ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

'ಅನ್ನದ ಭಾಷೆಯಾದರೆ ಮಾತ್ರ ಕನ್ನಡದ ಉಳಿವು'

Rashmi Kasaragodu
Updated On : 1 Dec 2013, 11:53 am

ಕ.ಪ್ರ.ವಾರ್ತೆ    ಹಾಸನ    ಡಿ.1
ಕನ್ನಡದ ಭಾಷೆ ಔದ್ಯಮಿಕ ಭಾಷೆಯಾಗಿ ಅನ್ನದ ಭಾಷೆಯಾದರೆ ಮಾತ್ರ ಕನ್ನಡ ಉಳಿಯಲು ಸಾಧ್ಯ ಎಂದು ಸರ್ಕಾರಿ ಕಲಾ ಕಾಲೇಜಿನ ಪ್ರಾಧ್ಯಾಪಕ, ಜಾನಪದ ವಿದ್ವಾಂಸ ಡಾ. ಹಂಪನಹಳ್ಳಿ ತಿಮ್ಮೇಗೌಡ ಅಭಿಪ್ರಾಯಪಟ್ಟಿದ್ದಾರೆ.
ನಗರದ ಸರ್ಕಾರಿ ಶುಶ್ರೂಷ ಮಹಾವಿದ್ಯಾಲಯದಲ್ಲಿ ಇತ್ತೀಚೆಗೆ ಏರ್ಪಡಿಸಿದ್ದ ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿ, ಮನುಷ್ಯ ಬದುಕಬೇಕಾದರೆ ಮುಖ್ಯವಾಗಿ ಅನ್ನಬೇಕು. ಈ ಮಣ್ಣಿನಲ್ಲಿ ಹುಟ್ಟಿದ ಜನರಿಗೆ ತಾಯ್ನಾಡಿನಲ್ಲಿಯೇ ಬದುಕಲು ಉದ್ಯೋಗವಿಲ್ಲದಿದ್ದರೆ ನಾಡು, ನುಡಿ ಭಾಷೆ, ಸಂಸ್ಕೃತಿ, ಹೇಗೆ ಉಳಿಯಲು ಸಾಧ್ಯ ಎಂದು ಪ್ರಶ್ನಿಸಿದರು.
ಕನ್ನಡ ನಾಡು, ನುಡಿ, ಸಂಸ್ಕೃತಿ, ಭಾಷೆ, ಸಾಹಿತ್ಯ ಉಳಿಯಬೇಕಾದರೆ ಸರೋಷಿನಿ ಮಹಿಷಿ ವರದಿಯನ್ನು ಸಂಪೂರ್ಣ ಅನುಷ್ಠಾನಗೊಳಿಸಬೇಕು, ಗಡಿನಾಡು ಕನ್ನಡಿಗರನ್ನು ರಕ್ಷಿಸಬೇಕು ಹಾಗೂ ಏಕರೂಪ ಶಿಕ್ಷಣ ವ್ಯವಸ್ಥೆಯನ್ನು ಜಾರಿಗೊಳಿಸಬೇಕು ಎಂದು ಒತ್ತಾಯಿಸಿದರು.
ಹಾಸನ ವೈದ್ಯಕೀಯ ವಿಜ್ಞಾನ ಸಂಸ್ಥೆಯ ನಿರ್ದೇಶಕ ಡಾ. ಎನ್. ರಾಚೇಗೌಡ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಕನ್ನಡ ಭಾಷೆ ಪುರಾತನ ಇತಿಹಾಸವನ್ನು ಹೊಂದಿರುವ ಭಾಷೆ. ಈ ಭಾಷೆಗೆ ಎಂಟು ಜ್ಞಾನಪೀಠ ಪ್ರಶಸ್ತಿಗಳು ಲಭ್ಯವಾಗಿದೆ ಎಂದು ಹೆಗ್ಗಳಿಕೆ ವ್ಯಕ್ತಪಡಿಸಿದರು. ಪತ್ರಕರ್ತೆ ಸುವರ್ಣಾ ಮಾತನಾಡಿ, ಕನ್ನಡ ರಾಜ್ಯೋತ್ಸವ ಕೇವಲ ನವೆಂಬರ್ ತಿಂಗಳಿಗೆ ಮಾತ್ರ ಸೀಮಿತವಾಗದೆ ನಿತ್ಯೋತ್ಸವವಾಗಬೇಕು. ಇಂದಿನ ಜಾಗತೀಕರಣ ಸ್ಮರ್ಧಾತ್ಮಕ ಯುಗದಲ್ಲಿ ಅನ್ಯ ಭಾಷೆಯನ್ನು ಕಲಿಯುವುದರ ಜೊತೆಯಲ್ಲಿಯೇ ಕನ್ನಡ ಭಾಷೆ, ಸಾಹಿತ್ಯ ಸಂಸ್ಕೃತಿಯನ್ನು ಉಳಿಸುವುದು ಅಗತ್ಯವಿದೆ ಎಂದರು.
ನರ್ಸಿಂಗ್ ವಿದ್ಯಾರ್ಥಿಗಳು ತಮ್ಮ ಪದವಿ ಮುಗಿದ ನಂತರ ಕಡ್ಡಾಯವಾಗಿ ಗ್ರಾಮೀಣ ಪ್ರದೇಶದಲ್ಲಿ ಸೇವೆ ಸಲ್ಲಿಸಿ ಈ ನಾಡಿನ ಋಣವನ್ನು ತೀರಿಸಿ ಎಂದು ಮನವಿ ಮಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸರ್ಕಾರಿ ಶುಶ್ರೂಷ ಮಹಾವಿದ್ಯಾಲಯದ ಪ್ರಾಂಶುಪಾಲ ಶೋಭಾ ದೇವಮಾನೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ವಿದ್ಯಾರ್ಥಿ ಸಂಘದ ಸಲಹೆಗಾರರಾದ ಉಪನ್ಯಾಸಕಿ ಅನಿತಾ ಇದ್ದರು. ದಿವ್ಯದರ್ಶನ್ ಸ್ವಾಗತಿಸಿದರು. ಸುಕೇಶ್ ಪ್ರಾರ್ಥಿಸಿದರು. ವಾಸಂತಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಜ್ಯೋತಿ ವಂದಿಸಿದರು. ರಾಜ್ಯೋತ್ಸವದ ಅಂಗವಾಗಿ ಕಾಲೇಜಿನಲ್ಲಿ ವಿದ್ಯಾರ್ಥಿಗಳು ಜಾನಪದ ಸೊಗಡಿನಿಂದ ಕಾಲೇಜು ಆವರಣವನ್ನು ಸಿಂಗರಿಸಿದ್ದು, ಪ್ರೇಕ್ಷಕರ ಗಮನ ಸೆಳೆಯಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement