ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಅದಾಲತ್; ರಾಜ್ಯದಲ್ಲೇ ಜಿಲ್ಲೆ ಪ್ರಥಮ

Rashmi Kasaragodu
Updated On : 1 Dec 2013, 11:52 am

ಕ.ಪ್ರ.ವಾರ್ತೆ    ಹಾಸನ    ಡಿ.1
ಮೆಗಾ ಲೋಕ್ ಅದಾಲತ್ನಲ್ಲಿ 6176 ಪ್ರಕರಣಗಳನ್ನು ಇತ್ಯರ್ಥಪಡಿಸುವ  ಮೂಲಕ ಹಾಸನ ಜಿಲ್ಲೆ ರಾಜ್ಯದಲ್ಲೇ ಮೊದಲ ಸ್ಥಾನ ಗಳಿಸಿದೆ. ಇದಕ್ಕಾಗಿ ರಾಜ್ಯ ಉಚ್ಚ ನ್ಯಾಯಾಲಯದ ನ್ಯಾಯಾಧೀಶರು ಹಾಸನ ಜಿಲ್ಲೆಯನ್ನು ಅಭಿನಂದಿಸಿದ್ದಾರೆ.
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ಜಿಲ್ಲಾ ವಕೀಲರ ಸಂಘದ ಸಂಯುಕ್ತಾಶ್ರಯದಲ್ಲಿ ಜಿಲ್ಲಾ ನ್ಯಾಯಾಲಯದ ಆವರಣದಲ್ಲಿ ನಡೆದ ಮೆಗಾ ಲೋಕ್ ಅದಾಲತ್ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಹೈಕೋರ್ಟ್ ನ್ಯಾಯಾಧೀಶ ಕೆ.ಎಲ್. ಮಂಜುನಾಥ್ ಮಾತನಾಡಿ, ರಾಜ್ಯಾದ್ಯಂತ ಮೆಗಾ ಲೋಕ ಅದಾಲತ್ ಮೂಲಕ ಕೇವಲ 15 ದಿನಗಳಲ್ಲಿ 95,000 ಪ್ರಕರಣಗಳನ್ನು ಇತ್ಯರ್ಥಪಡಿಸಿ ನೊಂದವರಿಗೆ ಪರಿಹಾರ ಒದಗಿಸಲಾಗಿದ್ದು, ಇದೊಂದು ಸಾರ್ಥಕ ಕೆಲಸವಾಗಿದೆ. ಈ ಮೆಗಾ ಲೋಕ್ ಅದಾಲತ್ನ ಯಶಸ್ಸಿಗೆ ಕಾರಣರಾದ ಪ್ರತಿಯೊಬ್ಬರನ್ನೂ ಅಭಿನಂದಿಸಿದರು.
ಶೇ.12ರಷ್ಟು ಪ್ರಕರಣ ಇತ್ಯರ್ಥ: ಉಚ್ಚ ನ್ಯಾಯಾಲಯದ ನ್ಯಾಯಾಧೀಶ ಹಾಗೂ ಹಾಸನ ಜಿಲ್ಲೆಯ ಆಡಳಿತಾತ್ಮಕ ನ್ಯಾಯಾಧೀಶರೂ ಆದ ಬಿ.ಎಸ್. ಪಾಟೀಲ್ ಮಾತನಾಡಿ, ಜಿಲ್ಲೆಯಲ್ಲಿ ಬಾಕಿ ಉಳಿದಿದ್ದ 43,000 ಪ್ರಕರಣಗಳಲ್ಲಿ ಶೇ.12ರಷ್ಟನ್ನು ಮೆಗಾ ಲೋಕ್ ಅದಾಲತ್ನಲ್ಲಿ ಇತ್ಯರ್ಥಪಡಿಸಲಾಗಿದೆ. ಇದು ಉತ್ತಮ ಸಾಧನೆ ಆದರೆ ಈ ಜವಾಬ್ದಾರಿಯನ್ನು ಹಾಗೇ ಮುಂದುವರೆಸಬೇಕಾದ ಹೊಣೆಗಾರಿಕೆ ನ್ಯಾಯಾಧೀಶರು, ನ್ಯಾಯವಾದಿಗಳು ಹಾಗೂ ಕಕ್ಷಿದಾರರ ಮೇಲಿದೆ ಎಂದರು.
ಜಿಲ್ಲಾ ಸತ್ರ ನ್ಯಾಯಾಧೀಶ ಜೆ.ಎಸ್. ಸೋಮಶೇಖರ್, ಹೆಚ್ಚು ಮುತುವರ್ಜಿಯಿಂದ ಎಲ್ಲರನ್ನೂ ಒಗ್ಗೂಡಿಸಿ ಕೆಲಸ ಮಾಡಿದ ಜಿಲ್ಲಾ ಕಾನುನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಯೂ ಆಗಿರುವ ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶರು ಮತ್ತು ಸಿಜೆಎಂ ಮುಸ್ತಾಫಾ ಹುಸೇನ್ ಹಾಗೂ ಇತರ ನ್ಯಾಯಾಧೀಶರೂ ವಕೀಲರ ಸಂಘದ ಅಧ್ಯಕ್ಷ ದೇವರಾಜೇಗೌಡ, ಮತ್ತು ಎಲ್ಲಾ ವಕೀಲರನ್ನು ಅಭಿನಂದಿಸಿ ಮೆಚ್ಚುಗೆ ಸೂಚಿಸಿದರು.
ಪ್ರಸ್ತಾವಿಕ ನುಡಿಗಳನ್ನಾಡಿದ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಜೆ.ಎಸ್. ಸೋಮಶೇಖರ್ ಅವರು ಯಶಸ್ಸಿಗೆ ಕಾರಣರಾದ ಎಲ್ಲರಿಗೂ ಕೃತಜ್ಞತೆ ಸಲ್ಲಿಸುವುದಾಗಿ ತಿಳಿಸಿದರು.
ಪ್ರಯತ್ನ ಮುಂದುವರಿಯಲಿ: ರಾಜ್ಯ ಉಚ್ಚ ನ್ಯಾಯಾಲಯದ ನ್ಯಾಯಾಧೀಶ ಕೆ.ಎನ್. ಕೇಶವನಾರಾಯಣ್ ಮಾತನಾಡಿ, ನಾಯಕತ್ವ ಉತ್ತಮವಾಗಿದ್ದರೆ ಯಶಸ್ಸು ಚೆನ್ನಾಗಿರುತ್ತದೆ. ಇಂತಹ ಅದಾಲತ್ಗಳಿಂದ ನೊಂದವರ ಅಳಲನ್ನು ಬೇಗ ಆಲಿಸಿ ಪರಿಹರಿಸಬಹುದು. ಹಾಸನ ಜಿಲ್ಲೆಯಲ್ಲಿ ಇದೇ ರೀತಿಯ ಪ್ರಯತ್ನಗಳು ಮುಂದುವರೆಯಲಿ ಎಂದು ತಿಳಿಸಿದರು.
ಜಿಲ್ಲಾಧಿಕಾರಿ ವಿ. ಅನ್ಬುಕುಮಾರ್ ಮಾತನಾಡಿ, ಮೆಗಾ ಲೋಕ ಅದಾಲತ್ನಂತೆ ಕಂದಾಯ ಇಲಾಖೆಯಲ್ಲಿರುವ ಪ್ರಕರಣಗಳನ್ನು ಅದಾಲತ್ ಮೂಲಕ ಇತ್ಯರ್ಥಪಡಿಸುವಂತೆ ಉಚ್ಚ ನ್ಯಾಯಾಲಯದ ನ್ಯಾಯಾಧೀಶರು ನಿರ್ದೇಶನ ನೀಡಿದ್ದಾರೆ. ಅದನ್ನು ಪಾಲಿಸಲಾಗುವುದು ಶೀಘ್ರವೇ ಇಂತಹ ಚಟುವಟಿಕೆ ನಡೆಸಿ ಜನರಿಗೆ ತ್ವರಿತ ಸೇವೆ ಒದಗಿಸಲಾಗುವುದು ಎಂದರು.
6.5 ಕೋಟಿ ಪರಿಹಾರ: ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ದೇವರಾಜೇಗೌಡ ಮಾತನಾಡಿ, ಅದಾಲತ್ನಲ್ಲಿ 6176 ಪ್ರಕರಣಗಳನ್ನು ರಾಜೀ ಮೂಲಕ ಇತ್ಯರ್ಥಪಡಿಸಿ ಸುಮಾರು 6.5 ಕೋಟಿ ಪರಿಹಾರವನ್ನು ಕಕ್ಷಿದಾರರಿಗೆ ಒದಗಿಸಲಾಗಿದೆ. ಇದಕ್ಕೆ ವಿಮಾ ಕಂಪನಿಗಳು ಕೆಎಸ್ಆರ್ಟಿಸಿ ಅಧಿಕಾರಿಗಳು ವಕೀಲರು ನ್ಯಾಯಾಧೀಶರ ಪರಿಶ್ರಮ ಸಹಕಾರವೂ ಕಾರಣವಾಗಿದೆ. ಇವರೆಲ್ಲರಿಗೂ ಧನ್ಯವಾದ ಅರ್ಪಿಸುವುದಾಗಿ ತಿಳಿಸಿದರು.
ನ್ಯಾಯಾಧೀಶ ಎ.ವಿ. ಚಂದ್ರಶೇಖರ್, ನ್ಯಾಯಾಧೀಶ ಅಶೋಕ್ ಜಿ. ನಿಂಗಣ್ಣ ಮಾತನಾಡಿದರು. ಕಾರ್ಯಕ್ರಮದಲ್ಲಿ ಲೋಕಾ ಅದಾಲತ್ನಲ್ಲಿ ಇತ್ಯರ್ಥಗೊಂಡ ಪ್ರಕರಣಗಳಲ್ಲಿ ಕಕ್ಷಿದಾರರಿಗೆ ದೊರೆಯಬೇಕಾದ ಪರಿಹಾರ ಧನದ ಚೆಕ್ ವಿತರಿಸಲಾಯಿತು.
ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶರು ಮತ್ತು ಸಿಜೆಎಂ ಮುಸ್ತಾಫಾ ಹುಸೇನ್ ಸ್ವಾಗತಿಸಿದರು. ವಕೀಲರ ಸಂಘದ ಕಾರ್ಯದರ್ಶಿ ವಸಂತಕುಮಾರ್ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement