ಸರ್ಕಾರದ ವಿರುದ್ಧ ಬಿಜೆಪಿ ಬೃಹತ್ ಪ್ರತಿಭಟನೆ
ಅರಸೀಕೆರೆ: ಾಲೂಕನ್ನು ಬರಪೀಡಿತ ಪ್ರದೇಶ ಎಂದು ಘೋಷಣೆ ಮಾಡುವಲ್ಲಿ ತಾರತಮ್ಯವೆಸಗಿ ಮಲತಾಯಿ ಧೋರಣೆ ಅನುಸರಿಸುತ್ತಿರುವ ಸರ್ಕಾರದ ಕ್ರಮವನ್ನು ಖಂಡಿಸಿ ತಾಲೂಕು ಬಿಜೆಪಿ ಪಟ್ಟಣದಲ್ಲಿ ಸೋಮವಾರ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿತು.
ಸುಳಿ ಬಿದ್ದು ನಾಶವಾಗಿರುವ ತೆಂಗಿನ ಮರಗಳಿಗೆ ತಕ್ಷಣ ಪರಿಹಾರ ಒದಗಿಸಬೇಕು, ಮೋಜಣಿ ಶುಲ್ಕವನ್ನು ತಕ್ಷಣ ರದ್ದುಗೊಳಿಸಬೇಕೆಂದು ಪ್ರತಿಭಟನಾಕಾರರು ಇದೇ ವೇಳೆ ಸರ್ಕಾರವನ್ನು ಒತ್ತಾಯಿಸಿದರು.
ಪಟ್ಟಣದ ಪ್ರವಾಸಿ ಮಂದಿರದಿಂದ ನೂರಾರು ಬಿಜೆಪಿ ಕಾರ್ಯಕರ್ತರು ಹಾಗೂ ರೈತ ಮುಖಂಡರು ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗುತ್ತಾ ಸರ್ಕಾರದ ಮಲತಾಯಿ ಧೋರಣೆಗೆ ಧಿಕ್ಕಾರ, ತೆಂಗಿನ ಮರಗಳಿಗೆ ತಕ್ಷಣ ಪರಿಹಾರ ನೀಡಬೇಕು, ಮೋಜಣಿ ಶುಲ್ಕ ರದ್ದುಪಡಿಸಬೇಕು. ಶಾದಿಭಾಗ್ಯ ಯೋಜನೆ ಎಲ್ಲಾ ಜನಾಂಗಕ್ಕೂ ವಿಸ್ತರಣೆ ಆಗಬೇಕು. ಎಂದು ಘೋಷಣೆಗಳನ್ನು ಕೂಗುತ್ತಾ ಬಸವೇಶ್ವರ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ನಂತರ ತಾಲೂಕು ಕ:ಕೇರಿಗೆ ತೆರಳಿ ಧರಣಿ ನಡೆಸಿದರು. ನಂತರ ತಹಶೀಲ್ದಾರ್ ಕೇಶವಮೂರ್ತಿ ಅವರಿಗೆ ಮನವಿ ಸಲ್ಲಿಸಿದರು.
ಧರಣಿ ನಿರತರನ್ನು ಉದ್ದೇಶಿಸಿ ಬಿಜೆಪಿ ಮುಖಂಡ ಎನ್.ಡಿ. ಪ್ರಸಾದ್ ಮಾತನಾಡಿ, ಜನರು ಬಹುನಿರೀಕ್ಷೆಯಿಂದ ರಾಜ್ಯದ ಸರ್ವತೋಮುಖ ಅಭಿವೃದ್ಧಿ ಮಾಡಲೆಂದು ತಮ್ಮ ನಾಯಕನೆಂದು ಸಿದ್ದರಾಮಯ್ಯನವರನ್ನು ಅಧಿಕಾರಕ್ಕೆ ತಂದರೆ ದುರಾಡಳಿತ ರೈತ ವಿರೋಧಿ ನೀತಿಯಿಂದ ನಾಯಕನಲ್ಲ 'ಖಳನಾಯಕ' ಎಂಬುದನ್ನು ಸಾಬೀತುಪಡಿಸಿದ್ದಾರೆಂದು ಜರಿದರು.
ಬರ ಮಳೆಯ ಅಭಾವದಿಂದ ಬೆಳೆ ಕಳೆದುಕೊಂಡು ಆರ್ಥಿಕ ಸಂಕಷ್ಟದಲ್ಲಿರುವ ರೈತರ ಗಾಯದ ಮೇಲೆ ಬರೆ ಎಳೆದಂತೆ ಮೋಜಣಿ ಶುಲ್ಕವನ್ನು ಅವೈಜ್ಞಾನಿಕವಾಗಿ ಹೆಚ್ಚಿಸಿ ಮತ್ತಷ್ಟು ಸಂಕಷ್ಟಕ್ಕೀಡುಮಾಡಿರುವ ಈ ಸರ್ಕಾರ ಕಣ್ಣಿದ್ದೂ ಕುರುಡನಂತೆ, ಕಿವಿಯಿದ್ದೂ ಕಿವುಡನಂತೆ, ಬಾಯಿ ಇದ್ದು ಮೂಕನಂತೆ, ಬುದ್ಧಿಯಿದ್ದೂ ಬುದ್ಧಿಮಾಂದ್ಯನಂತಿರುವ ಅಂಗವಿಕಲ ಸರ್ಕಾರ ಎಂದು ಹೀಯಾಳಿಸಿದರಲ್ಲದೇ ಸರ್ಕಾರ ಬದುಕಿದ್ದು ಜೀವಂತ ಶವವಾಗಿದೆ ಎಂದು ಟೀಕಿಸಿದರು.
ಜಿಲ್ಲಾ ಉಪಾಧ್ಯಕ್ಷ ಗಂಜೀಗೆರೆ ಬಸವರಾಜ್ ಮಾತನಾಡಿ, ಕಳೆದ ಹಲವಾರು ವರ್ಷಗಳಿಂದ ತಾಲೂಕಿನಾದ್ಯಂತ ಮಳೆ ಇಲ್ಲದೇ ರೈತರು ತತ್ತರಿಸುತ್ತಿದ್ದಾರೆ. ರಾಜ್ಯದಲ್ಲಿಯೇ ತೀವ್ರವಾದ ಮಳೆಯ ಅಭಾವದ ಕಾರಣ ಬರಗಾಲದ ಬವಣೆಯಲ್ಲಿರುವ ತಾಲೂಕಿನ ಕೆರೆಕಟ್ಟೆಗಳಲ್ಲಿ ನೀರಿಲ್ಲದೆ ಜಾನುವಾರುಗಳಿಗೆ ಕುಡಿಯುವ ನೀರಿನ ತೊಂದರೆ ಉಂಟಾಗಿದ್ದು, ಅಂತರ್ಜಲದ ಮಟ್ಟ ಕುಸಿತದಿಂದ ಸುಮಾರು 7 ಲಕ್ಷಕ್ಕೂ ಹೆಚ್ಚಿನ ತೆಂಗಿನ ಮರಗಳು ತೇವಾಂಶ ಕೊರತೆಯಿಂದ ನಾಶವಾಗಿದ್ದು, ಪಕ್ಕದ ಕೇರಳ ರಾಜ್ಯದಲ್ಲಿ ಪ್ರತಿಯೊಂದು ತೆಂಗಿನಮರಕ್ಕೆ ನೀಡುತ್ತಿರುವ ರು. 15 ಸಾವಿರ ಪರಿಹಾರ ನೀಡಬೇಕೆಂದು ಆಗ್ರಹಿಸಿದರು.
ಸತತ ಮಳೆಯ ಅಭಾವದಿಂದ ಕುಡಿಯುವ ನೀರಿಲ್ಲದೆ ಪರಿತಪಿಸುತ್ತಿರುವ ಈ ತಾಲ್ಲೂಕು ಬರಪಟ್ಟಿಯಿಂದ ಕೈಬಿಟ್ಟಿರುವುದು ಸರ್ಕಾರದ ಪಕ್ಷಪಾತ ಧೋರಣೆಗೆ ಉದಾಹರಣೆಯಾಗಿದ್ದು ಶಾಸಕ ಕೆ.ಎಂ. ಶಿವಲಿಂಗೇಗೌಡರು ಈ ವಿಚಾರದಲ್ಲಿ ವಿಫಲರಾಗಿರುವುದು ವಿಪರ್ಯಾಸ ಎಂದ ಅವರು ತಮ್ಮ ಎಲ್ಲ ಬೇಡಿಕೆಗಳನ್ನು ಇನ್ನೊಂದು ವಾರದೊಳಗೆ ಅನುಷ್ಠಾನಕ್ಕೆ ತರದಿದ್ದರೆ ಅರಸೀಕೆರೆ ಬಂದ್ಗೆ ಕರೆ ನೀಡಿ ತಾಲ್ಲೂಕು ಕಚೇರಿ ಎದುರು ಆಹೋರಾತ್ರಿ ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಲಾಗುವುದೆಂದು ಎಚ್ಚರಿಸಿದರು.
ಬಿಜೆಪಿ ನಗರಾಧ್ಯಕ್ಷ ಕಲ್ಗುಂಡಿ ಹಿರಿಯಣ್ಣ ಮಾತನಾಡಿ, ರಾಜ್ಯ ಕಾಂಗ್ರೆಸ್ ಸರ್ಕಾರವು ರೈತರ ಜಮೀನನ್ನು ಆಳತೆ ಮಾಡಲು ಕಟ್ಟಬೇಕಾದ ಪೋಡ್ ಶುಲ್ಕವನ್ನು ರು. 600ರಿಂದ 1500 ರೂಗಳಿಗೆ ಏರಿಸಿದೆ ಎಂದು ಆರೋಪಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ರೇಣುಕುಮಾರ್, ಜಿ.ಯುವಮೋರ್ಚಾ ಅಧ್ಯಕ್ಷ ಚನ್ನಕೇಶವ, ಕಾರ್ಯದರ್ಶಿ ನಾಗೇಶ್, ಜಿ.ಸಂಘಟನಾ ಕಾರ್ಯದರ್ಶಿ ನಟೇಶ್, ಜಿ.ಮಹಿಳಾ ಮೋರ್ಚಾ ಉಪಾಧ್ಯಕ್ಷೆ ಉಮಾಕುಮಾರ್, ಕಾರ್ಯದರ್ಶಿ ಶೈಲಜಾ, ತಾ.ಬಿ.ಜೆ.ಪಿ.ಅಧ್ಯಕ್ಷ ಹರಳಕಟ್ಟ ರಮೇಶ್, ಎಪಿಎಂಸಿ ಸದಸ್ಯ ಡಿ.ಬಿ. ಗಂಗಾಧರ್ ಮಾತನಾಡಿದರು.
ತಾಲೂಕು ಪ್ರಧಾನ ಕಾರ್ಯದರ್ಶಿ ಲೋಕೇಶ್, ತಾ. ಘಟಕದ ಕಾರ್ಯದರ್ಶಿ ಮನೋಜ್ ಕುಮಾರ್, ಮುಖಂಡರಾದ ವೈ.ಕೆ. ದೇವರಾಜ್, ಬೋರನಕೊಪ್ಪಲು ರವಿ, ರೈತ ಮುಖಂಡರಾದ ಅಣ್ಣಾಯಕನಹಳ್ಳಿ ಶಿವಮೂರ್ತಿ, ಮೇಳೇನಹಳ್ಳಿ ನಾಗರಾಜ್, ಬೋರನಕೊಪ್ಪಲು ಶಿವಲಿಂಗಪ್ಪ, ದುಮ್ಮೇನಹಳ್ಳಿ ರಮೇಶ್, ಜಿ.ಪಂ.ಸದಸ್ಯ ಕೃಷ್ಣಾನಾಯಕ್, ತಾ.ಪಂ.ಸದಸ್ಯ ದಿನೇಶ್, ಹಾಗೂ ಜಯಮ್ಮ ಮತ್ತಿತರರು, ಜಿ. ಬಿಜೆಪಿ ರೈತಮೋರ್ಚಾ ಅಧ್ಯಕ್ಷ ಚಂದ್ರಶೇಖರ್ ಇನ್ನಿತರರು ಪ್ರತಿಭಟನೆಯ ನೇತೃತ್ವ ವಹಿಸಿದ್ದರು.
ಧರಣಿ ವೇಳೆ ರೈತ ಅಸ್ವಸ್ಥ
ಬಿಜೆಪಿ ಧರಣಿ ನಡೆಸುತ್ತಿದ್ದ ಸಂದರ್ಭದಲ್ಲಿ ವೃದ್ಧ ರೈತ ಬೊಮ್ಮಲಿಂಗಪ್ಪ ಇದ್ದಕ್ಕಿದ್ದಂತೆ ಕುಸಿದು ಬಿದ್ದು ತೀವ್ರ ಅಸ್ವಸ್ಥನಾಗಿದ್ದರಿಂದ ಕೂಡಲೇ ಆತನನ್ನು ಪಟ್ಟಣದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಯಿತು.