ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಎಟಿಎಂಗಳಿಗೆ ಅಭದ್ರತೆ, ಗ್ರಾಹಕರಿಗಿಲ್ಲ ರಕ್ಷಣೆ

Rashmi Kasaragodu
Updated On : 1 Dec 2013, 11:54 am

ಎಚ್.ಡಿ. ಗುರುಪ್ರಸಾದ್
ಹೊಳೆನರಸೀಪುರ: ಬೆಂಗಳೂರಿನ ಎಟಿಎಂನಲ್ಲಿ ಮಹಿಳೆಯೊಬ್ಬರ ಮೇಲೆ ನಡೆದ ಮಾರಣಾಂತಿಕ ಹಲ್ಲೆ ಪ್ರಕರಣದಿಂದಾಗಿ ನಾಗರಿಕ ಸಮಾಜ ಭಯಭೀತವಾಗಿರುವ ಹಿನ್ನೆಲೆಯಲ್ಲಿ, ರಾಜ್ಯದಲ್ಲಿನ ಎಲ್ಲಾ ಎಟಿಎಂಗಳಿಗೂ ಸೂಕ್ತ ಭದ್ರತಾ ವ್ಯವಸ್ಥೆಯನ್ನು ಕಡ್ಡಾಯವಾಗಿ ಕಲ್ಪಿಸುವಂತೆ ರಾಜ್ಯ ಸರ್ಕಾರ ನಿರ್ದೇಶಿಸಿದ್ದರೂ ಕೂಡ ಇಲ್ಲಿನ ತಾಲೂಕು ಕೇಂದ್ರದಲ್ಲಿರುವ ಬಹುತೇಕ ರಾಷ್ಟ್ರೀಕೃತ ಹಾಗೂ ಖಾಸಗಿ ಬ್ಯಾಂಕುಗಳು ಎಟಿಎಂಗಳಿಗೆ ಇಂದಿಗೂ ಸೂಕ್ತ ಭದ್ರತಾ ವ್ಯವಸ್ಥೆಯನ್ನು ಕಲ್ಪಿಸುವಲ್ಲಿ ದಿವ್ಯ ನಿರ್ಲಕ್ಷ್ಯ ತಳೆದಿವೆ.
ಇದು ರಾಜ್ಯದೆಲ್ಲೆಡೆ ಕಂಡುಬಂದಿರುವ ಬ್ಯಾಂಕುಗಳ ನಿರ್ಲಕ್ಷ್ಯ ಧೋರಣೆಯಾಗಿ ಕಂಡರೂ, ವಿವಿಧ ಬ್ಯಾಂಕುಗಳು ಸ್ಥಾಪಿಸಿರುವ ಎಟಿಎಂಗಳಲ್ಲಿನ ಭದ್ರತೆಯ ಲೋಪದಿಂದಾಗಿ ಅಮಾಯಕರ ಜೀವ ಅಪಾಯಕರ ಸ್ಥಿತಿಯಲ್ಲಿರುವುದಕ್ಕೆ ಹೊಣೆ ಯಾರು ಎನ್ನುವ ಪ್ರಶ್ನೆ ಈಗ ನಾಗರಿಕರ ಮನದಲ್ಲಿ ಮೂಡಿದೆ. ಬೆಂಗಳೂರಿನಲ್ಲಿ ನಡೆದ ಘಟನೆಯಿಂದಲಾದರೂ ಎಚ್ಚೆತ್ತುಕೊಂಡು ಎಟಿಎಂ ಕೇಂದ್ರಗಳಿಗೆ ಸೂಕ್ತ ಭದ್ರತಾ ವ್ಯವಸ್ಥೆಯನ್ನು ಕಲ್ಪಿಸಲು ರಾಷ್ಟ್ರೀಕೃತ ಹಾಗೂ ಖಾಸಗಿ ಬ್ಯಾಂಕುಗಳು ಮುಂದಾಗದಿರುವ ಬೇಜವಾಬ್ದಾರಿ ಕ್ರಮವನ್ನು ನಾಗರಿಕರು ಖಂಡಿಸಿದ್ದಾರೆ.
ಭದ್ರತೆ ಮರೀಚಿಕೆ: ಇಲ್ಲಿನ ತಾಲೂಕು ಕೇಂದ್ರದಲ್ಲಿ 7ಕ್ಕೂ ಹೆಚ್ಚು ಎಟಿಎಂ ಕೇಂದ್ರಗಳು ಚಾಲ್ತಿಯಲ್ಲಿದ್ದು, ಇನ್ನೂ 3-4 ಹೆಚ್ಚುವರಿ ಎಟಿಎಂ ಕೇಂದ್ರಗಳು ಶೀಘ್ರದಲ್ಲಿಯೇ ಕಾರ್ಯಾರಂಭಗೊಳ್ಳಲಿವೆ. ಆದರೆ ಪ್ರಸ್ತುತ ರಾಷ್ಟ್ರೀಕೃತ ಬ್ಯಾಂಕುಗಳ ಹಾಗೂ ಖಾಸಗಿ ಬ್ಯಾಂಕುಗಳು ಪಟ್ಟಣದಲ್ಲಿ ಸ್ಥಾಪಿಸಿರುವ ಎಟಿಎಂಗಳು ಯಾವುದೇ ಸೂಕ್ತ ಭದ್ರತಾ ವ್ಯವಸ್ಥೆ ಹೊಂದಿಲ್ಲದಿರುವುದು ದುರಾದೃಷ್ಟಕರ ಸಂಗತಿಯಾಗಿದೆ.
ಖಾಸಗಿ ಬ್ಯಾಂಕುಗಳಿರಲಿ ರಾಷ್ಟ್ರೀಕೃತ ಬ್ಯಾಂಕುಗಳಾದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಸ್ಟೇಟ್ ಬ್ಯಾಂಕ್ ಮೈಸೂರು, ಕೆನರಾ ಬ್ಯಾಂಕುಗಳ ಎಟಿಎಂಗಳಲ್ಲೂ ಕೂಡ ಸಮರ್ಪಕವಾದ ಭದ್ರತಾ ವ್ಯವಸ್ಥೆಯನ್ನು ಕೈಗೊಳ್ಳದೇ ಇರುವ ಲೋಪ ಇದ್ದು ಕಾಣುತ್ತಿದೆ. ಇನ್ನು ಖಾಸಗಿ ಬ್ಯಾಂಕುಗಳ ಎಟಿಎಂಗಳ ಚಿತ್ರಣ ವಿಭಿನ್ನವಾಗೇನೂ ಇಲ್ಲ. ತಾಲೂಕು ಕೇಂದ್ರದಲ್ಲಿರುವ ಎಲ್ಲಾ ಎಟಿಎಂಗಳಲ್ಲೂ ರಾತ್ರಿ ವೇಳೆಯಲ್ಲಿ ಇರಲಿ, ಬೆಳಗಿನ ಹೊತ್ತಿನಲ್ಲೇ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸದೇ ಇರುವುದು ಪ್ರಮುಖ ಅಂಶವಾಗಿದೆ.
ಆರ್ಬಿಐ ನಿಯಮ ಗಾಳಿಗೆ: ಇಲ್ಲಿನ ಕೆಲವೊಂದು ಬ್ಯಾಂಕುಗಳ ಎಟಿಎಂ ಕೇಂದ್ರಗಳ ಮುಂದೆ ಕಾಟಾಚಾರಕ್ಕೆಂಬಂತೆ ಕಾವಲುಗಾರರನ್ನು ನೇಮಿಸಿರುವುದನ್ನು ಕಂಡರೆ, ಆರ್ಬಿಐ ಸೂಚನೆಯನ್ವಯ ದಿನದ 24 ತಾಸುಗಳು ಮೂರು ಪಾಳಿಯಲ್ಲಿ ಭದ್ರತಾ ಸಿಬ್ಬಂದಿಯನ್ನು ನೇಮಿಸುವುದು, ಭದ್ರತಾ ಸಿಬ್ಬಂದಿಗೆ ತುರ್ತು ಸನ್ನಿವೇಶಗಳನ್ನು ಎದುರಿಸುವ ತರಬೇತಿ ಇರಬೇಕು, ಎಟಿಎಂ ಒಳಗೆ ಮತ್ತು ಹೊರಗೆ ಕಡ್ಡಾಯವಾಗಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಬೇಕು, ಪ್ರತಿ ಎಟಿಎಂ ಕೇಂದ್ರದಲ್ಲೂ ಅಲಾರಾಂ ಅಳವಡಿಸಿರಬೇಕು, ಎಟಿಎಂ ಪ್ರವೇಶಿಸಲು ಕಾರ್ಡ್ ಎಕ್ಸಸ್ ವ್ಯವಸ್ಥೆಯನ್ನು ಪಾಲಿಸಬೇಕು ಎಂಬ ನಿಯಮಗಳಿದ್ದರೂ ಇಲ್ಲಿನ ಎಲ್ಲಾ ಬ್ಯಾಂಕುಗಳೂ ಆರ್ಬಿಐನ ಈ ನಿಯಮಗಳನ್ನು ಸ್ಪಷ್ಟವಾಗಿ ಗಾಳಿಗೆ ತೂರಿರುವುದು ಕಂಡುಬರುತ್ತದೆ.
ಈಗಾಗಲೇ ಪೊಲೀಸ್ ಸೂಚನೆ: ಬೆಂಗಳೂರು ಕೃತ್ಯದ ನಂತರ ಅಲರ್ಟ್ ಆಗಿರುವ ಇಲ್ಲಿನ ಪೊಲೀಸ್ ಇಲಾಖೆಯು ತಾಲೂಕು ಕೇಂದ್ರದಲ್ಲಿರುವ ಎಲ್ಲಾ ರಾಷ್ಟ್ರೀಕೃತ ಹಾಗೂ ಖಾಸಗಿ ಬ್ಯಾಂಕುಗಳ ವ್ಯವಸ್ಥಾಪಕರ ಸಭೆ ಕರೆದು ಆರ್ಬಿಐನ ಸೂಚನೆಗಳು ಹಾಗೂ ರಾಜ್ಯ ಸರ್ಕಾರ ವಿಧಿಸಿರುವ ನಿರ್ದೇಶನಗಳಂತೆ ಎಲ್ಲಾ ಬ್ಯಾಂಕುಗಳೂ ನಿಗದಿತ ಅವಧಿಯೊಳಗೆ ತಮ್ಮ ಎಟಿಎಂ ಕೇಂದ್ರಗಳಿಗೆ ಸೂಕ್ತ ಭದ್ರತಾ ವ್ಯವಸ್ಥೆಯನ್ನು ಕಲ್ಪಿಸುವಂತೆ ಕಟ್ಟುನಿಟ್ಟಿನ ಸೂಚನೆಯನ್ನು ಇಲ್ಲಿನ ಎಎಸ್ಪಿ ವಿನಾಯಕ ಪಾಟೀಲ್ ಹಾಗೂ ಆರಕ್ಷಕ ವೃತ್ತ ನಿರೀಕ್ಷಕ ಎನ್.ಜಿ. ಕೃಷ್ಣಪ್ಪ ಈಗಾಗಲೇ ನೀಡಿದ್ದಾರೆ.
ನಾಗರಿಕರ ಅಸಮಾಧಾನ: ಬಹುತೇಕ ಬ್ಯಾಂಕುಗಳ ವ್ಯವಸ್ಥಾಪಕರು ಈ ನಿರ್ದೇಶನದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿ, ಯಾವುದೇ ಹೆಚ್ಚುವರಿಯಾದ ಕ್ರಮಗಳನ್ನು ಕೈಗೊಳ್ಳಬೇಕಿದ್ದರೂ ಮೇಲಿನ ಅಧಿಕಾರಿಗಳ ಆದೇಶ ಹಾಗೂ ಲಿಖಿತ ಸೂಚನೆ ಬೇಕಿದ್ದು, ಅದು ತಮಗೆ ತಲುಪಿದ ನಂತರವಷ್ಟೇ ಮುಂದಿನ ಕ್ರಮ ಕೈಗೊಳ್ಳಲು ಸಾಧ್ಯ ಎಂಬ ನಿಲುವಿಗೆ ಅಂಟಿಕೊಂಡಿರುವ ಶಂಕೆ ಇದೆ. ಆದರೆ ಬ್ಯಾಂಕುಗಳ ಈ ನಿರ್ಲಕ್ಷ್ಯ ಧೋರಣೆಯಿಂದಾಗಿ ಸಾರ್ವಜನಿಕರ ಹಣ ಹಾಗೂ ಜೀವ ಎರಡಕ್ಕೂ ಭದ್ರತೆಯೇ ಇಲ್ಲವಾಗಿದ್ದು, ಸರ್ಕಾರದ ಆದೇಶವನ್ನು ಪಾಲಿಸುವಲ್ಲಿನ ಬ್ಯಾಂಕುಗಳ ನಿರ್ಲಕ್ಷ್ಯದ ವಿರುದ್ಧ ಸರ್ಕಾರವೇ ಪರಾಮರ್ಶಿಸಿ ಕ್ರಮ ಕೈಗೊಂಡು ಸಾರ್ವಜನಿಕರ ಜೀವ, ಹಣದ ರಕ್ಷಣೆಗೆ ಮುಂದಾಗಬೇಕಿದೆ ಎಂಬುದು ನಾಗರಿಕರ ಅಭಿಪ್ರಾಯ.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement