ಕನ್ನಡ ಸಾಹಿತ್ಯ ಪರಂಪರೆ ಉಳಿಸುವಲ್ಲಿ ಕೀರ್ತನ ಕಲಾವಿದ ಶ್ರಮ ಅಪಾರ
ಕ.ಪ್ರ.ವಾರ್ತೆ ಬೇಲೂರು ಅ.31
ಕನ್ನಡ ಸಾಹಿತ್ಯ ಪರಂಪರೆಯನ್ನು ಉಳಿಸಿ-ಬೆಳೆಸುವಲ್ಲಿ ಕೀರ್ತನ ಕಲಾವಿದರ ಶ್ರಮ ಹೆಚ್ಚಾಗಿ ಇದೆ ಆದರೆ ಸರ್ಕಾರ ಇಂತಹ ಕಲಾವಿದರ ಬಗ್ಗೆ ಕನಿಷ್ಠ ಗೌರವಿಸುವ ಗುಣವನ್ನು ಬೆಳೆಸಿಕೊಂಡಿಲ್ಲ ಎಂದು ವೇಲಾಪುರಿ ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆ ಕಾರ್ಯದರ್ಶಿ ಮ. ಶಿವಮೂರ್ತಿ ವಿಷಾದಿಸಿದರು.
ಪಟ್ಟಣದ ಸೌಮ್ಯ ನಾಯಕಿ ಮಹಿಳಾ ಸಮಾಜದಲ್ಲಿ ತಾಲೂಕು ವೇಲಾಪುರಿ ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆ ಹಮ್ಮಿಕೊಂಡಿದ್ದ ಕೀರ್ತನ ಕಲಾವಿದ ಅಚ್ಯುತದಾಸರ ಶ್ರದ್ಧಾಂಜಲಿ ಸಭೆಯಲ್ಲಿ ಮಾತನಾಡಿದ ಅವರು ಕನ್ನಡ ಸಾಹಿತ್ಯಕ್ಕೆ ಬಹು ಪ್ರಾಚೀನ ಇತಿಹಾಸವಿದೆ, ಆದರೆ ಇತ್ತೀಚಿನ ದಿನಗಳಲ್ಲಿ ವೇದಿಕೆಗಳಲ್ಲಿ ಮಾತ್ರ ರಾಜ ಕಾರಣಿಗಳು ಭಾಷಣ ಮಾಡುತ್ತಾರೆ ಎಂದರು.
ಸಾಹಿತ್ಯ ಉಳಿಸಿ ಬೆಳೆಸುವ ಗುಣವಿಲ್ಲ ಎಂದ ಅವರು, ಹರಿದಾಸ ಸಂಸ್ಕೃತಿಯ ಕೀರ್ತನೆಗಳು ಜನರಿಗೆ ಸುಲಭ ಅರ್ಥವನ್ನು ನೀಡುತ್ತವೆ, ಈ ದಿಸೆಯಲ್ಲಿ ಸರ್ಕಾರ ಇಂತಹ ಕಲಾವಿದರನ್ನು ಗೌರವಿಸುವ ಹಾಗೂ ಅವರ ಬದುಕಿಗೆ ಸಹಕಾರಿಯಾಗುವ ಕೆಲಸ ಮಾಡಬೇಕು ಆಗ ಮಾತ್ರ ಮುಂದಿನ ಪೀಳಿಗೆಗೆ ಸಂಸ್ಕೃತಿಯನ್ನು ತಿಳಿಸಲು ಸಾಧ್ಯವಾಗುತ್ತದೆ ಎಂದರು.
ದಿ. ಶ್ರೀ ಅಚ್ಯುತದಾಸರು ಭದ್ರಗಿರಿ ಸಹೋದರರಲ್ಲಿ ಹಿರಿಯರಾಗಿದ್ದು ಕರ್ನಾಟಕ ಕೀರ್ತನಕಲಾ ಪರಿಷತ್ ಮೂಲಕ ಕೀರ್ತನ ಕಲೆಯ ಅಭಿವೃದ್ಧಿಗೆ ಅದ್ವಿತೀಯ ಕೊಡುಗೆ ನೀಡಿದ್ದಾರೆ. ಹರಿಕಥಾಮೃತಸಿಂಧು ಎಂಬ ಅಮರ ವಿಶ್ವಶಾಂತಿ ಆಶ್ರಯ, ಕೀರ್ತನಕಲಾ ಕಾಲೇಜು ಮೂಲಕ ಅಸಾಧಾರಣ ಸೇವೆ ಸಲ್ಲಿಸಿದ್ದಾರೆ ಎಂದು ತಿಳಿಸಿದರು.
ಸಭೆಯಲ್ಲಿ ಇಂದಿರಮ್ಮ, ಬಿ.ಜಿ. ನಾಗಲಕ್ಷ್ಮಿ ಶಿವರಾಂ, ಕೃಷ್ಣಮೂರ್ತಿ, ಚನ್ನಕೇಶವೇಗೌಡ ಇತರರು ಇದ್ದರು.