ಕಾನೂನು ಕಾಪಾಡುವಲ್ಲಿ ವಕೀಲರ ಪಾತ್ರ ಮುಖ್ಯ
ಕ.ಪ್ರ.ವಾರ್ತೆ ಆಲೂರು ಡಿ 3
ಕಾನೂನು ಕಾಪಾಡುವಲ್ಲಿ ವಕೀಲರ ಪಾತ್ರ ತುಂಬಾ ಮುಖ್ಯವಾಗಿದ್ದು, ನಾಯಾಂಗ ವ್ಯವಸ್ಥೆಯಲ್ಲಿ ನ್ಯಾಯಕ್ಕಾಗಿ ನ್ಯಾಯಾಲಯ ಮತ್ತು ಕಕ್ಷಿದಾರರ ನಡುವೆ ಸಾಮರಸ್ಯವನ್ನು ಕಲ್ಪಿಸುವಲ್ಲಿ ಪ್ರಧಾನಪಾತ್ರ ವಹಿಸುತ್ತಾರೆ. ಎಂದು ನ್ಯಾಯಾಧೀಶ ಎಂ.ಮಹೇಶ್ ಬಾಬು ತಿಳಿಸಿದರು.
ಬಿಕ್ಕೋಡು ರಸ್ತೆಯಲ್ಲಿರುವ ನ್ಯಾಯಾಲಯದಲ್ಲಿನ ವಕೀಲರ ಭವನದಲ್ಲಿ ಆಯೋಜಿಸಲಾಗಿದ್ದ ವಕೀಲರ ದಿನ ಮತ್ತು ಕಾನೂನು ದಿನಾಚರಣೆಗಳನ್ನು ಉದ್ಘಾಟಿಸಿ ಮಾತನಾಡಿ ನ್ಯಾಯಾಂಗ ವ್ಯವಸ್ಥೆಯಲ್ಲಿ ನ್ಯಾಯಾಲಯಗಳೊಂದಿಗೆ ಬೆರೆತು ಸಾಮಾಜಿಕ ಕಳಕಳಿಯೊಂದಿಗೆ ನ್ಯಾಯವನ್ನು ನೀಡುವಲ್ಲಿ ಅಥವಾ ನ್ಯಾಯಕ್ಕಾಗಿ ಹೋರಾಡುವಲ್ಲಿ ವಕೀಲರು ಮುಖ್ಯರಾಗಿದ್ದಾರೆ. ವಕೀಲರು ಮತ್ತು ನ್ಯಾಯಾಂಗವು ಒಂದೇ ನಾಣ್ಯದ ಎರಡು ಮುಖಗಳಾಗಿವೆ ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ವಕೀಲರ ಸಂಘದ ಅಧ್ಯಕ್ಷರಾದ ಕೆ.ಎನ್. ಮಹೇಂದ್ರ ಮಾತನಾಡಿ, ಸಂವಿಧಾನದ ರಕ್ಷಣೆಯ ಹೊಣೆಗಾರಿಕೆಯು ವಕೀಲರ ಮೇಲಿದ್ದು, ಸಮಯದಲ್ಲಿ ಜವಾಬ್ದಾರಿಯುತ ಸ್ಥಾನದಲ್ಲಿ ನಿರ್ವಹಣೆಯನ್ನು ಮಾಡಬೇಕಿದೆ ಎಂದು ತಿಳಿಸಿದರು.
ವಕೀಲರಾದ ಕೆ.ಕೆ. ಮಂಜೇಗೌಡ, ಕೆ. ನಾಗರಾಜ್ ಉಪಸ್ಥಿತರಿದ್ದು, ಎಚ್.ಪಿ. ಪ್ರೇಮ್ ಕುಮಾರ್ ಕಾರ್ಯಕ್ರಮ ನಿರೂಪಿಸಿದರು.