ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

'ಕನಕದಾಸರು ಮಾನವೀಯ ಮೌಲ್ಯ ಸಾರಿದ ಸಂತ ಶ್ರೇಷ್ಠ'

Vishwanath S
Updated On : 31 Aug 2013, 12:02 pm

ಕ.ಪ್ರ.ವಾರ್ತೆ , ಜಾವಗಲ್ , ಆ. 30
ಸಂತ ಶ್ರೇಷ್ಠ ಕನಕದಾಸರು ತಮ್ಮ ಕೃತಿಗಳ ಮೂಲಕ ಸಮಾನತೆ ಮತ್ತು ಮಾನವೀಯ ಮೌಲ್ಯಗಳನ್ನು ಜಗತ್ತಿಗೆ ಸಾರಿದ ಮಹಾನ್ ದಾರ್ಶನಿಕರು ಎಂದು ಬೆಂಗಳೂರಿನ ಕನಕದಾಸ ಅಧ್ಯಯನ ಕೇಂದ್ರದ ಸಮನ್ವಯಾಧಿಕಾರಿ ಸಾಹಿತಿ ಕಾ.ತ. ಚಿಕ್ಕಣ್ಣ ಅಭಿಪ್ರಾಯಪಟ್ಟರು.
ಇಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ರಾಷ್ಟ್ರೀಯ ಸಂತ ಕನಕದಾಸ ಅಧ್ಯಯನ ಮತ್ತು ಸಂಶೋಧನಾ ಕೇಂದ್ರ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಆಶ್ರಯದಲ್ಲಿ ಏರ್ಪಡಿಸಿದ್ದ 'ಮುತ್ತು ಬಂದಿದೆ ಕೇರಿಗೆ' ಕನಕದಾಸ ಉಪನ್ಯಾಸ ವಾಚನ ಗಾಯನ ರಸಗ್ರಹಣ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.
ಕನಕದಾಸರು ಲೌಕಿಕ ಬದುಕನ್ನು ಅನುಭವಿಸಿ, ಲೌಕಿಕ ಬದುಕನ್ನು ಸರಿದೂಗಿಸುವ ಮಾರ್ಗ ಕಂಡುಕೊಂಡು ದಾಸ ಶ್ರೇಷ್ಠರಾಗಿ, ಕೀರ್ತನಾಕಾರರಾಗಿ, ಸಮಾಜದಲ್ಲಿ ಸಾಮರಸ್ಯ ಬದುಕಿನ ವಾತಾವರಣ ನಿರ್ಮಿಸಲು ಆಧ್ಯಾತ್ಮಿಕ ಚಿಂತನೆ ಮತ್ತು ಮಾನವೀಯ ಮೌಲ್ಯಗಳನ್ನು ಪ್ರತಿಪಾದಿಸಿದ ಮಹಾನ್ ಸಂತರೆಂದು ಬಣ್ಣಿಸಿದರು.
ಶಿಕ್ಷಣ ಜ್ಞಾನವನ್ನು ನಿಯಂತ್ರಿಸುವುದಕ್ಕಿಂತ ಎಲ್ಲಾ ಮಜಲುಗಳಿಗೂ ಅವಕಾಶ ನೀಡಬೇಕಾಗಿದೆ. ಸಮಾಜದಲ್ಲಿ ಸ್ವಾರ್ಥ, ಅಧಿಕಾರದಾಹ, ಸಂಘರ್ಷಗಳು ಪ್ರತಿನಿತ್ಯ ನಡೆಯುತ್ತಿದ್ದು ಮನುಷ್ಯ ರಾಕ್ಷಸೀಪ್ರವೃತ್ತಿ ಬೆಳಸಿಕೊಂಡಿದ್ದಾನೆಂದು ವಿಷಾದಿಸಿದರು.
ಪ್ರಸ್ತುತ ಸನ್ನಿವೇಶದಲ್ಲಿ ಯುವ ಜನತೆ ಪರಸ್ಪರ ಪ್ರೀತಿಸುವ ಗುಣ, ಪ್ರಶ್ನಿಸುವ, ಸಮಸ್ಯೆಗೆ ಉತ್ತರ ಹುಡುಕುವ ಗುಣ ಬೆಳಸಿಕೊಳ್ಳುವ ಅನಿವಾರ್ಯತೆ ಇದೆ ಎಂದರು.
ಅರಸೀಕೆರೆ ಕೋಡಿಮಠ ಪ.ಪೂ. ಕಾಲೇಜಿನ ಉಪನ್ಯಾಸಕ ಡಾ.ಬಿ.ಡಿ.ಕುಮಾರ್ ಉಪನ್ಯಾಸ ನೀಡಿ ಕನಕದಾಸರ ಬಾಲ್ಯ, ಶಿಕ್ಷಣ, ಬದುಕು, ಸಂತರಾದ ಬಗೆ ಕುರಿತು ವಿವರಿಸಿ, ಕನಕದಾಸರು ಸಾಮಾಜಿಕ ನ್ಯಾಯ, ಜಾತ್ಯತೀತತೆ, ಮೀಸಲಾತಿ, ಸಮಾನತೆ ಬಗ್ಗೆ ಅಂದಿನ ದಿನದಲ್ಲೆ ಕನಕರು ಬೆಳಕು ಚೆಲ್ಲಿದ್ದರು. ವಿಶ್ವ ಸಾಹಿತ್ಯದಲ್ಲಿ ಕನಕದಾಸರು ಮತ್ತು ರಾಮಧಾನ್ಯ ಚರಿತ್ರೆ ವಿಶ್ವಮಾನ್ಯತೆ ಪಡೆದಿರುವ ಶ್ರೇಷ್ಠ ಕೃತಿಯಾಗಿದೆ ಎಂದು ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಡಾ. ಕೆ ಬಾಷಾ ಮಾತನಾಡಿ, ವಿದ್ಯಾರ್ಥಿಗಳು ಮಾನವೀಯ ಮೌಲ್ಯ ಮತ್ತು ಆಧ್ಯಾತ್ಮಿಕ ಗುಣಗಳನ್ನು ಬೆಳಸಿಕೊಳ್ಳಬೇಕೆಂದರು.  
ಹೆಸರಾಂತ ಗಾಯಕ ಎಂ.ಎಸ್. ಸುಧೀರ್ ಹಾಗೂ ಮಲ್ಲಿಗೆ ಸುಧೀರ್ ಕನಕದಾಸರ ಕೀರ್ತನೆಗಳನ್ನು ಸುಮಧುರವಾಗಿ ಹಾಡಿದರು. ವೆಂಕಟೇಶ್‌ಕುಮಾರ್ ಎಚ್.ಬಿ. ಮತ್ತು ಎನ್.ಆರ್.ಪ್ರಸಾದ್ ಪಕ್ಕವಾದ್ಯ ನುಡಿಸಿದರು.
ಬೆಳ್ಳಿಮಂಡಲ ಜಿಲ್ಲಾ ಸಂಚಾಲಕ ಪ್ರಸನ್ನಕುಮಾರ್, ಉಪನ್ಯಾಸಕ ಶಂಕರಲಿಂಗೇಗೌಡ, ಸತೀಶ್, ಶ್ರೀನಿವಾಸನಾಯಕ್, ಪ್ರದೀಪ್, ಪ್ರಿಯಾಂಕ, ಸೌಮ್ಯ, ದಿಲೀಪ್, ಕಮಲಾಕ್ಷಿ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement