ಮತ್ತೆ ಕಾಡಾನೆ ದಾಳಿ: ಲಕ್ಷಾಂತರ ಮೌಲ್ಯದ ಬೆಳೆ ನಷ್ಟ
ಕನ್ನಡಪ್ರಭ ವಾರ್ತೆ ಟಿ ಆಲೂರು ಟಿ ಡಿ.3
ತಾಲೂಕಿನ ಕೆಂಚಮ್ಮನ ಹೊಸಕೋಟೆ ಅನೇಕ ಗ್ರಾಮಗಳಲ್ಲಿ ಕಾಡಾನೆಗಳು ಸೋಮವಾರ ಮತ್ತು ಮಂಗಳವಾರ ತಮ್ಮ ದಾಳಿ ಮುಂದುವರಿಸಿದ್ದು ಲಕ್ಷಾಂತರ ರು. ಮೌಲ್ಯದ ಬೆಳೆ ನಾಶಗೊಳಿಸಿವೆ. ಇದರಿಂದ ರೋಸಿ ಹೋಗಿರುವ ಗ್ರಾಮಸ್ಥರು ಕೂಡಲೇ ಕಾಡಾನೆ ಹಿಡಿಯುವ ಕಾರ್ಯಾಚರಣೆ ಪ್ರಾರಂಭಿಸದಿದ್ದರೆ ವಿಧಾನಸೌಧದ ಮುಂಭಾಗ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಎಚ್ಚರಿಸಿದ್ದಾರೆ.
ಎರಡು ಹಿಂಡು: ಹೋಬಳಿಯ ದೊಡ್ಡಬೆಟ್ಟ ಹಾಗೂ ಅಬ್ಬನ ಬಳಿಯ ಟಾಟಾ ಎಸ್ಟೇಟ್ ಬಳಿ ಎರಡು ಹಿಂಡುಗಳಾಗಿ ಬೀಡುಬಿಟ್ಟಿರುವ ಆನೆಗಳ ಹಿಂಡು ಸೋಮವಾರ ರಾತ್ರಿಯಿಡೀ ಹಾಗೂ ಮಂಗಳವಾರ ಬೆಳಗ್ಗೆ ದೊಡ್ಡ ಬೆಟ್ಟ ಪ್ರದೇಶದ ಮಾದಿಹಳ್ಳಿ, ಮೊದಲನೇ ಕೊಪ್ಪಲು ಹಾಗೂ ಅಬ್ಬನ, ಬೋಸ್ಮಾನಹಳ್ಳಿ, ಕಾಣಗೆರೆ, ಕಣಿವೆ ಬಸವನಹಳ್ಳಿ ಮುಂತಾದ ಗ್ರಾಮಗಳಲ್ಲಿ ದಾಂಧಲೆ ನಡೆಸಿ ಅಪಾರ ಪ್ರಮಾಣದ ಬತ್ತ, ರಾಗಿ, ಬಾಳೆ, ಅಡಿಕೆ, ಕಾಫಿ ಮುಂತಾದ ಬೆಳೆಗಳನ್ನು ನಾಶಪಡಿಸಿವೆ.
ಗದ್ದೆ ಸಂಪೂರ್ಣ ನಾಶ: ದೊಡ್ಡಬೆಟ್ಟದಲ್ಲಿ ಬೀಡುಬಿಟ್ಟಿರುವ 15 ಆನೆಗಳ ಒಂದು ಹಿಂಡು, ಮಾದಿಹಳ್ಳಿ ಹಾಗೂ ಮೊದಲನೇಕೊಪ್ಪಲು ಗ್ರಾಮಗಳಲ್ಲಿ ಕಳೆದ ಎರಡು ದಿನಗಳಿಂದ ನಿರಂತರವಾಗಿ ದಾಳಿ ನಡೆಸುತ್ತಿದ್ದು, ಗ್ರಾಮದ ರುಕ್ಮಿಣಿ, ಗಂಗಾಧರ್, ಬಿ.ಆರ್. ಚಂದ್ರೇಗೌಡ, ರವಿ, ಜಗದೀಶ್, ಎಂ.ಜಿ. ಚಂದ್ರೇಗೌಡ, ಬೋರೇಗೌಡ, ದೇವರಾಜೇಗೌಡ ಮುಂತಾದವರು ಬೆಳೆದ ಗದ್ದೆಯನ್ನು ಸಂಪೂರ್ಣ ನಾಶಗೊಳಿಸಿವೆ.
ಟಾಟಾ ಎಸ್ಟೇಟ್ ಬಳಿಯ ಅಬ್ಬನ ಗ್ರಾಮ, ಬೋಸ್ಮಾನಹಳ್ಳಿ ಗ್ರಾಮಗಳಲ್ಲಿ ಬೀಡು ಬಿಟ್ಟಿರುವ ನಾಲ್ಕು ಆನೆಗಳ ಹಿಂಡು ಗ್ರಾಮದ ದೇವರಾಜ್, ಗಣೇಶ್, ಚಿಂತಯ್ಯ, ಪುರುಷೋತ್ತಮ್ ಅವರ ತೋಟ ಗದ್ದೆಗಳಲ್ಲಿ ಮನಸೋ ಇಚ್ಛೆ ದಾಳಿ ನಡೆಸಿ, ಕಾಫಿ, ಬತ್ತ, ಬಾಳೆ ಬೆಳೆಗಳನ್ನು ನಾಶಪಡಿಸಿವೆ.
ಬೆಟ್ಟದಲ್ಲಿ ಬೀಡು: ಕಾಣಗೆರೆ ಗ್ರಾಮದ ಕೆಂಪೇಗೌಡ ಎಂಬವರ ಮನೆಯ ಹಿಂಭಾಗ ಬೆಳೆದ ರಾಗಿ ಬೆಳೆಯನ್ನು ಹಾಳುಗೆಡವಿ, ಮನೆಯ ಗೇಟ್ ಮುರಿದು ಮನೆಯ ಬಳಿಗೆ ಸಾಗಿದ ಆನೆಗಳು ನಂತರ ಕಣಿವೆ ಬಸವನಹಳ್ಳಿ ಮೂಲಕ ರಂಗನಾಥಸ್ವಾಮಿ ಬೆಟ್ಟದ ಪ್ರದೇಶಕ್ಕೆ ಹೋಗಿ ಬೀಡುಬಿಟ್ಟಿವೆ.
ಈ ಸಂಬಂಧವಾಗಿ ಬೆಳೆ ನಷ್ಟ ಪರಿಹಾರಕ್ಕೆ ಅರ್ಜಿ ಹಾಕಲು ತಹಸೀಲ್ದಾರ್ ಕಚೇರಿಯಲ್ಲಿ ಪಹಣಿ ಪಡೆಯಲು ಬಂದಿದ್ದ ಗ್ರಾಮಸ್ಥರು ಪತ್ರಿಕೆಯೊಂದಿಗೆ ಮಾತನಾಡಿ, ಪ್ರತಿದಿನ ಈ ಭಾಗದಲ್ಲಿ ಕಾಡಾನೆಗಳು ದಾಳಿ ನಡೆಸುತ್ತಿದ್ದು, ಬೆಳೆಗಳು ಆನೆಗಳ ಪಾಲಾಗುತ್ತಿವೆ. ಸಾಲ- ಸೋಲ ಮಾಡಿ ವರ್ಷವಿಡೀ ಬೆಳೆದ ಬೆಳೆ ನಷ್ಟದಿಂದ ಸಾಲವನ್ನು ತೀರಿಸಲಾಗದೆ ಅರೆಹೊಟ್ಟೆಯಲ್ಲಿ ಜೀವನ ನಡೆಸುತ್ತಿರುವ ನಮ್ಮ ಕಷ್ಟ ಕೇಳುವವರೇ ಇಲ್ಲದಂತಾಗಿದೆ ಎಂದರು.
ಗ್ರಾಮಸ್ಥರ ಆರೋಪ: ಬೆಳೆ ನಷ್ಟ ಪರಿಹಾರಕ್ಕೆ ವಾರಕ್ಕೊಮ್ಮೆ ತಹಸೀಲ್ದಾರ್ ಕಚೇರಿಗೆ ಬಂದು ಬಿಸಿಲ ಬೇಗೆಯಲ್ಲಿ ಗಂಟೆಗಟ್ಟಲೆ ಸರದಿಯಲ್ಲಿ ನಿಂತು ಪಹಣಿ ಪಡೆದು ಬೆಳೆ ಪರಿಹಾರಕ್ಕೆ ಅರ್ಜಿಹಾಕಬೇಕಾಗಿರುವುದು ನಮ್ಮ ದುರಾದೃಷ್ಟವೇ ಸರಿ. ಬೆಳೆ ಪರಿಹಾರ ಅವೈಜ್ಞಾನಿಕವಾಗಿದ್ದು, ಸೂಕ್ತವಾಗಿ ದೊರೆಯದೇ ಇರುವುದು ನಮ್ಮ ಕಷ್ಟವನ್ನು ದ್ವಿಗುಣಗೊಳಿಸಿದೆ. ಇದಕ್ಕೆಲ್ಲ ಜನಪ್ರತಿನಿಧಿಗಳ ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣ ಎಂದು ಆರೋಪಿಸಿದ ಗ್ರಾಮಸ್ಧರು, ಕಳೆದ ತಿಂಗಳು ಒಂದೇ ವಾರದಲ್ಲಿ ಕಾಡಾನೆಗಳು ಇಬ್ಬರನ್ನು ಬಲಿ ತೆಗೆದುಕೊಂಡಾಗ ಎಲ್ಲಾ ಆನೆಗಳನ್ನು ಹಿಡಿದು ಸ್ಥಳಾಂತರಿಸುತ್ತೇವೆ ಎಂದು ಹೇಳಿ 5 ದಿನ ಕಾರ್ಯಾಚರಣೆ ನಡೆಸಿದ ಅರಣ್ಯ ಇಲಾಖೆಯವರು ನರಹಂತಕ ದೈತ್ಯದೇಹಿ ಒಂಟಿ ಸಲಗವನ್ನು ಹಿಡಿಯಲಾಗದೆ ಚಿಕ್ಕ ಮರಿ ಆನೆಯನ್ನು ಸಕಲೇಶಪುರ ತಾಲೂಕಿನ ಅರಣ್ಯ ಪ್ರದೇಶದಲ್ಲಿ ಹಿಡಿದು ಜನರ ಕಣ್ಣಿಗೆ ಮಣ್ಣೆರೆರಚಿದ್ದಾರೆ ಎಂದರು.
ಅನುಕೂಲವಾಗಿಲ್ಲ: ಒಂಟಿ ಸಲಗ ಈಗಲೂ ದೊಡ್ಡಬೆಟ್ಟ ಪ್ರದೇಶದಲ್ಲಿ ಅಡ್ಡಾಡುತ್ತಿದ್ದು, ತಾವು ಸೋಮವಾರವಷ್ಟೇ ನೋಡಿದ್ದೇವೆ. ನಮ್ಮ ಈ ಭಾಗದಲ್ಲಿ ಚಿಕ್ಕ ಮರಿ ಆನೆ ಹಿಡಿದರೆ ಜನರು ಗಲಾಟೆ ಮಾಡುತ್ತಾರೆಂದು ದೂರದ ಕೆರೋಡಿ ಬಳಿಯ ಅರಣ್ಯದಲ್ಲಿ ಮರಿ ಆನೆ ಹಿಡಿದು ಜಾಗ ಖಾಲಿ ಮಾಡಿದ್ದಾರೆ. ಮರಿ ಆನೆ ಹಿಡಿದಿದ್ದರಿಂದ ಈ ಭಾಗದ ಜನರಿಗೆ ಯಾವುದೇ ಅನುಕೂಲವಾಗಿಲ್ಲ. ಸರ್ಕಾರದವರು ಪ್ರತಿ ಬಾರಿ ಉಪಟಳ ನೀಡುವ ಹಾಗೂ ಮಾನವ ಹಂತಕ ಆನೆಗಳನ್ನು ಹಿಡಿಯಿರಿ ಎಂದು ಆದೇಶ ನೀಡಿದಾಗ ದೊಡ್ಡ ಆನೆಗಳನ್ನು ಹಿಡಿಯಲಾಗದ ಅರಣ್ಯ ಇಲಾಖೆಯವರು ಚಿಕ್ಕ ಆನೆಯನ್ನೇ ಹಿಡಿದುಕೊಂಡು ಹೋಗುತ್ತಿದ್ದಾರೆ.
ಅಳಲು: ಈ ಸಂಬಂಧ ಈವರೆಗೂ ನಾವು ನೂರಾರು ಬಾರಿ ಪ್ರತಿಭಟನೆ ನಡೆಸುತ್ತಿದ್ದು, ನಮ್ಮ ದನಿ ಯಾರಿಗೂ ಕೇಳದಿದ್ದರಿಂದ ಪ್ರತಿಭಟನೆ ಮಾಡುವುದನ್ನೇ ಬಿಟ್ಟಿದ್ದೇವೆ ಎಂದು ಗ್ರಾಮಸ್ಥರು ಅಳಲು ತೋಡಿಕೊಂಡರು.
ಎಚ್ಚರಿಕೆ: ಆನೆ ಬೆಳೆನಷ್ಟ ಉಂಟು ಮಾಡಿದಾಗ ಸ್ಥಳಕ್ಕೆ ಬಂದು ನೋಡಿಕೊಂಡು ಹೋಗುವ ಅರಣ್ಯ ಇಲಾಖೆಯವರು ಇನ್ನು ಮುಂದೆ ತಾವೇ ಬೆಳನಷ್ಟಕ್ಕೆ ಅರ್ಜಿ ಹಾಕಿ ನಮಗೆ ಪರಿಹಾರವನ್ನು ದೊರಕಿಸಿಕೊಡಬೇಕು. ಅದು ಅವರ ಜವಾಬ್ದಾರಿಯಾಗುತ್ತದೆ. ಆನೆ ಸಮಸ್ಯೆಗೆ ಪರಿಹಾರ ಕಂಡುಹಿಡಿಯಲಾಗದ ಅರಣ್ಯ ಇಲಾಖೆಯವರು ಇಷ್ಟಾದರೂ ಮಾಡಲಿ ಎಂದ ಅವರು, ಕೂಡಲೇ ಕಾಡಾನೆ ಹಿಡಿಯುವ ಕಾರ್ಯಾಚರಣೆ ಪ್ರಾರಂಭಿಸದಿದ್ದರೆ ಎಲ್ಲರೂ ವಿಧಾನಸೌಧದ ಮುಂಭಾಗ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಎಚ್ಚರಿಸಿದ್ದಾರೆ.