ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ರಂಗಭೂಮಿ ಪರಿಣಾಮಕಾರಿ ಮಾಧ್ಯಮ: ಜನ್ನಿ

Rashmi Kasaragodu
Updated On : 4 Dec 2013, 12:37 pm


ಕನ್ನಡಪ್ರಭ ವಾರ್ತೆ, ಹಾಸನ,  ಡಿ.3
ಹಿರಿಯ ರಂಗಕರ್ಮಿ ಕೆ. ಸಣ್ಣೇಗೌಡ ಅವರ ಸ್ಮರಣಾರ್ಥ ಹಾಸನಾಂಬ ಕಲಾ ಕ್ಷೇತ್ರದಲ್ಲಿ ರಂಗಸಿರಿ ತಂಡ ಏರ್ಪಡಿಸಿರುವ 5 ದಿನಗಳ ನಾಟಕೋತ್ಸವಕ್ಕೆ ಚಾಲನೆ ನೀಡಲಾಯಿತು.
ನಾಟಕೋತ್ಸವ ಉದ್ಘಾಟಿಸಿದ  ಮೈಸೂರು ರಂಗಾಯಣ ನಿರ್ದೇಶಕ ಜನಾರ್ಧನ (ಜನ್ನಿ) ಮಾತನಾಡಿ, ರಂಗಭೂಮಿ ಬೌದ್ಧಿಕ ವಿಕಸನದ ವೇದಿಕೆ, ಕಲಾವಿದ ತಮ್ಮೊಳಗಿರುವ ತುಡಿತವನ್ನು ಅಭಿವ್ಯಕ್ತಪಡಿಸಲು ಇದೊಂದು ಪರಿಣಾಮಕಾರಿ ಮಾಧ್ಯಮ ಎಂದು ಹೇಳಿದರು.
ಪ್ರತಿಯೊಬ್ಬರಲ್ಲಿ ಸುಪ್ತವಾಗಿ ಅಡಗಿರುವ ಕಲೆಯನ್ನು ಪ್ರೇಕ್ಷಕರೊಂದಿಗೆ ಸಮ್ಮಿಲನಗೊಳಿಸುವ ವಿಶೇಷವಾದ ಈ ಮಾಧ್ಯಮ ಸಹಸ್ರಶತಮಾನಗಳಿಂದಲೂ ಜೀವಂತ ಮಾಧ್ಯಮವಾಗಿ ಉಳಿದು ಬೆಳೆದು ಬಂದಿದೆ. ಇದೊಂದು ಚಲನೆಯಿರುವ ನಿರಂತರ ಪ್ರಕ್ರಿಯೆ ಎಂದರು.
ಹಾಸನದಲ್ಲಿ ಹಿರಿಯ ರಂಗಕರ್ಮಿಯೊಬ್ಬರ ನೆನಪಿನಲ್ಲಿ ನಾಟಕೋತ್ಸವ ಮೂಲಕ ಗೌರವಾರ್ಪಣೆ ಸಲ್ಲಿಸುತ್ತಿರುವುದು ಮಾದರಿ ಬೆಳವಣಿಗೆ. ಒಬ್ಬ ನಿಜವಾದ ಕಲಾವಿದನಿಗೆ ನೀಡುವ ಗೌರವ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಶಾಸಕ ಎಚ್.ಎಸ್. ಪ್ರಕಾಶ್ ಮಾತನಾಡಿ, ನಾಟಕಗಳ ಮೂಲಕ ಬದುಕಿನ ಒಳ ಅರ್ಥವನ್ನು ಅರ್ಥ ಮಾಡಿಸುವ ಹಲವು ನಾಟಕಗಳ ಕ್ರಿಯಾಶೀಲ ಪ್ರಯೋಗಗಳನ್ನು ಉದಾಹರಿಸಿದರು. ನಾಟಕಗಳ ವೀಕ್ಷಣೆ ಮೂಲಕ ರಂಗಭೂಮಿಯನ್ನು ಪ್ರೋತ್ಸಾಹಿಸುವ ಕೆಲಸ ಆಗಬೇಕು. ಈ ನಿಟ್ಟಿನಲ್ಲಿ ಹಾಸನ ರಂಗಸಿರಿ ಉತ್ತಮ ಕೆಲಸ ಮಾಡುತ್ತಿದೆ ಎಂದರು.
ಸೇವೆ ಸ್ಮರಣೀಯ: ರಾಜ್ಯ ಪತ್ರಕರ್ತರ ಸಂಘದ ಉಪಾಧ್ಯಕ್ಷ ಶಿವಾನಂದ ತಗಡೂರು ಮಾತನಾಡಿ, ರಂಗಭೂಮಿಯಲ್ಲಿ ತಮ್ಮದೇ ಆದ ಶಿಸ್ತು ಮೈಗೂಡಿಸಿಕೊಂಡು ಹಾಸನ ಜಿಲ್ಲೆಯಲ್ಲಿ ವಿಶೇಷ ಛಾಪು ಮೂಡಿಸಿದ ಸಣ್ಣೇಗೌಡರ ರಂಗಭೂಮಿ ಸೇವೆ ಸ್ಮರಣೀಯ ಎಂದು ಹೇಳಿದರು.
ಸಮಾಜ ಸೇವಕ ಡಾ.ಎ.ಸಿ.ಮುನಿವೆಂಕಟೇಗೌಡ, ಕಲಾ ಕಾಲೇಜಿನ ಪ್ರಾಂಶುಪಾಲ ಡಾ.ಐ.ಎಂ. ಮೋಹನ್, ಗುಲ್ಬರ್ಗಾ ರಂಗಕರ್ಮಿ ಶಂಕರಯ್ಯ ಘಂಟಿ, ರಂಗಸಿರಿಯ ಗೌರವಾಧ್ಯಕ್ಷ ಅಪ್ಪಾಜಿಗೌಡ, ಅಧ್ಯಕ್ಷ ಕೆ.ರಂಗಸ್ವಾಮಿ ಅವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ರಂಗಸಿರಿ ಕಾರ್ಯದರ್ಶಿ ಪಿ. ಶಾಡ್ರಾಕ್ ಸ್ವಾಗತಿಸಿದರು. ಉಪಾಧ್ಯಕ್ಷ ಕೊಟ್ಟೂರು ಶ್ರೀನಿವಾಸ್ ನಿರೂಪಿಸಿದರು. ರಂಗಾಯಣ ನಿರ್ದೇಶಕ ಜನ್ನಿ ಅವರನ್ನು ಸನ್ಮಾನಿಸಲಾಯಿತು. ರಂಗಸಿರಿ ಕಲಾವಿದರು ಪಿ. ಲಂಕೇಶ್ ಅನುವಾದಿಸಿರುವ ಅಂತಿಗೊನೆ ನಾಟಕವನ್ನು ಪ್ರದರ್ಶಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement