ಮಾನವ ಹಕ್ಕುಗಳ ಆಯೋಗದಿಂದ ಬಾಲ ಮಂದಿರಗಳ ಪರಿಶೀಲನೆ
ಕ.ಪ್ರ.ವಾರ್ತೆ ಹಾಸನ ಡಿ 3
ರಾಜ್ಯ ಮಾನವ ಹಕ್ಕುಗಳ ಆಯೋಗದ ಸದಸ್ಯ ಸಿ.ಜೆ. ಹುನಗುಂದ್ ಅವರು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗೆ ಸೇರಿದ ಬಾಲಕ ಮತ್ತು ಬಾಲಕಿಯರ ಬಾಲ ಮಂದಿರ ಹಾಗೂ ವಿಚಕ್ಷಣಾ ಕೇಂದ್ರಗಳಿಗೆ ಮಂಗಳವಾರ ಭೇಟಿ ನೀಡಿ ಅಲ್ಲಿನ ವ್ಯವಸ್ಥೆಗಳನ್ನು ಪರಿಶೀಲಿಸಿದರು.
ಮಕ್ಕಳಿಗೆ ನೀಡಲಾಗುತ್ತಿರುವ ಊಟೋಪಚಾರ, ವಸತಿ, ಶಿಕ್ಷಣ ವ್ಯಕ್ತಿತ್ವ ವಿಸನಕ್ಕೆ ಕೈಗೊಳ್ಳಲಾಗುತ್ತಿರುವ ಚಟುವಟಿಕೆಗಳು, ಕೌನ್ಸಿಲಿಮಗ್ ವ್ಯವಸ್ಥೆ, ಮತ್ತಿತರ ಅಂಶಗಳನ್ನು ಕೂಲಂಕಶವಾಗಿ ಅವರು ಪರಿಶೀಲಿಸಿದರು.
ಬಾಲಮಂದಿರಗಳಲ್ಲಿ ಬೆಳೆಯುವ ಮಕ್ಕಳಿಗೆ ಉತ್ತಮ ಬದುಕು ರೂಪಿಸಿಕೊಳ್ಳಲು ಅವಕಾಶ ಕಲ್ಪಿಸಬೇಕು. ಆ ನಿಟ್ಟಿನಲ್ಲಿ ಇನ್ನಷ್ಟು ಉತ್ತಮ ಕ್ರಮಗಳನ್ನು ಕೈಗೊಳ್ಳಿ ಎಂದು ಹುನಗುಂದ್ ಅವರು ಮಹಿಳಾ ಮತ್ತು ಮಕ್ಕಳ ಇಲಾಖಾ ಆಧಿಕಾರಿಗಳಿಗೆ ಸೂಚಿಸಿದರು.
ಲಭ್ಯವಿರುವ ವ್ಯವಸ್ಥೆಯಲ್ಲಿ ಉತ್ತಮವಾದ ಸೌಕರ್ಯ ಕಲ್ಪಿಸುತ್ತಿರುವ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಅವರು ವಿಚಕ್ಷಣಾ ದಳದಲ್ಲಿರುವ ವಿಚಾರ ಮತ್ತು ಬಾಲಕಿಯರ ಬಾಲ ಮಂದಿರದಲ್ಲಿರುವ 15 ವರ್ಷ ಮೇಲ್ಪಟ್ಟವರ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿ ಪರ್ಯಾಯ ವ್ಯವಸ್ಥೆಗಳನ್ನು ಮಾಡಲು ತಿಳಿಸಿದರು.
ಮಕ್ಕಳೊಂದಿಗೆ ಮಾತುಕತೆ ನಡೆಸಿದ ಅವರು ಉತ್ತಮ ಪ್ರಜೆಗಳಾಗಿ ರೂಪುಗೊಳ್ಳಿ ಎಂದು ಕಿವಿಮಾತು ಹೇಳಿದರು.
ಈ ಸಂದರ್ಭದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಚಿದಾನಂದ್, ತಹಸೀಲ್ದಾರ್ ಮಂಜುನಾಥ್, ಮಕ್ಕಳ ರಕ್ಷಣಾ ಘಟಕದ ಮುಖ್ಯಸ್ಥೆ ಗೀತಾ, ಸ್ವಯಂ ಸೇವಾ ಸಂಸ್ಥೆಗಳ ಪ್ರತಿನಿಧಿಗಳು ಹಾಗೂ ಇತರರು ಇದ್ದರು.