ನಾರಿಮಣಿಯರಿಬ್ಬರ ಪೈಪೋಟಿ
ಹಾಸನ: ಅಂತೂ ಇಂತೂ ಹಾಸನ ನಗರಸಭೆಯಲ್ಲಿ ಜನಪ್ರತಿನಿಧಿಗಳ ಆಡಳಿತ ಬರುತ್ತಿದೆ. ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಗಳಿಗೆ ಚುನಾವಣೆ ನಡೆಸಲು ಸೆಪ್ಟೆಂಬರ್ 6 ರಂದು ಸಾಮಾನ್ಯ ಸಭೆ ಕರೆಯಲಾಗಿದೆ. ಅಧ್ಯಕ್ಷ ಸ್ಥಾನ ಪರಿಶಿಷ್ಟ ಜಾತಿ ಮಹಿಳೆಗೆ, ಉಪಾಧ್ಯಕ್ಷ ಸ್ಥಾನ ಸಾಮಾನ್ಯ ವರ್ಗಕ್ಕೆ ಮೀಸಲು ಮಾಡಲಾಗಿದೆ.
ನಗರಸಭೆಯಲ್ಲಿ ಜೆಡಿಎಸ್ ಬಹುಮತ ಹೊಂದಿದೆ. ಆದ್ದರಿಂದ ಎರಡೂ ಸ್ಥಾನಗಳು ಆ ಪಕ್ಷಕ್ಕೆ ಧಕ್ಕುತ್ತವೆ. ಆದರೂ ಉಪಾಧ್ಯಕ್ಷ ಸ್ಥಾನಕ್ಕೆ 20 ನೇ ವಾರ್ಡ್ನಿಂದ ಪಕ್ಷೇತರರಾಗಿ ಆಯ್ಕೆಯಾಗಿ, ಜೆಡಿಎಸ್ ಸೇರಿರುವ ಸದಸ್ಯ ಅಮೀರ್ಜಾನ್ ಅವರನ್ನು ಆಯ್ಕೆ ಮಾಡುವ ಸಾಧ್ಯತೆಗಳಿವೆ. ಒಂದು ವೇಳೆ ಇದಕ್ಕೆ ಇತರೆ ಸದಸ್ಯರು ವಿರೋಧ ವ್ಯಕ್ತಪಡಿಸಿದರೆ ಮೂವರಿಗೆ ತಲಾ ಹತ್ತತ್ತು ತಿಂಗಳು ನಿಗದಿ ಮಾಡುವ ಚಿಂತನೆ ಜೆಡಿಎಸ್ ಮುಖಂಡರಲ್ಲಿ ಇದೆ.
ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ಬಗ್ಗೆ ಜೆಡಿಎಸ್ ಮುಖಂಡ ಎಚ್.ಡಿ.ರೇವಣ್ಣ ಅಷ್ಟೇನು ತಲೆ ಕೆಡಿಸಿಕೊಂಡಂತೆ ಕಾಣುತ್ತಿಲ್ಲ. ಶಾಸಕ ಎಚ್.ಎಸ್. ಪ್ರಕಾಶ್, ಎಂಎಲ್ಸಿ ಪಟೇಲ್ ಶಿವರಾಂ, ಮುಖಂಡ ಕೆ.ಎಂ.ರಾಜೇಗೌಡ ಮತ್ತಿತರರಿಗೆ ಈ ಜವಾಬ್ದಾರಿ ವಹಿಸಿದ್ದಾರೆ. ಎರಡೂ ಸ್ಥಾನಗಳಿಗೆ ಸೂಕ್ತರನ್ನು ಆಯ್ಕೆ ಮಾಡುವ ಪ್ರಕ್ರಿಯೆಯಲ್ಲಿ ತೊಡಗಿಸಿಕೊಳ್ಳುವ ತಂಡದಲ್ಲಿ ಶಾಸಕ ಪ್ರಕಾಶ್ ಇರುವುದರಿಂದ, ಉಪಾಧ್ಯಕ್ಷ ಸ್ಥಾನ ಎಚ್.ಎಸ್. ಅನಿಲ್ಕುಮಾರ್ ಅವರಿಗೆ ಲಭ್ಯವಾಗುತ್ತಿಲ್ಲ. ಮುಸ್ಲಿಂರನ್ನೇ ಉಪಾಧ್ಯಕ್ಷ ಸ್ಥಾನಕ್ಕೆ ಆಯ್ಕೆ ಮಾಡುವುದು ಬಹುತೇಕ ಖಚಿತವಾದಂತಿದೆ.
ಅಧ್ಯಕ್ಷ ಸ್ಥಾನಕ್ಕೆ 1 ನೇ ವಾರ್ಡ್ನಿಂದ ಆಯ್ಕೆಯಾಗಿರುವ ದಲಿತ ಮುಖಂಡ ದಿ. ಚಂದ್ರಪ್ರಸಾದ್ ತ್ಯಾಗಿ ಅವರ ಪುತ್ರಿ ಸಿ. ಶುಭ ಮೊದಲ 15 ತಿಂಗಳ ಅವಧಿಗೆ ಅಧ್ಯಕ್ಷೆಯನ್ನಾಗಿ ಮಾಡಿ, ಉಳಿದ 15 ತಿಂಗಳ ಅವಧಿಗೆ 31 ನೇ ವಾರ್ಡ್ನಿಂದ ಆಯ್ಕೆಯಾಗಿರುವ ಎಚ್ .ಎಚ್. ಶ್ರೀ ವಿದ್ಯಾ ಅವರನ್ನು ಅಧ್ಯಕ್ಷೆಯನ್ನಾಗಿ ಮಾಡುವ ಸಂಭವವಿದೆ. ರಾಜ್ಯದಲ್ಲಿ ಜನತಾದಳ ಸರ್ಕಾರ ಇದ್ದಾಗ ರಾಜ್ಯ ಕೊಳಚೆ ನಿರ್ಮೂಲನಾ ಮಂಡಳಿ ಅಧ್ಯಕ್ಷರಾಗಿ ತ್ಯಾಗಿ ಅವರು ಪಕ್ಷಕ್ಕೆ ಸಾಕಷ್ಟು ಕೊಡುಗೆ ನೀಡಿರುವ ಹಿನ್ನೆಲೆಯಲ್ಲಿ ಶುಭ ಅವರನ್ನು ಅಧ್ಯಕ್ಷೆಯನ್ನಾಗಿ ಮಾಡಬೇಕು ಎಂಬ ಒತ್ತಡ ಇದೆ.
ಉತ್ತಮ ಅಭಿಪ್ರಾಯ: 20 ನೇ ವಾರ್ಡ್ನಿಂದ ಪಕ್ಷೇತರರಾಗಿ ಚುನಾಯಿತರಾಗಿರುವ ಅಮೀರ್ಜಾನ್, ತಮ್ಮ ಜನಾಂಗದಲ್ಲಿ ಉತ್ತಮ ಅಭಿಪ್ರಾಯ ಹೊಂದಿದ್ದು, ಉತ್ತಮ ನಡವಳಿಕೆ ಹೊಂದಿದ್ದಾರೆ. ಈ ಕಾರಣಕ್ಕಾಗಿ ಅವರನ್ನು ಉಪಾಧ್ಯಕ್ಷರನ್ನಾಗಿ ಮಾಡಲು ಕೆಲ ಜೆಡಿಎಸ್ ಮುಖಂಡರು ಒಲವು ತೋರಿದ್ದಾರೆ.
ಆದರೆ ಹಿಂದೆ ಕಾಂಗ್ರೆಸ್ನಿಂದ ಗೆದ್ದಿದ್ದರೂ ಕಷ್ಟಕಾಲದಲ್ಲಿ ಜೆಡಿಎಸ್ಗೆ ಬಂದು ನಗರಸಭೆ ಅಧಿಕಾರ ಹಿಡಿಯಲು ಸಹಕರಿಸಿದ್ದ ಏಜಾಜ್ಪಾಶಾ 2013 ರಲ್ಲಿ ನಡೆದ ಚುನಾವಣೆಯಲ್ಲಿ 17 ನೇ ವಾರ್ಡ್ ನಿಂದ ತೆನೆ ಹೊತ್ತ ಮಹಿಳೆ ಚಿನ್ನೆಯಿಂದ ಆರಿಸಿ ಬಂದಿದ್ದಾರೆ. ಅಲ್ಲದೇ 21 ವಾರ್ಡ್ನಿಂದ ಆಯ್ಕೆಯಾಗಿರುವ ಇರ್ಷಾದ್ ಅವರು 2 ನೇ ಬಾರಿಗೆ ಆಯ್ಕೆಯಾಗಿದ್ದಾರೆ. ಹಾಗಾಗಿ ಇವರಿಬ್ಬರೂ ಉಪಾಧ್ಯಕ್ಷ ಸ್ಥಾನದ ಸ್ಪರ್ಧೆಯಲ್ಲಿ ಇದ್ದಾರೆ.
ಮೂವರು ಒಮ್ಮತಕ್ಕೆ ಬಾರದಿದ್ದಲ್ಲಿ ಮೂವರಿಗೂ ತಲಾ ಹತ್ತತ್ತು ತಿಂಗಳ ಅವಧಿಗೆ ಉಪಾಧ್ಯಕ್ಷರನ್ನಾಗಿ ಮಾಡಲಾಗುತ್ತದೆ. ಹೀಗಾದರೂ ಪ್ರಥಮ ಅವಧಿಗೆ ಅಮೀರ್ಜಾನ್ ಉಪಾಧ್ಯಕ್ಷರಾಗುವುದನ್ನು ತಳ್ಳಿ ಹಾಕುವಂತಿಲ್ಲ.
ಪ್ರಸನ್ನ ಆಯ್ಕೆ ಕಷ್ಟ: ಈ ನಡುವೆ 12 ನೇ ವಾರ್ಡ್ನಿಂದ ಪಕ್ಷೇತರರಾಗಿ ಗೆದ್ದು ಜೆಡಿಎಸ್ ಸೇರಿರುವ ಎಚ್.ಎಸ್. ಪ್ರಸನ್ನಕುಮಾರ್ ಕೂಡಾ ಉಪಾಧ್ಯಕ್ಷ ಸ್ಥಾನದ ಆಕಾಂಕ್ಷಿಯಾಗಿದ್ದಾರೆ. ಶಾಸಕರೆ ಮುಸ್ಲಿಂ ಸಮುದಾಯಕ್ಕೆ ಸೇರಿದ ಸದಸ್ಯರನ್ನು ಉಪಾಧ್ಯಕ್ಷರನ್ನಾಗಿ ಮಾಡಲು ಮುಂದಾಗಿರುವುದರಿಂದ ಪ್ರಸನ್ನ ಆಯ್ಕೆ ಕಷ್ಟ.
-ದಯಾಶಂಕರ ಮೈಲಿ