ಒಂದೇ ವೇದಿಕೆಯಲ್ಲಿ ವಿಭಿನ್ನ ಕಾರ್ಯಕ್ರಮ
ಕನ್ನಡಪ್ರಭ ವಾರ್ತೆ , ಜಾವಗಲ್ , , ಆ.30
ಇಲ್ಲಿನ ಬಯಲು ರಂಗಮಂದಿರದಲ್ಲಿ ಒಂದೇ ವೇದಿಕೆಯಡಿ ವಿಭಿನ್ನ ಕಾರ್ಯಕ್ರಮಗಳು ನಡೆದು ಧಾರ್ಮಿಕ ಮತ್ತು ಸಾಹಿತ್ಯಾಭಿಮಾನಿಗಳಿಗೆ ರಸದೌತಣ ಉಂಟುಮಾಡಿತು.
ಕೀರ್ತನ ಭಾರತಿ ವಿದ್ಯಾ ಟ್ರಸ್ಟ್, ಪತಂಜಲಿ ಯೋಗ ಮತ್ತು ಪ್ರಕೃತಿ ಸಂಸ್ಥೆ, ಪತಂಜಲಿ ಕನಕದಾಸರ ಅಧ್ಯಯನ ಕೇಂದ್ರ, ಲಲಿತ ಕಲಾ ಕೇಂದ್ರ ಮತ್ತು ಸಹ್ಯಾದ್ರಿ ಲಲಿತ ಕಲಾ ಅಕಾಡೆಮಿ ಸಂಯುಕ್ತ ಆಶ್ರಯದಲ್ಲಿ ಕನಕ ಶ್ರಾವಣ ಮಾಸದ ಅಂಗವಾಗಿ ಕನಕಕಂಕಣ ಧಾರಣಾದೊಂದಿಗೆ ಕನಕ-ಪುರಂದರ ಕೀರ್ತನೋತ್ಸವ ಸಾಂಸ್ಕೃತಿಕ ಕಲಾ ಮಹೋತ್ಸವ ಅಂಗವಾಗಿ ಪತಂಜಲಿ ಜೆ.ನಾಗರಾಜು, ಹರಿಪ್ರಸಾದ್, ಚನ್ನರಾಜು, ನಾಗಪ್ಪ, ಲಲಿತಮ್ಮ ಮತ್ತು ಉಮಾ ತಂಡದವರು ಒಂದು ಗಂಟೆ ಕಾಲ ಸುಶ್ರಾವ್ಯವಾಗಿ ಕನಕ-ಪುರಂದರದಾಸರ ಕೀರ್ತನೆಗಳನ್ನು ಹಾಡಿ ರಂಜಿಸಿದರು.
ಜಾವಗಲ್ನ ನವಗ್ರಾಮದಲ್ಲಿರುವ ಬೀರಲಿಂಗೇಶ್ವರ ಸ್ವಾಮಿ ದೇವಾಲಯದಿಂದ 108 ಕಳಸಗಳನ್ನು ಹೊತ್ತ ಸುಮಂಗಲಿಯರು ಊರಿನ ಪ್ರಮುಖ ಬೀದಿಗಳಲ್ಲಿ ಕಾಗಿನೆಲೆ ಕನಕ ಪೀಠದ ಮೈಸೂರು ವಿಭಾಗದ ಕೆ.ಆರ್.ನಗರ ಶಾಖಾಮಠದ ಶಿವಾನಂದಪುರಿ ಸ್ವಾಮೀಜಿ ಅವರನ್ನು ಡೊಳ್ಳುಕುಣಿತದೊಂದಿಗೆ ಊರಿನ ಪ್ರಮುಖ ಬೀದಿಗಳಲ್ಲಿ ಮೆರವಣಿಗೆಯ ಮೂಲಕ ಸಿದ್ದರಾಮೇಶ್ವರಸ್ವಾಮಿ ಮಠಕ್ಕೆ ಬರಮಾಡಿಕೊಳ್ಳಲಾಯಿತು.
ಭಕ್ತಾದಿಗಳು ಸ್ವಾಮೀಜಿ ದರ್ಶನ ಪಡೆದು, ಪಾದಪೂಜೆ ನಡೆಸಿ ಗೌರವ ಸಮರ್ಪಿಸಿದರು. ನಂತರ ಬಯಲು ರಂಗಮಂದಿರದಲ್ಲಿ ಕರಿಯಮ್ಮದೇವಿ ಮಹಿಳಾಸಂಘ ಸ್ವಾಮೀಜಿ ಉದ್ಘಾಟಿಸಿ, ಪತಂಜಲಿ ಪತ್ರಿಕೆಯನ್ನು ಬಿಡುಗಡೆ ಮಾಡಿದರು.
ಕಾರ್ಯಕ್ರಮದ ಸಾನಿಧ್ಯ ವಹಿಸಿದ್ದ ಶ್ರೀಗಳು, ಮಹಿಳೆಯರು ಮಕ್ಕಳ ಪ್ರಗತಿಗಾಗಿ ಉನ್ನತ ಶಿಕ್ಷಣ ನೀಡಬೇಕೆಂದು ಕರೆಯಿತ್ತರು. ಮಠಮಾನ್ಯಗಳು ಅನಾದಿಕಾಲದಿಂದಲೂ ಸಮಾಜದ ಪ್ರಗತಿಗೆ ಶ್ರಮಿಸುತ್ತಿವೆ. ಸಮಾಜದ ಅಭಿವೃದ್ಧಿಗೆ ಶಿಕ್ಷಣ ಅಗತ್ಯ. ಬೌದ್ಧಿಕ ಶಕ್ತಿ ಬೆಳೆಯಲು ಶಿಕ್ಷಣ ಅಗತ್ಯವಾದರೆ, ಒಗ್ಗಟ್ಟಾಗಿರಲು ಸಂಘ ಅನಿವಾರ್ಯವೆಂದರು.
ಕನಕದಾಸರು ದಾಸಶ್ರೇಷ್ಠರಾಗಿದ್ದು ಅವರು ನೀಡಿರುವ ಮೌಲ್ಯಗಳನ್ನು ಸಮಾಜಕ್ಕೆ ಪರಿಚಯಿಸುವ ಕೆಲಸ ಮಾಡುತ್ತಿರುವುದಾಗಿ ತಿಳಿಸಿದರು. ಮನುಷ್ಯನಲ್ಲಿ ಅಂಹಕಾರ, ಮಮಕಾರ ಇರುವವರೆಗೂ ಆತ್ಮ ಪರಿಶುದ್ಧ ವಾಗುವುದಿಲ್ಲವೆಂದು ತಿಳಿಸಿದ ಸ್ವಾಮೀಜಿ ವೇದಿಕೆಯಲ್ಲಿದ್ದ ಗಣ್ಯರನ್ನು ಸನ್ಮಾನಿಸಿದರು.
ಹಾಸನ ಜಿಲ್ಲಾ ಕುರುಬರ ಸಂಘದ ಜೆ.ಎಸ್. ಸೋಮೇಗೌಡ ಮಾತನಾಡಿ ಕನಕ ಗುರುಪೀಠವು ಜನಾಂಗದ ಅಭಿವೃದ್ಧಿಗೆ ಶ್ರಮಿಸುತ್ತಿದೆ ಎಂದರು. ಸಂಘದ ಅಧ್ಯಕ್ಷೆ ಅನಿತ ಮಾತನಾಡಿ ಸಂಘದ ಅಭಿವೃದ್ಧಿಗೆ ಸದಸ್ಯರ ಸಹಕಾರ ಅಗತ್ಯವೆಂದರು.
ಜಿಲ್ಲಾ ಪಂಚಾಯ್ತಿ ಮಾಜಿ ಉಪಾಧ್ಯಕ್ಷ ಎನ್.ಬಿ ರಾಜಶೇಖರ್, ಎಪಿಎಂಸಿ ನಿರ್ದೇಶಕ ಕೆ.ಸಿ ನಾಗರಾಜು, ತಾಪಂ ಸದಸ್ಯೆ ಲಕ್ಷ್ಮೀ ರವಿಶಂಕರ್, ಬೇಲೂರು ಕಾಂಗ್ರೆಸ್ ನಾಯಕಿ ಬಿ.ಕೆ ಚಂದ್ರಕಲಾ, ಗ್ರಾಪಂ ಸದಸ್ಯ ಲಕ್ಷ್ಮಣ್, ಪ್ರಭಾಕರ್, ಮಾಜಿ ಚೇರ್ಮನ್ ಮಹಾಲಿಂಗಪ್ಪ, ಎಸ್ಡಿಎಂಸಿ ಅಧ್ಯಕ್ಷ ಶ್ರೀನಿವಾಸ, ಕನಕ ಸಂಘದ ಜೆ.ಎಂ. ಚಂದ್ರಶೇಖರ್, ದಾನೇಗಡ, ಜೆ.ಎಚ್.ಕಾಳೇಗೌಡ, ಸುಮಕಾಳೇಗೌಡ, ಶಾಂತಮ್ಮ ಜೆ.ಎನ್.ಕೃಷ್ಣಶೆಟ್ಟಿ, ಗೀತಾ, ರಂಗಸ್ವಾಮಿ, ಮಂಜುನಾಥ, ಚಂದ್ರಪ್ಪ ಮತ್ತಿತರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಕುಮಾರಿ ಬಿಂದು ಮತ್ತು ಸಂಗಡಿಗರು ಬೀರಪ್ಪನ ಪದಗಳನ್ನು ಹಾಡಿಸಭಿಕರ ರಂಜಿಸಿದರು.