'ನಾಡು, ನುಡಿ ರಕ್ಷಣೆಗೆ ಬದ್ಧ'
ಸಕಲೇಶಪುರ: ನಾಡು, ನುಡಿಗಳ ರಕ್ಷಣೆಗೆ ಜಯ ಕರ್ನಾಟಕ ಸಂಘಟನೆ ಬದ್ಧವಾಗಿದ್ದು ಇದಕ್ಕಾಗಿ ಹಲವಾರು ಸಮಾಜದ ಪರ ಕೆಲಸಗಳನ್ನು ರಾಜ್ಯಾದ್ಯಂತ ಸಂಘಟನೆ ವತಿಯಿಂದ ಮಾಡಲಾಗುತ್ತಿದೆ ಎಂದು ಜಯ ಕರ್ನಾಟಕ ಸಂಘಟನೆಯ ರಾಜ್ಯ ಕಾರ್ಯಾಧ್ಯಕ್ಷ ಪ್ರಕಾಶ್ ರೈ ತಿಳಿಸಿದ್ದಾರೆ. ತಾಲ್ಲೂಕಿನ ಕುನಿಗನಹಳ್ಳಿ ಗ್ರಾಮದಲ್ಲಿ ಜಯ ಕರ್ನಾಟಕ ಸಂಘದ ವತಿಯಿಂದ ಎರಡನೇ ವರ್ಷದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ಇತ್ತೀಚೆಗೆ ಉದ್ಘಾಟಿಸಿ ಮಾತನಾಡಿ, ಜಯ ಕರ್ನಾಟಕ ಸಂಘಟನೆಯಲ್ಲಿ ಸಾವಿರಾರು ಕಾರ್ಯಕರ್ತರು ಯಾವುದೇ ರೀತಿಯ ಭೇದಭಾವ ಮಾಡದೇ ಸಮಾಜದ ಏಳ್ಗೆಗಾಗಿ ಕೆಲಸ ಮಾಡುತ್ತಿದ್ದು ರಾಜ್ಯದ ಹಿತಕ್ಕೋಸ್ಕರ ತಮ್ಮನ್ನು ಈ ಸಂಘಟನೆ ಯಲ್ಲಿ ತೊಡಗಿಸಿಕೊಂಡಿದ್ದಾರೆಂದು ಅವರು ಹೇಳಿದರು. ಕಾರ್ಯಕ್ರಮದ ಅಂಗವಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ಹೆಚ್.ಡಿ ಸೋಮೇಶ್ ಅವರ ಸುಗಮ ಸಂಗೀತ ಕಾರ್ಯಕ್ರಮ, ರಕ್ತದಾನ ಶಿಬಿರ ಹಾಗೂ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಹಿರಿಯರಿಗೆ ಜಯ ಕರ್ನಾಟಕ ಸಂಘಟನೆ ವತಿಯಿಂದ ಸನ್ಮಾನ ಏರ್ಪಡಿಸಲಾಗಿತ್ತು. ಈ ಸಂದರ್ಭದಲ್ಲಿ ಜಯ ಕರ್ನಾಟಕ ಘಟಕದ ತಾಲ್ಲೂಕು ಅಧ್ಯಕ್ಷ ಸುಪ್ರದೀಪ್ತ ಯಜಮಾನ್, ಕಾರ್ಯದರ್ಶಿ ಸುರೇಶ್ ಆಳ್ವ, ಕುನಿಗನಹಳ್ಳಿ ಘಟಕದ ಅಧ್ಯಕ್ಷ ಪ್ರಕಾಶ್, ಜಿಪಂ ಸದಸ್ಯೆ ಸುಲೋಚನಾ ರಾಮಕೃಷ್ಣ, ಜೆಡಿಎಸ್ನ ಯಾದ್ಗಾರ್ ಇಬ್ರಾಹಿಂ ಇತರರು ಇದ್ದರು.
ಇಂದು ಪ್ರವಾಸ ಕಾರ್ಯಕ್ರಮ
ಹಾಸನ: ರಾಜ್ಯ ಮಾನವ ಹಕ್ಕುಗಳ ಆಯೋಗದ ಸದಸ್ಯರಾದ ಸಿ.ಜೆ. ಹುನಗುಂದ್ ಅವರು ಡಿ. 3ರಂದು ಹಾಸನ ಜಿಲ್ಲೆಯ ಪ್ರವಾಸ ಕೈಗೊಂಡಿದ್ದಾರೆ. ಬೆಳಿಗ್ಗೆ 10ಕ್ಕೆ ನಗರಕ್ಕೆ ಆಗಮಿಸುವ ಅವರು 10.30ಕ್ಕೆ ಜಿಲ್ಲಾ ಬಾರ್ ಅಸೋಸಿಯೇಷನ್ ಸಭಾಂಗಣದಲ್ಲಿ ನಡೆಯುವ ವಕೀಲರ ದಿನಾಚರಣೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ನಂತರ ಮಧ್ಯಾಹ್ನ 12ಕ್ಕೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಧಿಕಾರಿಗಳೊಂದಿಗೆ ಕ್ಷೇತ್ರ ವೀಕ್ಷಣೆಗೆ ತೆರಳುವರು. ಮಧ್ಯಾಹ್ನ 2.30 ಕ್ಕೆ ಹ್ಯೂಮನ್ ರೈಟ್ಸ್ ಫೆಡರೇಷನ್ ಆಫ್ ಇಂಡಿಯಾ ಸದಸ್ಯರೊಂದಿಗೆ ಚರ್ಚೆ ನಡೆಸಿ ನಂತರ ಬೆಂಗಳೂರಿಗೆ ತೆರಳುವರು.
ವಿಕಲಚೇತನರಿಗಾಗಿ ಸಾಂಸ್ಕೃತಿಕ ಸ್ಪರ್ಧೆ
ಅರಕಲಗೂಡು: ಇಲ್ಲಿನ ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯಿಂದ ಮಂಗಳವಾರ ಬೆಳಿಗ್ಗೆ 9.30ಕ್ಕೆ ಇಲ್ಲಿನ ಶಿಕ್ಷಕರ ಭವನದಲ್ಲಿ ವಿಕಲ ಚೇತನರಿಗಾಗಿ ಕ್ರೀಡೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ. ತಾಲೂಕು ಮಟ್ಟದ ಈ ಸ್ಪರ್ಧೆಗಳಲ್ಲಿ 4ರಿಂದ 8ನೇ ತರಗತಿಯವರೆಗೆ ವ್ಯಾಸಂಗ ಮಾಡುತ್ತಿರುವ ವಿಶೇಷ ಅಗತ್ಯೆತೆಯುಳ್ಳ ಮಕ್ಕಳು ಈ ಸ್ಪರ್ಧೆಗಳಲ್ಲಿ ಭಾಗವಹಿಸುವರು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಬಿ.ರೇವಣ್ಣ ತಿಳಿಸಿದ್ದಾರೆ.