ಜಾವಗಲ್; ಚಿನ್ನದ ಅಂಗಡಿಯಲ್ಲಿ ಕಳವು
ಜಾವಗಲ್: ಮುಖ್ಯ ರಸ್ತೆಯಲ್ಲಿರುವ ನೇರ್ಲಿಗೆ ಜ್ಯೂವೆಲರ್ಸ್ ಮತ್ತು ಪಾನ್ ಬ್ರೋಕರ್ಸ್ ಚಿನ್ನ-ಬೆಳ್ಳಿ ಅಂಗಡಿ ಬೀಗ ಒಡೆದು ಸುಮಾರು 500 ಗ್ರಾಂ. ಬೆಳ್ಳಿ ಪದಾರ್ಥಗಳನ್ನು ಇತ್ತೀಚೆಗೆ ಕಳವು ಮಾಡಲಾಗಿದೆ.
ಜಾವಗಲ್ ವೃತ್ತದ ಪಕ್ಕದ ಬಿಲ್ಡಿಂಗ್ನಲ್ಲಿ ಇರುವ ಚಿನ್ನ-ಬೆಳ್ಳಿ ಅಂಗಡಿಯ ಮುಂಭಾಗದ ಗೇಟನ್ನು ಪಕ್ಕದಲ್ಲಿರುವ ಪಂಚರ್ ಅಂಗಡಿಯ ಬೀಗ ಒಡೆದು ಲಿವರ್ ತಂದು ಬೀಗಗಳನ್ನು ಒಡೆದು ರೋಲಿಂಗ್ ಶೆಟ್ಟರನ್ನು ಮೀಟಿ ಒಳಹೋಗಿ ಅಂಗಡಿಯ ಹೊಳಗಿದ್ದ ಸುಮಾರು 20 ಸಾವಿರ ಮೌಲ್ಯದ 500 ಗ್ರಾಂ. ಬೆಳ್ಳಿ ಕಾಲುಂಗುರ, ಕಾಲು ಚೈನು, ಲಿಂಗದಕಾಯಿ, ಮಿಂಚು ಮೊದಲಾದ ಪದಾರ್ಥಗಳನ್ನು ಕಳವು ಮಾಡಿಕೊಂಡು ಪರಾರಿಯಾಗಿದ್ದಾರೆ. ಬೆಳಗ್ಗೆ ಅಂಗಡಿ ಮಾಲೀಕ ಕೃಷ್ಣಮೂರ್ತಿ ಮಗ ಸಂತೋಷ್ ಎಂದಿನಂತೆ ಅಂಗಡಿ ತೆರೆಯಲು ಬಂದಾಗ ಮುಂಭಾಗದ ಗೇಟ್ ಮತ್ತು ರೋಲಿಂಗ್ ಶಟರ್ ತೆರೆದಿರುವುದನ್ನು ಕಂಡು ಪೊಲೀಸರಿಗೆ ದೂರು ನೀಡಿದ್ದಾರೆ.
ಪೊಲೀಸ್ ಠಾಣಾಧಿಕಾರಿ ಸಿ.ಪಿ. ನವೀನ್ ಮತ್ತು ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಪರಿಶೀಲಿಸಿದರು. ಪತ್ತೆ ಕಾರ್ಯಕ್ಕಾಗಿ ಹಾಸನದಿಂದ ಶ್ವಾನದಳ ಹಾಗೂ ಬೆರಳಚ್ಚು ತಜ್ಞರನ್ನು ಕರೆಸಲಾಗಿತ್ತು.
ಅಂಗಡಿಯಿಂದ ಸುಮಾರು 100 ಮೀಟರ್ ದೂರದಲ್ಲಿರುವ ಭವಾನಿ ಜ್ಯೂವೆಲರ್ಸ್ ಅಂಗಡಿಯ ಬೀಗವನ್ನು ಒಡೆದು ಹಾಕಿದ್ದು, ಅಂಗಡಿಯ ಒಳಗೆ ಮಲಗಿದ್ದ ತೇನ್ಸಿಂಗ್ ಕೂಗಿಕೊಂಡಿದ್ದರಿಂದ ಓಡಿ ಹೋಗಿದ್ದಾರೆ. ಪೇಟೆ ಬೀದಿಯ ಗೋಪಾಲ್ಸಿಂಗ್ ಎಂಬವರ ಮನೆಯ ಜಗುಲಿಯಲ್ಲಿ ನಿಲ್ಲಿಸಿದ್ದ ಮೋಟಾರ್ ಬೈಕನ್ನು ಕಳವು ಮಾಡಿಕೊಂಡು ಹೋಗಿ ಬಾಣಾವರ ಬಸ್ ನಿಲ್ದಾಣದ ಪಕ್ಕದಲ್ಲಿ ಬಿಟ್ಟು ಹೋಗಿದ್ದಾರೆ. ಕಳವು ನಡೆದಿರುವ ಬಗ್ಗೆ ಸಂತೋಷ್ ಜಾವಗಲ್ ಪೊಲೀಸರಿಗೆ ದೂರು ನೀಡಿದ್ದು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ನಡೆಸುತ್ತಿದ್ದಾರೆ.