ತಾಲೂಕು ಮಟ್ಟದ ಪ್ರೌಢಶಾಲಾ ಕ್ರೀಡಾಕೂಟಕ್ಕೆ ಚಾಲನೆ
ಕ.ಪ್ರ.ವಾರ್ತೆ , ಅರಸೀಕೆರೆ , ಆ.30
ಕ್ರೀಡೆಗಳು ಸೌಹಾರ್ದತೆ ಬೆಳೆಸಲು ಹಾಗೂ ಓದಿಗೆ ಸ್ಫೂರ್ತಿದಾಯಕ. ಮಕ್ಕಳು ಮುಕ್ತಮನಸ್ಸಿನಿಂದ ಕ್ರೀಡಾಚಟುವಟಿಕೆಗಳಲ್ಲಿ ಪಾಲ್ಗೊಳ್ಳಬೇಕೆಂದು ತಾಪಂ ಅಧ್ಯಕ್ಷ ಎಚ್.ಟಿ.ಶಿವಮೂರ್ತಿ ಕರೆ ನೀಡಿದರು.
ಪಟ್ಟಣದ ಜೇನುಕಲ್ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ತಾಲೂಕು ಮಟ್ಟದ ಪ್ರೌಢಶಾಲಾ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಮಾತನಾಡಿದ ಅವರು ಕ್ರೀಡೆಯಿಂದ ಉತ್ತಮ ಆರೋಗ್ಯ, ಸದೃಢ ಮನಸ್ಸು ಮತ್ತು ಮಾನಸಿಕ ಸ್ಥೈರ್ಯವನ್ನು ವೃದ್ಧಿಸುತ್ತದೆ ಎಂದು ಅವರು ಅಭಿಪ್ರಾಯಪಟ್ಟರು.
ಕ್ರೀಡೆಗಳಲ್ಲಿ ಸೋಲು ಹಾಗೂ ಗೆಲುವು ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಪರಸ್ಪರರು ಪ್ರೀತಿ, ವಿಶ್ವಾಸ ಗಳಿಸಲು ಕ್ರೀಡೆಗಳು ನೆರವಾಗಬೇಕು. ಶೈಕ್ಷಣಿಕ ಚಟುವಟಿಕೆಗಳಲ್ಲಿ ಓದು ಹೇಗೆ ಮುಖ್ಯವೋ ಆಟೋಟ ಚಟುವಟಿಕೆಗಳು ಕೂಡ ಅಷ್ಟೇ ಮುಖ್ಯ. ಭಾಗವಹಿಸಿರುವ ಶಾಲಾ ತಂಡಗಳು ಉತ್ಸಾಹದಿಂದ ಪಾಲ್ಗೊಳ್ಳುವಂತೆ ಕಿವಿಮಾತು ಹೇಳಿದ ಅವರು ಗೆದ್ದನೆಂದು ಹಿಗ್ಗಬೇಡ, ಸೋತನೆಂದು ಕುಗ್ಗಬೇಡ ಎಂಬ ನಾಣ್ಣುಡಿಯಂತೆ ಸ್ಪರ್ಧಾತ್ಮಕವಾಗಿ ಪೈಪೋಟಿ ನಡೆಸಿ ಗೆಲವು ಸಾಧಿಸಬೇಕೆಂದರು.
ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಪಿ. ನಟರಾಜ್ ಮಾತನಾಡಿ, ಸದೃಢ ದೇಹದಿಂದ ಸದೃಢ ಮನಸ್ಸು ರೂಪಿಸಿಕೊಳ್ಳಲು ಸಾಧ್ಯ. ಕ್ರೀಡಾ ಮನೋಭಾವದಿಂದ ಪಾಲ್ಗೊಂಡು ಗೆಲುವು ಸೋಲನ್ನು ಸಮಚಿತ್ತದಿಂದ ಸ್ವೀಕರಿಸುವ ಗುಣ ಬೆಳೆಸಿಕೊಳ್ಳಬೇಕೆಂದು ಹೇಳಿದರು.
ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾ ಅಧ್ಯಕ್ಷ ಶಿವೇಗೌಡ, ಪ್ರೌಢ ಶಾಲೆ ಸಹ ಶಿಕ್ಷಕರ ಸಂಘ ತಾಲೂಕು ಅಧ್ಯಕ್ಷ ಕಲ್ಯಾಣಕುಮಾರ್, ಕಾರ್ಯದರ್ಶಿ ಮೋತಿಲಾಲ್‌ನಾಯಕ್ ಇದ್ದರು. ಇದೇ ವೇಳೆ ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಕ ತಿಮ್ಮೇಶ್ ಕ್ರೀಡಾಪಟುಗಳಿಗೆ ಮಾರ್ಗದರ್ಶನ ನೀಡಿದರು.