ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಮೆಕ್ಕೆಜೋಳ ಖರೀದಿ ಕೇಂದ್ರಕ್ಕೆ ಚಾಲನೆ

Rashmi Kasaragodu
Updated On : 2 Dec 2013, 11:15 am

ಬೇಲೂರು: ರೈತರ ಬಗ್ಗೆ ಕಾಂಗ್ರೆಸ್ ಸರ್ಕಾರ ಅತಿ ಹೆಚ್ಚಿನ ಕಾಳಜಿಯನ್ನು ಹೊಂದಿದ್ದು ಬೆಂಬಲ ಬೆಲೆಯಲ್ಲಿ, ಭತ್ತ, ಕೊಬ್ಬರಿ, ಕಬ್ಬು ಹಾಗೂ ಮೆಕ್ಕೆಜೋಳವನ್ನು ಖರೀದಿ ಮಾಡುತ್ತಿದ್ದು ರೈತರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಶಾಸಕ ವೈ.ಎನ್. ರುದ್ರೇಶಗೌಡ ಕರೆ ನೀಡಿದರು.
ಪಟ್ಟಣದ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಮೆಕ್ಕೆಜೋಳ ಖರೀದಿ ಕೇಂದ್ರಕ್ಕೆ ಸೋಮವಾರ ಚಾಲನೆ ನೀಡಿದ ನಂತರ ಮಾತನಾಡಿ, ಅತಿವೃಷ್ಠಿ ಅನಾವೃಷ್ಠಿಯಿಂದ ರೈತರ ಬೆಳೆಗಳು ನಾಶವಾಗುತ್ತಿದ್ದು, ಇದರಿಂದ ರೈತರು ಕಷ್ಟದಲ್ಲಿದ್ದಾರೆ. ರೈತರು ನೆಮ್ಮದಿಯಾಗಿ ಜೀವನ ಸಾಗಿಸಬೇಕಾದರೆ ಸರ್ಕಾರ ಪ್ರತಿ ಬಜೆಟ್ನಲ್ಲಿ ರೈತರ ಕಲ್ಯಾಣಕ್ಕಾಗಿ ರಾಜ್ಯ ಸರ್ಕಾರ ರು. 5 ಸಾವಿರ ಕೋಟಿ ಮೀಸಲಿಡಬೇಕು ಎಂದು ಹೇಳಿದರು.
ಹಿಂದಿನ ಸರ್ಕಾರಗಳು ಕೇವಲ ರು. 1 ಸಾವಿರ ಕೋಟಿಯನ್ನು ರೈತರಿಗೆ ಮೀಸಲಿಡುತ್ತಿದ್ದವು. ಆದರೆ ಕಾಂಗ್ರೆಸ್ ಸರ್ಕಾರ 2 ಸಾವಿರಕ್ಕಿಂತ ಹೆಚ್ಚು ಹಣವನ್ನು ಮೀಸಲಿಡುತ್ತಿದೆ. ಅಲ್ಲದೇ, ಬೆಂಬಲ ಬೆಲೆಯಲ್ಲಿ ಜಿಲ್ಲೆಯ ಎಲ್ಲಾ ತಾಲೂಕಿನಲ್ಲಿ ಖರೀದಿ ಕೇಂದ್ರವನ್ನು ಸ್ಥಾಪಿಸುತ್ತಿದೆ ಎಂದರು.
ಜಿಲ್ಲಾ ಪಂಚಾಯಿತಿ ಸದಸ್ಯ ಬಿ.ಡಿ. ಚಂದ್ರೇಗೌಡ ಮಾತನಾಡಿ, ಇಲ್ಲಿನ ಎಪಿಎಂಸಿಯಲ್ಲಿ  ಕಡಿಮೆ ವ್ಯಾಪ್ತಿಯ ಪ್ರಾಂಗಣ ಇದ್ದು, ಇದರಿಂದ ರೈತರು ಅತಿ ಹೆಚ್ಚು ವಸ್ತು ತಂದಾಗ ಶೇಖರಣೆಗೆ ತೊಂದರೆಯಾಗುತ್ತದೆ. ಬೆಂಬಲ ಬೆಲೆಯಲ್ಲಿ ರೈತರಿಂದ ವಸ್ತುಗಳನ್ನು ಖರೀದಿಸಿದಾಗ ಗುಣಮಟ್ಟದ ಜೋಳವನ್ನು ಕೊಳ್ಳಬೇಕು ಎಂದು ತಿಳಿಸಿದರು. ಕೃಷಿ ಉತ್ಪನ್ನ  ಮಾರುಕಟ್ಟೆ ಸಮಿತಿ ಅಧ್ಯಕ್ಷ ಈಶ್ವರಹಳ್ಳಿ ಲಕ್ಷ್ಮಣ್ ಮಾತನಾಡಿ, ಇತರೆ ತಾಲೂಕು ಕೇಂದ್ರಗಳಿಗೆ ಹೋಲಿಸಿದರೆ ಇಲ್ಲಿನ ಎಪಿಎಂಸಿಯ ಆದಾಯ  ಕಡಿಮೆ ಇದ್ದರೂ ರೈತರಿಗೆ ಅನುಕೂಲತೆ ಕಲ್ಪಿಸಲು ಎಪಿಎಂಸಿ ಮಂಡಳಿಯಿಂದ ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡಲಾಗಿದೆ. ಮಾರುಕಟ್ಟೆ ಆಧಾರಿತ ಬೆಳೆಗಳನ್ನು ಬೆಳೆದು ಆದಾಯವನ್ನು ಹೆಚ್ಚಿಸಿಕೊಳ್ಳುವಂತಹ ಯೋಜನೆಗಳನ್ನು ಸರ್ಕಾರ ರೂಪಿಸಬೇಕು ಎಂದು ಆಗ್ರಹಿಸಿದರು.
ಟಿಎಪಿಎಂಎಸ್ ಅಧ್ಯಕ್ಷ ಎಂ.ಎ. ನಾಗರಾಜ್, ಜಿಲ್ಲಾ ಪಂಚಾಯಿತಿ ಸದಸ್ಯೆ ಇಂದಿರಾ ಧರ್ಮಪ್ಪ, ಎಪಿಎಂಸಿ ಸದಸ್ಯ ರಂಗನಾಥ್, ಕುಮಾರ್, ಮಹೇಶ್, ಪಂಚಾಕ್ಷರಿ, ಉಪ ನಿರ್ದೇಶಕ ನಾಗೇಶ್  ಇದ್ದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement