ವಸತಿ ಯೋಜನೆಯಡಿ 12964 ಮನೆ ಹಂಚಿಕೆ
ಕ.ಪ್ರ.ವಾರ್ತೆ ಹಾಸನ ಡಿ.3
ನಾನಾ ವಸತಿ ಯೋಜನೆಯಡಿ ಒಟ್ಟು ರು. 2429.87 ಲಕ್ಷ ಅನುದಾನ ಬಿಡುಗಡೆ ಮಾಡಲಾಗಿದ್ದು ಬಸವ ವಸತಿ ಯೋಜನೆ ಮತ್ತು ವಿವಿಧ ವಸತಿಯೋಜನೆಯಡಿ ಕಳೆದ ಎರಡು ವರ್ಷಗಳಿಂದ 12964 ಮನೆಗಳನ್ನು ಹಂಚಿಕೆ ಮಾಡಲಾಗಿದೆ ಎಂದು ವಸತಿ ಸಚಿವ ಡಾ. ಅಂಬರೀಷ್ ತಿಳಿಸಿದರು.
ವಿಧಾನ ಪರಿಷತ್ ಸದಸ್ಯ ಪಟೇಲ್ ಶಿವರಾಂ ಅವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು, ವಸತಿ ಯೋಜನೆಯಡಿ 2482 ಮನೆಗಳು ಪೂರ್ಣಗೊಂಡು 5580 ಮನೆಗಳು ಪ್ರಗತಿಯಲ್ಲಿವೆ ಎಂದಿದ್ದಾರೆ.
4890 ಮನೆಗಳು ನಿಗದಿತ ಸಮಯದಲ್ಲಿ ಪ್ರಾರಂಭಗೊಳ್ಳದಿದ್ದರಿಂದ ಹಾಗೂ ಸಾಕಷ್ಟು ಕಾಲಾವಕಾಶ ನೀಡಿದ್ದರೂ ಪ್ರಾರಂಭ ಮಾಡಿಕೊಳ್ಳದಿದ್ದರಿಂದ ಸದರಿ ಮನೆಗಳನ್ನು ಬ್ಲಾಕ್ ಮಾಡಲಾಗಿದೆ ಎಂದು ಸಚಿವರು ತಿಳಿಸಿದರು.
ಬಸವ ವಸತಿ ಯೋಜನೆಯಡಿ 5160, ಇಂದಿರಾ ಆವಾಸ್ ಯೋಜನೆಯಡಿ 3055 ಹಾಗೂ ವಾಜಪೇಯಿ ವಸತಿ ಯೋಜನೆಯಡಿ 580 ಮನೆಗಳ ಗುರಿಯನ್ನು ನಿಗದಿಪಡಿಸಲಾದ್ದು ಫಲಾನುಭವಿಗಳ ಆಯ್ಕೆ ಪ್ರಗತಿಯಲ್ಲಿರುತ್ತದೆ ಎಂದು ವಸತಿ ಸಚಿವರು ಪಟೇಲ್ ಶಿವರಾಂ ಕೇಳಿದ ಪ್ರಶ್ನೆಗೆ ವಿಧಾನ ಪರಿಷತ್ನಲ್ಲಿ ಉತ್ತರಿಸಿದರು.