ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ವಿಲೀನ ಪ್ರಕ್ರಿಯೆಗೆ ಭಾರಿ ವಿರೋಧ

Vishwanath S
Updated On : 30 Aug 2013, 11:51 am

ಕ.ಪ್ರ.ವಾರ್ತೆ , ಹಾಸನ , ಆ. 30
ನಾನಾ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಅಖಿಲ ಭಾರತ ಬ್ಯಾಂಕ್ ನೌಕರರ ಸಂಘದ ಹಾಗೂ ಇತರೆ ಬ್ಯಾಂಕ್ ನೌಕರರ ಸಂಘದ ಆಶ್ರಯದಲ್ಲಿ ಬ್ಯಾಂಕ್ ಸಿಬ್ಬಂದಿ ಶುಕ್ರವಾರ ಪ್ರತಿಭಟನೆ ನಡೆಸಿದರು.
ಪ್ರತಿಭಟನಕಾರರು ನಗರದ ಕೇಂದ್ರ ಬ್ಯಾಂಕ್ ಮುಂದೆ ಜಮಾವಣೆಗೊಂಡು ಸಹವರ್ತಿ ಬ್ಯಾಂಕ್‌ಗಳನ್ನು ಎಸ್‌ಬಿಐಗೆ ವಿಲೀನಗೊಳಿಸುತ್ತಿರುವುದರ ವಿರುದ್ಧ ಘೋಷಣೆ ಕೂಗಿ, ವಿಲೀನಕ್ಕೆ ಆಕ್ರೋಶ ವ್ಯಕ್ತಪಡಿಸಿದರು.
ಪ್ರಮುಖ ಬ್ಯಾಂಕ್‌ಗಳಾದ ಸ್ಟೇಟ್ ಬ್ಯಾಂಕ್ ಆಫ್ ಮೈಸೂರು, ಕಾರ್ಪೋರೇಷನ್ ಬ್ಯಾಂಕ್, ಕೆನರಾ, ಕಾವೇರಿ ಕಲ್ಪತರು ಬ್ಯಾಂಕ್, ವಿಜಯಾ ಬ್ಯಾಂಕ್, ಸಿಂಡಿಕೇಟ್ ಬ್ಯಾಂಕ್ ಸೇರಿದಂತೆ ಇತರೆ ನಾನಾ ಸಹವರ್ತಿ ಬ್ಯಾಂಕ್ ಗಳನ್ನು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದೊಂದಿಗೆ ವಿಲೀನಗೊಳಿಸಲು ಕೇಂದ್ರ ಸರ್ಕಾರ ಮುಂದಾಗಿರುವುದು  ಸರ್ವತ ಸರಿಯಲ್ಲ. ಇದರಿಂದ ಪ್ರಸ್ತುತ ನಾನಾ ಬ್ಯಾಂಕ್‌ಗಳಲ್ಲಿನ ನೌಕರರಿಗೆ ಅನ್ಯಾಯವಾಗಲಿದೆ ಎಂದು ಆರೋಪಿಸಿದರು.
ನೌಕರರಿಗೆ ಆಗುವ ಪ್ರಯೋಜನವೇನು?:   ಸಹವರ್ತಿ ಬ್ಯಾಂಕ್‌ಗಳು ಪ್ರಸ್ತುತ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿರುವುದರಿಂದ ಲಾಭದಲ್ಲಿ ನಡೆಯುತ್ತಿವೆ. ಈ ಎಲ್ಲಾ ಬ್ಯಾಂಕ್‌ಗಳನ್ನು ಕೇವಲ ಒಂದೇ ಬ್ಯಾಂಕ್‌ಅಡಿಯಲ್ಲಿ ವಿಲೀನಗೊಳಿಸುವುದು ಎಷ್ಟು ಸರಿ?. ವಿಲೀನವಾದಲ್ಲಿ ಬ್ಯಾಂಕ್‌ಗಳು ಸ್ವತಂತ್ರವಾಗಿ ಕಾರ್ಯನಿರ್ವಹಿಸಲು ಸಾಧ್ಯವಾಗುವುದಿಲ್ಲ. ಅಷ್ಟೇ ಅಲ್ಲದೆ ಬ್ಯಾಂಕ್‌ನೌಕರರಿಗೆ ಪ್ರಸ್ತುತ ನೀಡುವ ವೇತನಕ್ಕೆ ಹೋಲಿಸಿದರೆ ವಿಲೀನ ನಂತರ ಸಾಕಷ್ಟು ವ್ಯತ್ಯಾಸಗಳು ಉಂಟಾಗಲಿದೆ.
