವ ಪ್ರಕ್ರಿಯೆಗೆ ಹಾಸನ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಅರಕಲಗೂಡು ಪ್ರಸನ್ನಕುಮಾರ್ ಚಾಲನೆ ನೀಡಿದರು. ಜಾವಗಲ್ನ ಪ್ರವಾಸಿಮಂದಿರದಲ್ಲಿ ಕಾರ್ಯಕರ್ತರೊಂದಿಗೆ ಮಾತನಾಡಿದ ಅವರು, ಯುವ ಕಾಂಗ್ರೆಸ್ ಸದಸ್ಯತ್ವವನ್ನು ಹೆಚ್ಚು ಹೆಚ್ಚಾಗಿ ನೋಂದಾಯಿಸುವಂತೆ ಕರೆ ನೀಡಿದರು.
ಯುವ ಕಾಂಗ್ರೆಸ್ ಸದಸ್ಯತ್ವ ಪಡೆದು ರಾಹುಲ್ಗಾಂಧಿ ನೇತೃತ್ವದಲ್ಲಿ ದೇಶದ ಅಭಿವೃದ್ಧಿಗೆ ಶ್ರಮಿಸಬೇಕೆಂದರು. ರಾಜ್ಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಉತ್ತಮ ಆಡಳಿತ ನೀಡುತ್ತಿದ್ದು, ಸರ್ಕಾರದಲ್ಲಿ ಯುವಕರಿಗೆ ಪ್ರಾಶಸ್ತ್ಯ ನೀಡಲಾಗಿದೆ. ನಿಗಮ, ಮಂಡಳಿಗಳಲ್ಲಿ ಯುವಕರಿಗೆ ಇನ್ನೂ ಹೆಚ್ಚಿನ ಪ್ರಾಶಸ್ತ್ಯ ನೀಡಬೇಕೆಂದರು.ಬೇಲೂರು ಬ್ಲಾಕ್ ಕಾಂಗ್ರೆಸ್ ಖಜಾಂಚಿ ಜೆ.ಎಂ ಚಂದ್ರಶೇಖರ್, ಮಹೇಂದ್ರ, ರಮೇಶ, ನೇರ್ಲಿಗೆ ಮಹೇಶ್, ಜೆ.ಎಸ್. ಬಿಂಧುಮಾದವ ಮತ್ತು ಅಮ್ಮನಹಳ್ಳಿ ಲೋಕೇಶ್ ಮೊದಲಾದವರು ಇದ್ದರು.
ಪದವಿ ಕಾಲೇಜು ಅತಿಥಿಉಪನ್ಯಾಸಕರ ರಾಜ್ಯ ಸಮಾವೇಶ
ಹಾಸನ: ರಾಜ್ಯ ಸಮಿತಿ ಆಯೋಜಿಸಿರುವ ಸರ್ಕಾರಿ ಪದವಿ ಕಾಲೇಜುಗಳಲ್ಲಿ ಕೆಲಸ ಮಾಡುತ್ತಿರುವ ಅತಿಥಿ ಉಪನ್ಯಾಸಕರ ರಾಜ್ಯ ಮಟ್ಟದ ಸಮಾವೇಶ ಸೆ.1 ರಂದು ಬೆಂಗಳೂರಿನಲ್ಲಿ ನಡೆಯಲಿದೆ.
ಅತಿಥಿ ಉಪನ್ಯಾಸಕರು ಅತೀ ಕಡಿಮೆ ವೇತನ ಪಡೆದುಕೊಂಡು ಮತ್ತು 3 ತಿಂಗಳಿಗೊಮ್ಮೆ ಇಲ್ಲವೆ 6 ತಿಂಗಳಿಗೊಮ್ಮೆ ವೇತನ ಪಡೆದು ಸೇವೆ ಮಾಡುತ್ತಿದ್ದಾರೆ. ಅತಿಥಿ ಉಪನ್ಯಾಸಕರ ಸೇವಾ ಭದ್ರತೆಗಾಗಿ ಮಾಸಿಕ ರು. 25000 ವೇತನಕ್ಕಾಗಿ ಮತ್ತು ಪ್ರತಿ ತಿಂಗಳು ಮೊದಲ ವಾರದಲ್ಲೇ ವೇತನ ಬಿಡುಗಡೆಗಾಗಿ ಒತ್ತಾಯಿಸಿ ಅಥಿತಿ ಉಪನ್ಯಾಸಕರ ರಾಜ್ಯ ಮಟ್ಟದ ಸಮಾವೇಶ ಬೆಂಗಳೂರಿನ ಸೆಂಟ್ರಲ್ ಕಾಲೇಜಿನ ಸೆನೆಟ್ ಹಾಲ್ನಲ್ಲಿ ನಡೆಯಲಿದೆ ಎಂದು ಜಿಲ್ಲಾ ಸಮಿತಿ ಪದಾಧಿಕಾರಿಗಳು ತಿಳಿಸಿದ್ದಾರೆ.
ನಾಡೋಜ ಡಾ.ಬರಗೂರು ರಾಮಚಂದ್ರಪ್ಪ ಸಮಾವೇಶ ಉದ್ಘಾಟಿಸುವರು. ಅಖಿಲ ಭಾರತ ಉಪಾಧ್ಯಕ್ಷ ಶೆಣೈ, ರಾಜ್ಯ ಅತಿಥಿ ಉಪನ್ಯಾಸಕರ ಒಕ್ಕೂಟ್ಟದ ಅಧ್ಯಕ್ಷ ರವಿಕುಮಾರ್ ಭಾಗವಹಿಸಲಿದ್ದಾರೆ.
ಸಮಾವೇಶದಲ್ಲಿ ರಾಜ್ಯದ ಎಲ್ಲ ಜಿಲ್ಲೆಗಳಿಂದ ಸಾವಿರಾರು ಅತಿಥಿ ಉಪನ್ಯಾಸಕರು ಭಾಗವಹಿಸಲ್ಲಿದ್ದು ಹಾಸನದಿಂದಲೂ ಹೆಚ್ಚಿನ ಸಂಖ್ಯೆಯಲ್ಲಿ ಹೊರಡಲ್ಲಿದ್ದಾರೆ. ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಮಿಷನ್ ಆಸ್ಪತ್ರೆ ಎರಡನೆ ತಿರುವಿನಲ್ಲಿರುವ ಜಿಲ್ಲಾ ಕಚೇರಿ ಸೌಹಾರ್ದವನ್ನು ದೂರವಾಣಿ ಸಂಖ್ಯೆ 9844912603- 8694976669
ಸಂಪರ್ಕಿಸ ಬಹುದು.
ವೆಂಕಟರಮಣಸ್ವಾಮಿ ದೇವಾಲಯ ರಸ್ತೆ ಕಾಮಗಾರಿಗೆ ಚಾಲನೆ
ಹಾಸನ: ಹೊಳೆನರಸೀಪುರ ತಾ. ಬೆಟ್ಟದ ಗುಳ್ಳದಪುರದಲ್ಲಿ ಶ್ರೀ ವೆಂಕಟರಮಣಸ್ವಾಮಿ ದೇವಸ್ಥಾನದ ರಸ್ತೆ ಕಾಮಗಾರಿಗೆ ಚಾಲನೆ ಹಾಗೂ ನಾನಾ ಕಾಮಗಾರಿಗಳ ಶಂಕುಸ್ಥಾಪನಾ ಸಮಾರಂಭ ಆಗಸ್ಟ್ 31ರಂದು ಬೆಳಗ್ಗೆ 11ಕ್ಕೆ ನೆರವೇರಲಿದೆ.
ಗ್ರಾಮೀಣ ಅಭಿವೃದ್ಧಿ ಸಚಿವ ಎಚ್.ಕೆ. ಪಾಟೀಲ್ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸುವರು. ಶಾಸಕ ಎಚ್.ಡಿ. ರೇವಣ್ಣ ಕಿರು ನೀರಾವರಿ ಸರಬರಾಜು ಯೋಜನೆ ಉದ್ಘಾಟಿಸುವರು. ಶಾಸಕ ಹಾಗೂ ಭಾರತೀಯ ತಂಬಾಕು ಮಂಡಳಿ ಉಪಾಧ್ಯಕ್ಷ ಎ. ಮಂಜು ಅಧ್ಯಕ್ಷತೆ ವಹಿಸುವರು.
ಮುಜರಾಯಿ ಸಚಿವ ಪ್ರಕಾಶ್ ಹುಕ್ಕೇರಿ ವಿಶೇಷ ಆಹ್ವಾನಿತರಾಗಿ ಭಾಗವಹಿಸುವರು. ಜಿಲ್ಲಾಧಿಕಾರಿ ವಿ. ಅನ್ಬುಕುಮಾರ್, ಮುಖ್ಯ ಕಾರ್ಯ ನಿರ್ವಾಹಣಾಧಿಕಾರಿ ವಿ.ಪಿ.ಸಿಂಗ್, ತಹಸೀಲ್ದಾರ್ ಮಂಜುಳ, ಕಾರ್ಯಪಾಲಕ ಎಂಜಿನಿಯರ್ ಕೆ.ಎಂ.ನಾಗರಾಜು ಇತರರು ಭಾಗವಹಿಸುವರು.
ಇಂದು ಹಿಂದುಳಿದ ವರ್ಗ ಆಯೋಗ ಅಧ್ಯಕ್ಷರ ಕಾರ್ಯಕ್ರಮ
ಹಾಸನ: ರಾಜ್ಯ ಹಿಂದುಳಿದ ವರ್ಗಗಳ ಆಯೋಗ ಅಧ್ಯಕ್ಷ ಎನ್. ಶಂಕರಪ್ಪ ಮತ್ತು ಆಯೋಗದ ಸದಸ್ಯರು ಆ. 31ರಂದು ಮಧ್ಯಾಹ್ನ 12.30ಕ್ಕೆ ಬೆಂಗಳೂರಿನಿಂದ ನಗರಕ್ಕೆ ಆಗಮಿಸುವರು. ಜಿಲ್ಲೆಯ ಹಿಂದುಳಿದ ವರ್ಗಗಳ ಮುಖಂಡರರೊಂದಿಗೆ ಭೇಟಿ ಮಾಡಿ ಚರ್ಚಿಸಿ ಮತ್ತು ಕಲ್ಯಾಣ ಕಾರ್ಯಕ್ರಮಗಳ ಬಗ್ಗೆ ವಿಚಾರಣೆ ಮಾಡಿ ರಾತ್ರಿ ಹಾಸನದಲ್ಲಿ ತಂಗುವರು. ಸೆ. 1ರಂದು ಭಾನುವಾರ ಬೆಳಿಗ್ಗೆ 9ಕ್ಕೆ ಹಾಸನದಿಂದ ನಿರ್ಗಮಿಸುವ ಅಧ್ಯಕ್ಷರು ಹಾಸನ ಮತ್ತು ಚನ್ನರಾಯಪಟ್ಟಣ ತಾಲೂಕುಗಳಲ್ಲಿ ಪ್ರವಾಸ ಕೈಗೊಂಡು ಕಲ್ಯಾಣ ಕಾರ್ಯಕ್ರಮಗಳ ಪರಿಶೀಲನೆ ನಂತರ ಸಂಜೆ 6ಕ್ಕೆ ಚನ್ನರಾಯಪಟ್ಟಣದಿಂದ ಬೆಂಗಳೂರಿಗೆ ತೆರಳುವರು.