ಇಂದಿನಿಂದ ಕಿರಗಡಲು ಪಂಚಲಿಂಗ ದರ್ಶನ
ಎಚ್.ವಿ. ರಾಘವೇಂದ್ರ
ಆಲೂರು: ತಲಕಾಡಿನಂತೆಯೇ ಆಲೂರು ತಾಲೂಕಿನ ಕಿರಗಡಲು ಗ್ರಾಮದಲ್ಲಿ ಡಿ.2 ಮತ್ತು ಡಿ.3ರಂದು ನಡೆಯುವ ಪಂಚಲಿಂಗ ದರ್ಶನಕ್ಕೆ ಅದ್ಧೂರಿ ಸಿದ್ಧತೆ ನಡೆದಿದೆ.
ಪಂಚಲಿಂಗ ದರ್ಶನ ಎಂದೊಡನೆ ನೆನಪಾಗುವುದು ತಲಕಾಡು ಪಂಚಲಿಂಗ. ಹಾಸನ ಜಿಲ್ಲೆಯಲ್ಲೂ ಇಂತಹದೊಂದು ಪಂಚಲಿಂಗ ದರ್ಶನ ಇದೆ. ಅಚ್ಚರಿ ಎನಿಸಿದರೂ ಇದು ಸತ್ಯ. ಹಾಸನ ಜಿಲ್ಲೆಯ ಆಲೂರು ತಾಲೂಕಿನ ಕಿರಗಡಲು ಹೀಗೊಂದು ಪಂಚಲಿಂಗ ದರ್ಶನಕ್ಕೆ ಸಾಕ್ಷಿ. ಪ್ರಚಾರದ ಕೊರತೆ ಹಾಗೂ ಇತರೆ ಹಲವು ಕಾರಣದಿಂದ ಇಲ್ಲಿನ ಅಪರೂಪದ ಪಂಚಲಿಂಗ ದರ್ಶನ ಭಾಗ್ಯ ಭಕ್ತರನ್ನು ವಂಚಿತರನ್ನಾಗಿಸುಸುತ್ತಿದೆ.
ಚೋಳರ ಕಾಲದ್ದು: ಹಾಸನದಿಂದ ಆಲೂರು ಕಡೆಗೆ 12 ಕಿ.ಮೀ. ದೂರದಲ್ಲಿ ಇರುವ ಕಿರಗಡಲು ಗ್ರಾಮ ಪಂಚಲಿಂಗ ಹಾಗೂ ವಿಶಿಷ್ಟ ಧಾರ್ಮಿಕ ಆಚರಣೆಯಿಂದ ಸುತ್ತಮತ್ತಲು ಹೆಸರುವಾಸಿ. ಯಗಚಿ ನದಿ ದಡದಲ್ಲಿರುವ ಈ ಗ್ರಾಮದ ಪಂಚಲಿಂಗಗಳು ಚೋಳರ ಕಾಲದ್ದವೆಂದು ಗ್ರಾಮದ ಹಿರಿಯರು ಹೇಳುತ್ತಾರೆ. ನಾನೂರಕ್ಕೂ ಹೆಚ್ಚು ಕುಟುಂಬಗಳಿರುವ ಗ್ರಾಮಸ್ಥರಿಗೆ ಪಂಚಲಿಂಗಗಳೇ ಆರಾಧ್ಯ ದೈವ. ಸುತ್ತಮುತ್ತಲ ಹತ್ತಾರು ಗ್ರಾಮದ ಜನತೆ ಪ್ರತಿ ಕಾರ್ತೀಕ ಮಾಸದಲ್ಲಿ ನಡೆಯುವ ಪೂಜೆಯಲ್ಲಿ ಭಕ್ತಿಯಿಂದ ಪಾಲ್ಗೊಳ್ಳುತ್ತಾರೆ.
ಇಲ್ಲೂ ಇದೆ ವಿಶೇಷ: ಡಿ.3ರಂದು ನಡೆಯುವ ಕೆಂಡೋತ್ಸವ ಒಂದು ವಿಶೇಷ ಎಂದೇ ಹೇಳಬಹುದು. ಜಂಪೋತ್ಸವ ರಾತ್ರಿ ಸುಗ್ಗಿ ಕುಣಿತ, ನಂದಿ ಧ್ವಜ ಕುಣಿತ ಯುವಕರು ದೇವರ ವಿಗ್ರಹಗಳನ್ನು ಧರಿಸಿ ಸುಗ್ಗಿ ಕುಣಿತ ಮಾಡುತ್ತಾರೆ. ದೇವಸ್ಥಾನದ ಎದುರು ಇಡೀ ರಾತ್ರಿ ಕಾಳಮ್ಮನ ಕಳಸ ಹೊರಿಸಿ ಹೆಣ್ಣುಮಕ್ಕಳು ಕಳಶ ಹಾಗೂ ದೀಪಗಳೊಂದಿಗೆ ದಿನರಾತ್ರಿ ದೂಡುತ್ತಾರೆ. ಮಾರನೇ ಬೆಳಗ್ಗೆ ಯಗಚಿ ನದಿ ದಡಕ್ಕೆ ವಿಗ್ರಹಗಳೊಂದಿಗೆ ತೆರಳಿ ಇಡೀ ಊರಿನ ಜನತೆ ಗಂಗೆಯಲ್ಲಿ ಸ್ವಚ್ಛಗೊಳಿಸಿ ದೇವರ ಅಡ್ಡೆಯೊಂದಿಗೆ ಹಾಗೂ ನಂದಿಧ್ವಜದೊಂದಿಗೆ ತೆರಳುತ್ತಾರೆ. ಈ ಅಮೂಲ್ಯ ಹಾಗೂ ಅಪರೂಪದ ಕ್ಷಣವನ್ನು ಸಾವಿರಾರು ಜನತೆ ವೀಕ್ಷಿಸುತ್ತಾರೆ. ಇದು ಇಲ್ಲಿನ ವಿಶಿಷ್ಟ ಆಚರಣೆ.
ಇಷ್ಟೆಲ್ಲ ವಿಶೇಷ ಹೊಂದಿರುವ ದೇವಸ್ಥಾನ ಇದೀಗ ಹೊಸ ರೂಪ ಪಡೆದುಕೊಂಡಿದ್ದು ಸಾವಿರಾರು ಭಕ್ತರನ್ನು ಆಕರ್ಷಿಸುತ್ತಿದೆ. ಈ ಮೂಲಕ ತಲಕಾಡಿನ ಪಂಚಲಿಂಗ ದರ್ಶನ ವೈಭವವನ್ನು ಜಿಲ್ಲೆಯಲ್ಲೇ ದರ್ಶನ ಅವಕಾಶ ಕಲ್ಪಿಸಿದೆ. ಈ ಅಪರೂಪದ ಸ್ಥಳಗಳನ್ನು ಮುಜರಾಯಿ ಇಲಾಖೆಯವರು ಇನ್ನಷ್ಟು ಅಭಿವೃದ್ಧಿಪಡಿಸಿ ಪ್ರವಾಸಿಗರ ತಾಣವನ್ನಾಗಿ ಮಾಡಬೇಕೆಂದು ಸುತ್ತಮುತ್ತಲ ಭಕ್ತರು ಹಾಗೂ ಗ್ರಾಮಸ್ಥರ ಆಶಯ. ಡಿ.3ರಂದು ಮಧ್ಯಾಹ್ನ 1ಕ್ಕೆ ಅನ್ನ ಸಂತರ್ಪಣೆ ಏರ್ಪಡಿಸಲಾಗಿದೆ. ಪಂಚಲಿಂಗೇಶ್ವರ ಜಾತ್ರಾ ಮಹೋತ್ಸವವು ಕಿರಗಡಲು ಗ್ರಾಮದಲ್ಲಿ ಡಿ.2ರಂದು ಜಂಪೋತ್ಸವ ಮತ್ತು ಡಿ.3ರಂದು ಕೆಂಡೋತ್ಸವ ನಡೆಯಲಿದೆ.
ದಂತಕಥೆ
ಇಲ್ಲಿನ ಗ್ರಾಮದಲ್ಲಿ ಹಿರಿಯರು ಹೇಳುವಂತೆ, ಈಗಿರುವ ದೇವಾಲಯದ ಜಾಗದಲ್ಲಿ ದಟ್ಟ ಬಿದಿರು ಮೆಳೆ ಇತ್ತು. ಇಲ್ಲಿಗೆ ದನ ಕಾಯಲು ಬರುತ್ತಿದ್ದ ವ್ಯಕ್ತಿಯೊಬ್ಬ ಬಿದಿರು ಕಡಿಯುವ ಸಂದರ್ಭ ತಳಭಾಗದಲಿದ್ದ ಪಂಚಲಿಂಗದ ಪೈಕಿ ಒಂದು ಲಿಂಗಕ್ಕೆ ಬಡಿಯಿತು.
ಏಟಿಗೆ ಲಿಂಗದ ಅರ್ಧಭಾಗ ತುಂಡಾಯಿತು. ಜತೆಗೆ ಕಡಿದ ವ್ಯಕ್ತಿ ಅಲ್ಲೇ ಮೃತಪಟ್ಟ ಆತನ ರಕ್ತ ಸ್ವಲ್ಪ ದೂರದಲ್ಲೇ ಹರಿಯಿತು. ಸೊಜಿಗವೆಂದರೆ ರಕ್ತದ ಕೊನೆಯಾದ ಸ್ಥಳದಲ್ಲಿ ಕತ್ತರಿಸಲ್ಪಟ್ಟ ಲಿಂಗದ ಭಾಗ ಮತ್ತೆ ಉದ್ಭವವಾಯಿತು. ಅರ್ಧಲಿಂಗದ ಒಡಮೂಡಿದ ಭಾಗ ಇಂದಿಗೂ ಇದ್ದು ಪೂಜಿಸಲಾಗುತ್ತಿದೆ.
ಏಕಸ್ಥಳದಲ್ಲಿರುವ ಈ ಲಿಂಗಗಳಿಗೆ ಸೂಜಿಗಯ್ಯ, ದೊಡ್ಡಯ್ಯ, ರುದ್ರೇಶ್ವರ, ಸರ್ವೇಶ್ವರ ಮತ್ತು ಗಂಡಸಿಯಯ್ಯ ಎಂಬ ಹೆಸರು ಬಂದಿದೆ ಎನ್ನುತ್ತಾರೆ ಹಿರಿಯರು.
ತಲಕಾಡು ನಂತರ ಅಪರೂಪದ ಪಂಚಲಿಂಗ ದರ್ಶನ ಇಲ್ಲಿ ಕಾಣಬಹುದು. ಹೀಗಿದ್ದರೂ ಕಾರ್ತೀಕ ಮಾಸದ ಅಂಗವಾಗಿ ಪಂಚಲಿಂಗ ದರ್ಶನದ ಜಂಪೋತ್ಸವ ಸೋಮವಾರ ರಾತ್ರಿ ನಡೆಯಲಿದ್ದು, ಕೆಂಡೋತ್ಸವ ಮಂಗಳವಾರ ನಡೆಯಲಿದೆ.