ಈ ಸಂಬಂಧವಾಗಿ ಎಲ್ಲಾ ಸಹವರ್ತಿ ಬ್ಯಾಂಕ್‌ಗಳನ್ನು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದೊಂದಿಗೆ ವಿಲೀನ ಮಾಡುವುದಾಗಿ ಹೇಳಲಾಗಿದೆ. ಆದರೆ ಸಿಬ್ಬಂದಿಗೆ ಅಲ್ಲಿನ ವೇತನ ಶ್ರೇಣಿಯ ಬಗ್ಗೆ ಎಲ್ಲಿಯೂ ಸರಿಯಾಗಿ ಮಾಹಿತಿ ನೀಡಿಲ್ಲ. ವಿಲೀನಗೊಳಿಸುವ ಮುನ್ನ ಇದರಿಂದ ನೌಕರರಿಗೆ ಆಗುವ ಪ್ರಯೋಜನ ತಿಳಿಸಿ ನಂತರ ವಿಲೀನಗೊಳಿಸಬೇಕು ಎಂದು ಒತ್ತಾಯಿಸಿದರು.
ಬ್ಯಾಂಕ್‌ಗಳನ್ನು ವಿಲೀನಗೊಳಿಸುವ ಮುನ್ನ ಎಸ್‌ಎಸ್‌ಬಿಇಎ ಉಪಸಮಿತಿ ವರದಿ ಜಾರಿಗೊಳಿಸಬೇಕು. ಈ ವರದಿಯಲ್ಲಿ ಸಿಬ್ಬಂದಿಗೆ ನೀಡುವಂತಹ ವೇತನದ ಬಗ್ಗೆ ಸಂಕ್ಷಿಪ್ತ ವರದಿ ಇದ್ದು, ಆ ಬಗ್ಗೆ ಮೊದಲು ಸಿಬ್ಬಂದಿಗೆ ತಿಳಿಸಿ ನಂತರ ವಿಲೀನ ಕಾರ್ಯಕ್ಕೆ ಮುಂದಾಗಬೇಕು. ಅದನ್ನು ಬಿಟ್ಟು ಏಕಾಏಕಿ ಬ್ಯಾಂಕ್‌ಗಳ ವಿಲೀನಗೊಳಿಸಿದರೆ ತೀವ್ರ ವಿರೋಧ ಪಡಿಸುವುದಾಗಿ ಪ್ರತಿಭಟನಾಕಾರರು ಎಚ್ಚರಿಕೆ ನೀಡಿದರು.
ಎಸ್‌ಬಿಐನೊಂದಿಗೆ ಮೈತ್ರಿ ಸರಿಯಲ್ಲ:  ಹಲವು ವರ್ಷಗಳಿಂದ ವಿವಿಧ ಬ್ಯಾಂಕ್‌ಗಳಲ್ಲಿ ನೌಕರರು ಪ್ರಾಮಾಣಿಕವಾಗಿ ತಮ್ಮ ಕೆಲಸ ನಿರ್ವಹಿಸಿಕೊಂಡು ಬಂದಿದ್ದಾರೆ. ಈಗ ಬ್ಯಾಂಕ್ ನೌಕರರಿಗೆ ತಿಳಿಸಿದೆ ಎಸ್‌ಬಿಐನೊಂದಿಗೆ ಮೈತ್ರಿ ಮಾಡುತ್ತಿರುವುದು ಸರಿಯಲ್ಲ. ಇದು ನೌಕರರಲ್ಲಿ ತೀವ್ರ ಅಸಮಾಧಾನಕ್ಕೆ ಕಾರಣವಾಗಿದೆ. ಕೂಡಲೇ ಸಂಬಂಧಪಟ್ಟವರು ಎಸ್‌ಬಿಐನೊಂದಿಗೆ ವಿಲೀನ ಕ್ರಮ ಕೈಬಿಡಬೇಕು. ಇಲ್ಲವಾದಲ್ಲಿ ಇದರ ವಿರುದ್ಧ ಉಗ್ರ ಹೋರಾಟ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದರು.
ಪ್ರತಿಭಟನೆಯಲ್ಲಿ ಅಖಿಲ ಭಾರತ ಬ್ಯಾಂಕ್ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ರಮೇಶ್, ಜಿಲ್ಲಾ ಕಾರ್ಯದರ್ಶಿ ಕುಮಾರ್, ಪೂರ್ಣಚಂದ್ರ, ಮೋಹನ್‌ಕುಮಾರ್, ಚಂದ್ರಶೇಖರ್, ಮಂಜುನಾಥ್ ಇತತರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement