ಜನಾಭಿಪ್ರಾಯ ಸಂಗ್ರಹಿಸಿ ಕಾನೂನು ರೂಪಿಸಿಲ್ಲ
ಕ.ಪ್ರ.ವಾರ್ತೆ ಹಾಸನ ಡಿ. 3
ವಿದೇಶಗಳಲ್ಲಿ ಸಾರ್ವಜನಿಕರ ಅಭಿಪ್ರಾಯ ಸಂಗ್ರಹಿಸಿ ಕಾನೂನು ರಚಿಸಲಾಗುತ್ತದೆ. ವಿಪರ್ಯಾಸ ಅಂದ್ರೆ ನಮ್ಮ ದೇಶದಲ್ಲಿ ಕಾನೂನು ಮೊದಲು ರಚನೆಗೊಂಡು, ನಂತರ ಸಾರ್ವಜನಿಕರ ಅಭಿಪ್ರಾಯ ಸಂಗ್ರಹಿಸುವಂತಹ ದುರಾದೃಷ್ಟಕರ ಸಂಗತಿ ನಿರ್ಮಾಣವಾಗಿದೆ ಎಂದು ಹೈಕೋರ್ಟ್ ನ ಹಿರಿಯ ವಕೀಲ ಸಿ.ಎಚ್. ಹನುಮಂತರಾಯಪ್ಪ ಅಸಮಾಧಾನ ವ್ಯಕ್ತಪಡಿಸಿದರು.
ಜಿಲ್ಲಾ ವಕೀಲರ ಸಂಘದ ವತಿಯಂದ ಮಂಗಳವಾರ ನಡೆದ ವಕೀಲರ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ದೇಶ ಕಟ್ಟುವ ವಿಚಾರದಲ್ಲಿ ಕೆಟ್ಟಿರುವ ರಾಜಕೀಯ ವ್ಯಕ್ತಿಗಳನ್ನು ಪಕ್ಕಕ್ಕಿಟ್ಟು, ವಕೀಲರು, ಪತ್ರಕರ್ತರು, ಬರಹಗಾರರು ಮಹತ್ವದ ಪಾತ್ರವಹಿಸುತ್ತಾರೆ. ಸೌಧ ಕಟ್ಟಲು ಸಾಧ್ಯವಾಗದಿದ್ದರೂ ಆ ಕಲ್ಲುಗಳ ಭದ್ರತೆಗೆ ಮಧ್ಯೆ ನೀಡುವಂತಹ ಚಕ್ಕೆಗಳಾಗಿ ಸುಭದ್ರ ಸೌಧ ನಿರ್ಮಾಣಕ್ಕೆ ನಾವು ಮುಂದಾಗಬೇಕು ಎಂದರು.
ಅಂಬೇಡ್ಕರ್ ಮೇರು ಪ್ರತಿಭೆ: ಡಾ.ಬಿ.ಆರ್. ಅಂಬೇಡ್ಕರ್ ಅವರು ಸಂವಿಧಾನ ರಚಿಸುವ ಸಂದರ್ಭದಲ್ಲಿ ಸಾಕಷ್ಟು ಸಮಸ್ಯೆಗಳನ್ನು ಎದುರಿಸಿದರು. ಸಂವಿಧಾನ ಸಮಿತಿಯಲ್ಲಿ 207 ಮಂದಿ ಸದಸ್ಯರಿದ್ದರು. ಈ ಪೈಕಿ ಶೇ.60ರಷ್ಟು ಮಂದಿ ವಕೀಲರೆ ಹೆಚ್ಚಿದ್ದರು. ಕಲ್ಪನಾತೀತ ಜ್ಞಾನ ಹೊಂದಿದ್ದಂತಹ ವ್ಯಕ್ತಿಗಳ 3 ಸಾವಿರಕ್ಕೂ ಹೆಚ್ಚು ಪ್ರಶ್ನೆಗಳಿಗೆ ಅಂಬೇಡ್ಕರ್ ಅವರು ಉತ್ತರಿಸಬೇಕಾಯಿತು. ಅಂಬೇಡ್ಕರ್ ಅವರು ಅವಕ್ಕೆಲ್ಲ ಸಮರ್ಥವಾಗಿ ಉತ್ತರ ನೀಡಿ ಸಂವಿಧಾನವನ್ನು ರಚನೆ ಮಾಡಿದರು. ಅಂಬೇಡ್ಕರ್ ಅವರ ಪ್ರತಿಭೆ ಅರಿತು ಅವರನ್ನು ನಮ್ಮ ಬುಜುದ ಮೇಲೆ ಒತ್ತು ತಿರುಗಬೇಕು ಎಂದು ಹೇಳಿದರು.
1950ರಿಂದ 80ರ ಅವಧಿಯಲ್ಲಿ ವಕೀಲರು ಸಂಚಲನ ಮೂಡಿಸಲಿಲ್ಲ. ಕೇವಲ ನ್ಯಾಯಾಧೀಶರನ್ನು ಬಿಟ್ಟರೆ ವಕೀಲರು ಕ್ರಿಯಾಶೀಲರಾಗಿ ಕಾರ್ಯನಿರ್ವಹಿಸಲಿಲ್ಲ. ಅಂತಹ ಸಂದರ್ಭದಲ್ಲಿ ಇಂದಿರಾಗಾಂಧಿ ಅವರು ವಕೀಲರನ್ನು ಬಡಿದು ಎಬ್ಬಿಸಿದರು. ಮತ್ತೆ ಸಂಚಲನ ಮೂಡಿಸುವಂತೆ ಮಾಡಿದಂತಹ ಮಹಾನ್ ನಾಯಕಿಯಾದರು. 1990ರ ನಂತರ ದಲಿತ ವಕೀಲರು ಹಾಗೂ ಮಹಿಳಾ ವಕೀಲರ ಆಗಮನ ಹೆಚ್ಚಾಯಿತು. ಇತ್ತೀಚೆಗೆ ದಲಿತರು ಹಾಗೂ ಮಹಿಳಾ ವಕೀಲರು ಸಾಕಷ್ಟು ಸಂಕಲನಕಾರಿಯಾಗಿ ತಮ್ಮ ವೃತ್ತಿಯನ್ನು ನಿರ್ವಹಿಸುತ್ತಿದ್ದಾರೆ ಎಂದರು.
ಆದರೆ ಮಹಿಳಾ ವಕೀಲರ ಪ್ರಾಮಾಣಿಕತೆ ಹಾಗೂ ಅವರು ಪ್ರಕರಣವನ್ನು ಅಧ್ಯಯನ ಮಾಡುವಂತಹ ಗುಣಲಕ್ಷಣಗಳು ಪುರುಷ ವಕೀಲರಲ್ಲಿ ಕಡಿಮೆಯಾಗುತ್ತಿದೆ. ಕುಟುಂಬದ ಭದ್ರತೆ ಇಲ್ಲದಂತಹವರು ಇವತ್ತು ಯುವ ವಕೀಲರು ವೃತ್ತಿಯಲ್ಲಿ ಸಾಕಷ್ಟು ಸೇವೆ ಹಾಗೂ ಸಂಚಲನಕಾರಿಯಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ದಲಿತ ಯುವ ವಕೀಲರು ತಮ್ಮ ವೃತ್ತಿಯನ್ನು ದಿಟ್ಟತನದಿಂದ ನಡೆಸುತ್ತಿದ್ದು, ಅವರಿಗೆ ಹೊಸ ಹೊಸ ಆಯಾಮಗಳನ್ನು ಮಾಡಿಕೊಡಬೇಕಾದಂತಹ ಅವಶ್ಯಕತೆ ಇದೆ ಎಂದರು.
ಪ್ರಸ್ತುತ ಕಾನೂನು ವ್ಯವಸ್ಥೆ ವ್ಯಾಪ್ತಿಗೂ ಮೀರಿ ವಿಸ್ತಾರವಾಗಿ ಬೆಳೆದಿದ್ದು, ಅದರ ಸದುಪಯೋಗವನ್ನು ಬಳಸಿಕೊಳ್ಳಬೇಕು. ಯುವ ವಕೀಲರಿಗೆ ಸಾಕಷ್ಟು ಅವಕಾಶಗಳು ನಿರ್ಮಾಣಗೊಂಡಿದ್ದು, ಅದರ ಉಪಯೋಗವನ್ನು ಪಡೆದುಕೊಂಡು ಯಶಸ್ಸನ್ನು ಕಂಡುಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.
ಬಡವರ ಪ್ರಾರ್ಥನೆ ಅಮೂಲ್ಯ: ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ರಾಜ್ಯ ಮಾನವ ಹಕ್ಕುಗಳ ಆಯೋಗದ ಸದಸ್ಯ ಸಿ.ಜಿ. ಹುನಗುಂದ್ ಅವರು, ಪರಿಶ್ರಮ ಹಾಗೂ ಪ್ರಾಮಾಣಿಕತೆಯಿಂದ ಸಾಧನೆ ಸಾಧ್ಯ. ಆದ್ದರಿಂದ ವಕೀಲಕರು ಹಣದ ಆಮಿಷಕ್ಕೆ ಒಳಗಾಗದೇ ಪ್ರಾಮಾಣಿಕವಾಗಿ ತಮ್ಮ ವೃತ್ತಿಯನ್ನು ಮಾಡಬೇಕು. ಹಣಕ್ಕಾಗಿ ಶೀಮಂತ್ರರ ಹಿಂದೆ ಹೋಗದೆ ಬಡವರ ಪರವಾಗಿ ನ್ಯಾಯಸಮ್ಮತೆಯನ್ನು ಎತ್ತಿ ಹಿಡಿಯಬೇಕು. ಆಗ ಹಣದ ಜೊತೆಗೆ ಬಡವರು ಪ್ರಾರ್ಥನೆ ಮಾಡುತ್ತಾರೆ. ಅದು ಅಮೂಲ್ಯವಾದದ್ದು ಎಂದರು.
ವ್ಯತ್ಯಾಸ ಕಂಡುಕೊಳ್ಳಬೇಕು: ನ್ಯಾಯಾಧೀಶರು ಸದಾಕಾಲ ಗಂಭೀರವಾಗಿರುವುದರು ಜೊತೆಗೆ ಸ್ವಲ್ಪ ಮನಸ್ಸಿನ ಚಿತ್ತವನ್ನು ಹರ್ಷೋನ್ಮುಖವಾಗಿಸಿಕೊಳ್ಳಬೇಕು. ಜಾಗತೀಕರಣ, ಉದಾರೀಕರಣದ ಬಗ್ಗೆ ಮಾತುನಾಡುತ್ತೇವೆ. ಆದರೆ ಮನುಷ್ಯ ಮತ್ತು ಮಾನವನ ನಡುವೆ ಇರುವಂತಹ ವ್ಯತ್ಯಾಸಗಳನ್ನು ಮೊದಲು ಕಂಡುಕೊಳ್ಳಬೇಕು. ಮನುಷ್ಯ ಮೊದಲು ಮಾನವನಾಗಬೇಕು. ಆಗ ಮಾತ್ರ ತಾನು ಅಂದುಕೊಂಡಿದ್ದನ್ನು ಸಾಧಿಸಲು ಸಾಧ್ಯವಾಗುತ್ತದೆ. ಕೇವಲ ಹಣದ ಹಿಂದೆ ಹೋದರೆ ಸಾಧನೆ ಸಾಧ್ಯವಿಲ್ಲ ಎಂದ ಅವರು, ಮಾನವೀಯತೆಯನ್ನು ಅಳವಡಿಸಿಕೊಂಡು ವೃತ್ತಿ ಮಾಡಿದಾಗ ಮಾತ್ರ ಯಶಸ್ಸು ಸಾಧ್ಯ ಎಂದು ಕಿವಿಮಾತು ಹೇಳಿದರು.
ನ್ಯಾಯಾಂಗ ಮುಖ್ಯ: ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಜೆ.ಎಸ್. ಸೋಮಶೇಖರ್ ಮಾತನಾಡಿ, ಶಾಸಕಾಂಗ ಮತ್ತು ಕಾರ್ಯಾಂಗಕ್ಕಿಂತ ನ್ಯಾಯಾಂಗ ಭಿನ್ನವಾಗಿ ಕಾರ್ಯನಿರ್ವಹಿಸುತ್ತದೆ. ನ್ಯಾಯಾಂಗ ವ್ಯವಸ್ಥೆ ಸ್ವಲ್ಪ ಕುಸಿದರೆ ಸಮಾಜದ ವ್ಯವಸ್ಥೆಯಲ್ಲಿ ಏರುಪೇರಾಗಲಿದೆ. ಆದ್ದರಂದ ಸಮಾಜದಲ್ಲಿ ನಾಯ್ಯಾಂಗ ವ್ಯವಸ್ಥೆಯ ಪಾತ್ರ ಬಹಳ ಮುಖ್ಯವಾದದ್ದಾಗಿದೆ. ವಕೀಲರೆಲ್ಲರೂ ಸಮಾಜದ ಪರವಾಗಿ ಕಾರ್ಯನಿರ್ವಹಿಸುವ ಮೂಲಕ ನ್ಯಾಯವನ್ನು ಎತ್ತಿ ಹಿಡಿಯಬೇಕು ಎಂದರು.
ಕಾರ್ಯ ಪ್ರವೃತ್ತರಾಗಬೇಕು: ಸಮಾಜದಲ್ಲಿನ ಅಜ್ಞಾನ ಮತ್ತು ಮೂಢನಂಬಿಕೆ ತೊಡೆದು ಹಾಕಬೇಕು. ಸರ್ಕಾರದ ಯೋಜನೆಗಳು ಸಾರ್ವಜನಿಕರಿಗೆ ಸಿಗುವಂತೆ ಮಾಡಬೇಕು. ಜೊತೆಗೆ ಪ್ರಕರಣಗಳನ್ನು ಶೀಘ್ರ ವಿಲೇವಾರಿ ಮಾಡುವಂತಹ ಪ್ರಕರಣಗಳನ್ನು ಇತ್ಯರ್ಥಗೊಳಿಸಬೇಕು. ರಾಜಿ ಸಂಧಾನದ ಮೂಲಕ ಪ್ರಕರಣಗಳ ಇತ್ಯರ್ಥ ಸಾಧ್ಯವಾಗುತ್ತದೆ. ಆದ್ದರಿಂದ ಈ ನಿಟ್ಟಿನಲ್ಲಿ ವಕೀಲರು ಕಾರ್ಯಪ್ರವೃತ್ತರಾಗಬೇಕು ಎಂದು ಕಿವಿ ಮಾತು ಹೇಳಿದರು.
ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ವಕೀಲರ ಪರಿಷತ್ ಅಧ್ಯಕ್ಷ ಸಿ.ಆರ್.ಗೋಪಾಲಸ್ವಾಮಿ, ಸದಸ್ಯ ಎಚ್.ವಿ. ತಿಮ್ಮೇಗೌಡ, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ದೇವರಾಜೇಗೌಡ, ಸಂಘದ ಉಪಾಧ್ಯಕ್ಷ ಎಚ್.ಪಿ. ಪರಮೇಶ್, ಪ್ರಧಾನ ಕಾರ್ಯದರ್ಶಿ ವಸಂತ್ಕುಮಾರ್, ಜಂಟಿ ಕಾರ್ಯದರ್ಶಿ ಸರಸ್ವತಿ ತಿಮ್ಮರಾಜು, ಖಂಜಾಂಚಿ ಬಿ.ಆರ್. ಕಂಬೇಗೌಡ ಇದ್ದರು.