ಪ್ರವೇಶಾತಿಗಾಗಿ ಅವಧಿ ವಿಸ್ತರಣೆ
ಹಾಸನ: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ, ಮುಕ್ತ ಗಂಗೋತ್ರಿ, ಮೈಸೂರು- 06 ವತಿಯಿಂದ ಹಾಸನ ಪ್ರಾದೇಶಿಕ ಕೇಂದ್ರದಲ್ಲಿ 2013-14ನೇ ಸಾಲಿನ ಶ್ಯೆಕ್ಷಣಿಕ ಸಾಲಿನ ಪ್ರಥಮ, ದ್ವಿತೀಯ, ತೃತೀಯ ಬಿ.ಎ, ಬಿ.ಕಾಂ., ಪ್ರಥಮ, ಅಂತಿಮ ಎಂ.ಎ, ಎಂ.ಕಾಂ., ಡಿಪ್ಲೊಮಾ, ಎಲ್ಎಲ್ಎಂ, ಬಿ.ಎಲ್.ಐ.ಎಸ್ಸಿ., ಎಂ.ಎಲ್.ಐ.ಎಸ್ಸಿ., ಎಂ.ಎಸ್ಸಿ., ಸರ್ಟಿಫೀಕೆಟ್ ಕೋರ್ಸ್ಗಳ ಪ್ರವೇಶಾತಿಯ ದಿನಾಂಕವನ್ನು 400 ದಂಡ ಶುಲ್ಕದೊಂದಿಗೆ ಡಿ.18ರವರೆಗೆ ವಿಸ್ತರಿಸಲಾಗಿದೆ. ವಿವರಕ್ಕೆ ಹಾಸನ ಪ್ರಾದೇಶಿಕ ಕೇಂದ್ರ, ಆದಿಚುಂಚನಗಿರಿ ಕಲ್ಯಾಣ ಮಂಟಪ ಕಟ್ಟಡ, ಎಂ.ಜಿ. ರೋಡ್, ರವೀಂದ್ರ ನಗರ, ಹಾಸನ, ದೂ. 08172- 269244, ಮೊ. 98441 45234.
ಆಟೋ ಟಿಪ್ಪರ್; ಕಸ ಸಂಗ್ರಹ
ಬೇಲೂರು: ಪಟ್ಟಣವನ್ನು ಕಸಕಡ್ಡಿಯಿಂದ ಮುಕ್ತಗೊಳಿಸುವ ಉದ್ದೇಶದಿಂದ ಎರಡು ಹೊಸ ಆಟೋ ಟಿಪ್ಪರ್ಗಳಿಂದ ಕಸ ಸಂಗ್ರಹಿಸಲು ಚಾಲನೆ ನೀಡುತ್ತಿದ್ದೇವೆ ಎಂದು ಪುರಸಭೆ ಮುಖ್ಯಾಧಿಕಾರಿ ಬಸವರಾಜು ತಿಳಿಸಿದರು. ಪುರಸಭೆಯಿಂದ ನೂತನವಾಗಿ ಕಸ ಸಂಗ್ರಹಿಸಲು ತರಿಸಿರುವ ಆಟೋ ಟಿಪ್ಪರ್ಗಳಿಗೆ ಇತ್ತೀಚೆಗೆ ಚಾಲನೆ ನೀಡಿ ಮಾತನಾಡಿದ ಅವರು, ಪಟ್ಟಣವನ್ನು ಕಸಕಡ್ಡಿಯಿಂದ ಮುಕ್ತಗೊಳಿಸುವ ಉದ್ದೇಶದಿಂದ ಈಗಾಗಲೇ ಎರಡು ಆಟೋ ಟಿಪ್ಪರ್ ಗಾಡಿಗಳಿದ್ದು ಮತ್ತು ಅವುಗಳಿಂದ ಪಟ್ಟಣದ ಎಲ್ಲಾ ವಾರ್ಡ್ಗಳಿಂದ ಕಸವನ್ನು ಸಂಗ್ರಹಿಸುವುದು ಸಾಧ್ಯವಾಗುತ್ತಿಲ್ಲ. ಆದ್ದರಿಂದ 2012-13ನೇ ಸಾಲಿನ ಎಸ್ಎಫ್ಸಿ ನಿಧಿಯಲ್ಲಿ ಮತ್ತೆ 7 ಲಕ್ಷದ ಎರಡು ಆಟೋ ಟಿಪ್ಪರ್ಗಳನ್ನು ಖರೀದಿಸಿ ಪಟ್ಟಣದ ಕಸ ಸಂಗ್ರಹ ಮಾಡುವುದಕ್ಕೆ ಈ ದಿನ ಚಾಲನೆಯನ್ನು ನೀಡುತ್ತಿದ್ದೇವೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಪುರಸಭೆ ಸದಸ್ಯರಾದ ಮೋಹನ್, ಜುಬೇರ್ ಅಹಮದ್, ಎಂಜಿನಿಯರ್ ಶಿವಪ್ರಸಾದ್, ಆರೋಗ್ಯ ನೀರೀಕ್ಷಕ ವೆಂಕಟೇಶ್, ಸಿಬ್ಬಂದಿ ಮಹಾತ್ಮ, ನಾಗರಾಜು ಇತರರು ಇದ್ದರು.
