ರೋಗ ನಿಯಂತ್ರಣಕ್ಕೆ ಕ್ರಮ: ಸಚಿವ ಜಯಚಂದ್ರ
ಹಾಸನ: ಜಿಲ್ಲೆಯಲ್ಲಿ ಕಾಲುಬಾಯಿ ರೋಗದಿಂದ 157 ಜಾನುವಾರುಗಳು ಮರಣ ಹೊಂದಿದ್ದು, ಇಂತಹ ರಾಸುಗಳ ಮಾಲೀಕರಿಗೆ ಸರ್ಕಾರವು ಹಾಲು ಕೊಡುವ ರಾಸುಗಳಿಗೆ 25 ಸಾವಿರ, ಎತು, ಕೋಣಗಳಿಗೆ 20 ಸಾವಿರ ಹಾಗೂ ಕರುಗಳಿಗೆ 10 ಸಾವಿರ ಪರಿಹಾರ ನೀಡಲಾಗುವುದೆಂದು ಪಶು ಸಂಗೋಪನಾ ಸಚಿವ ಟಿ.ಬಿ. ಜಯಚಂದ್ರ ಅವರು ವಿಧಾನ ಪರಿಷತ್ ಸದಸ್ಯ ಪಟೇಲ್ ಶಿವರಾಂ ಅವರ ಪ್ರಶ್ನೆಗೆ ವಿಧಾನ ಪರಿಷತ್ತಿನಲ್ಲಿ ಉತ್ತರಿಸಿದರು.
ಕೇಂದ್ರ ಸರ್ಕಾರದ ಯೋಜನೆಯಾದ ಕಾಲುಬಾಯಿ ರೋಗ ನಿಯಂತ್ರಣದಡಿಯಲ್ಲಿ ಕೇಂದ್ರ ಸರ್ಕಾರವು ಸರಬರಾಜು ಮಾಡಿರುವ ಕಾಲುಬಾಯಿ ರೋಗದ ಲಸಿಕೆಯ ಮುಖಾಂತರ ರಾಜ್ಯದ ದನ ಮತ್ತು ಎಮ್ಮೆಗಳಿಗೆ ಲಸಿಕೆ ಕಾರ್ಯಕ್ರಮವನ್ನು ಅನುಷ್ಠಾನ ಗೊಳಿಸಲಾಗಿದ್ದು, ಈವರೆವಿಗೂ ಶೇ.89ರಷ್ಟು ಜಾನುವಾರುಗಳಿಗೆ ಲಸಿಕೆ ಹಾಕಲಾಗಿದೆ ಎಂದು ತಿಳಿಸಿದರು. ಬೇರೆ ಕಾಯಿಲೆಗಳಿಗೆ ತುತ್ತಾಗುವ ಸಾಧ್ಯತೆಯಿರುವುದರಿಂದ ಅದನ್ನು ತಡೆಗಟ್ಟಲು ಅವಶ್ಯವಿರುವ ಔಷಧಿಗಳನ್ನು ಖರೀದಿಸಿ ಜಾನುವಾರುಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಸಚಿವರು ತಿಳಿಸಿದರು.