ಕಾಲುಬಾಯಿಗೆ ಪೋಲಿಯೋ ಮಾದರಿ ಲಸಿಕೆ
ಸಕಲೇಶಪುರ: ಪಲ್ಸ್ ಪೋಲಿಯೋ ಮಾದರಿಯಲ್ಲೇ ಜಾನುವಾರುಗಳ ಕಾಲುಬಾಯಿ ಜ್ವರಕ್ಕೆ ಲಸಿಕೆ ಹಾಕುವ ಕಾರ್ಯಕ್ರಮವನ್ನು ನಡೆಸಲಾಗುವುದು ಎಂದು ಪಶು ಸಂಗೋಪನೆ ಸಚಿವ ಟಿ.ಬಿ. ಜಯಚಂದ್ರ ಹೇಳಿದ್ದಾರೆ.
ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ರಾಜ್ಯದಲ್ಲಿ ಇದುವರಗೆ 4800 ಜಾನುವಾರುಗಳು ಕಾಲುಬಾಯಿ ರೋಗದಿಂದ ಮೃತಪಟ್ಟಿದ್ದರೆ, 47 ಸಾವಿರ ಜಾನುವಾರುಗಳು ರೋಗಕ್ಕೆ ತುತ್ತಾಗಿವೆ. 4 ಸಾವಿರ ಹಳ್ಳಿಗಳಲ್ಲಿ ಈ ರೋಗ ಹರಡಿದೆ. ಇದಕ್ಕೆಲ್ಲ ಹಿಂದಿನ ಸರ್ಕಾರ ವರ್ಷಕ್ಕೆ ಎರಡು ಬಾರಿ ಲಸಿಕೆ ಹಾಕುವ ಕಾರ್ಯಕ್ರಮವನ್ನು ನಿರ್ಲಕ್ಷಿಸಿದ ಪರಿಣಾಮ ಕಾಲುಬಾಯಿ ರೋಗ ಉಲ್ಬಣಗೊಳ್ಳುವಂತಾಗಿದೆ ಎಂದು ಟೀಕಿಸಿದರು. ಆದರೆ ನಮ್ಮ ಸರ್ಕಾರ ಈಗಾಗಲೇ ಮೊದಲ ಸುತ್ತಿನ ಲಸಿಕೆ ನೀಡುವ ಕಾರ್ಯಕ್ರಮದಲ್ಲಿ ಶೇ.89ರಷ್ಟು ಗುರಿ ತಲುಪಿದ್ದು ಮುಂದಿನ ಏಪ್ರಿಲ್ ತಿಂಗಳಿನಲ್ಲಿ ನಡೆಯಲಿರುವ ಲಸಿಕೆ ಕಾರ್ಯಕ್ರಮದ ಬಗ್ಗೆ ಜಾಗೃತಿ ಮೂಡಿಸಲಾಗುವುದು ಎಂದರು