'ಯುವಕರಲ್ಲಿ ಜಾಗೃತಿ ಅಗತ್ಯ'
ಸಕಲೇಶಪುರ: ಆಧುನಿಕ ಭಾರತದಲ್ಲಿ ಭ್ರಷ್ಟಾಚಾರ ಸಂಕ್ರಾಮಿಕ ರೋಗದಂತೆ ಹರಡುತ್ತಿದ್ದು, ಈ ಬಗ್ಗೆ ಯುವ ಜನತೆ ಜಾಗೃತರಾಗಬೇಕಾಗಿದೆ ಎಂದು ಭಾರತೀಯ ಪ್ರಜಾಸತ್ತಾತ್ಮಕ ಯುವಜನ ಒಕ್ಕೂಟದ ರಾಜ್ಯ ಉಪಾಧ್ಯಕ್ಷ ಮುನಿರ್ ಕಾಟಿಪಳ್ಳ ಹೇಳಿದ್ದಾರೆ. ಪಟ್ಟಣದಲ್ಲಿ ಗುರುವಾರ ನಡೆದ ಒಕ್ಕೂಟದ ತಾಲೂಕು ಮಟ್ಟದ ಪ್ರಥಮ ಸಮ್ಮೇಳನದಲ್ಲಿ ಮಾತನಾಡಿದರು. ತಾಲೂಕು ಸಂಚಾಲಕ ಬಸವರಾಜು, ಜಿಲ್ಲಾ ಕಾರ್ಯದರ್ಶಿ ಶಾವೆಲ್ ಹಮೀದ್, ಸಿಐಟಿಯು ಜಿಲ್ಲಾಧ್ಯಕ್ಷ ಸುಕುಮಾರ್, ಹರೀಶ್ ಇತರರು ಇದ್ದರು.
ಮಿಡ್ಟೌನ್ನಲ್ಲಿ ಮಕ್ಕಳ ದಿನಾಚರಣೆ
ಹಾಸನ: ರೋಟರಿ ಹಾಸನ ಮಿಡ್ಟೌನ್ ವತಿಯಿಂದ ಮಣಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಹಾಗೂ ಸಂಶೋಧನಾ ಸಂಸ್ಥೆಯಲ್ಲಿ ಇತ್ತೀಚೆಗೆ ಮಕ್ಕಳ ದಿನಾಚರಣೆ ನಡೆಯಿತು. ಮಕ್ಕಳ ತಜ್ಞ ಡಾ. ದಿನೇಶ್ ಬಿ. ಕಬ್ಳಿಗೆರೆ ಅವರು ಚಿತ್ರಕ್ಕೆ ಬಣ್ಣ ಹಚ್ಚುವ ಮೂಲಕ ಸ್ಪರ್ಧೆ ಉದ್ಘಾಟಿಸಿ ಮಾತನಾಡಿದರು.ಅಧ್ಯಕ್ಷ ಆರ್. ಸತ್ಯನಾರಾಯಣ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಡಾ. ಜೆ.ಕೆ. ಯತೀಶ್ಕುಮಾರ್, ಡಾ. ಬಿ.ಕೆ. ಸೌಮ್ಯಮಣಿ, ಡಾ. ಡಿ.ಡಿ. ಶಶಿಧರ್, ಡಾ. ಪೂರ್ಣಿಮ ಇದ್ದರು. ಮಕ್ಕಳೆಲ್ಲರಿಗೂ ಉಡುಗೊರೆ, ಸಿಹಿ ವಿತರಿಸಲಾಯಿತು.
ತೆರೆಮನೆ ಕಾರ್ಯಕ್ರಮ
ಹಾಸನ: ಸಂಚಾರಿ ವ್ಯವಸ್ಥೆ ತೊಂದರೆ ನೀಗಿಸುವುದು ನಮ್ಮೆಲ್ಲರ ಕರ್ತವ್ಯವಾಗಿದ್ದು, ಈ ನಿಟ್ಟಿನಲ್ಲಿ ಇತ್ತೀಚೆಗೆ ಟೈಮ್ಸ್ ಶಾಲೆಯಲ್ಲಿ ತೆರೆಮನೆ ಕಾರ್ಯಕ್ರಮ ನಡೆಯಿತು. ಈ ಸಂದರ್ಭದಲ್ಲಿ ಸಂಚಾರಿ ಪೊಲೀಸ್ ಇಲಾಖೆಯ ಸಬ್ ಇನ್ಸ್ಪೆಕ್ಟರ್ ರಾಘವೇಂದ್ರ ಬಾಬು ಸಂಚಾರಿ ನಿಯಮಗಳು ಮತ್ತು ಅಜಾಗರೂಕತೆಯಿಂದ ನಡೆಯುವ ರಸ್ತೆ ಅಪಘಾತ ಹಾಗೂ ಅದರ ಪರಿಣಾಮದ ಕುರಿತು ಸಾಕ್ಷ್ಯಚಿತ್ರದೊಂದಿಗೆ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ಶಾಲಾ ಅಧ್ಯಕ್ಷ ಸುರೇಂದ್ರ ಕುಮಾರ್, ಕಾರ್ಯದರ್ಶಿ ಬಿ.ಕೆ. ಗಂಗಾಧರ್ ಮತ್ತು ಶಾಲಾ ಪ್ರಾಂಶುಪಾಲ ಉಮಾ ಪಾಟೀಲ್ ಇದ್ದರು.