ಸಂವಿಧಾನ ರಕ್ಷಣೆಗೆ ವಕೀಲರ ಸಹಕಾರ ಅಗತ್ಯ
ಆಲೂರು: ಸಂವಿಧಾನ ರಕ್ಷಣೆಯಲ್ಲಿ ವಕೀಲರು ನ್ಯಾಯಾಂಗದೊಂದಿಗೆ ಕೈಜೋಡಿಸಿದ್ದು ಅವರ ಸಹಕಾರ ನಿರಂತರ ಅಗತ್ಯವೆಂದು ತಾಲೂಕು ಕಾನೂನು ಸೇವಾ ಸಮಿತಿ ಸದಸ್ಯ ಕಾರ್ಯದರ್ಶಿ ಹಾಗೂ ಜೆ.ಎಂ.ಎಫ್.ಸಿ. ನ್ಯಾಯಾಧೀಶ ಎಂ. ಮಹೇಶ್ ಬಾಬು ತಿಳಿಸಿದರು. ವಕೀಲರ ಭವನದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ವಕೀಲರ ದಿನ ಮತ್ತು ಕಾನೂನು ದಿನಾಚರಣೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು. ನ್ಯಾಯದಾನದಲ್ಲಿ ನ್ಯಾಯಾಂಗದಷ್ಟೇ ಸಮನಾದ ಹೊಣೆಗಾರಿಕೆಯನ್ನು ವಕೀಲರು ಹೊಂದಿದ್ದು, ಸಾಮಾನ್ಯ ಜನರ ಸಾಂವಿಧಾನಿಕ ಹಕ್ಕುಗಳನ್ನು ಸಂರಕ್ಷಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆಂದರು.
4ನೇ ಸ್ಥಾನದಲ್ಲಿ: ತಮ್ಮ ಮಾತುಗಳಲ್ಲಿ ಆಲೂರು ಕಾನೂನು ಸೇವಾ ಸಮಿತಿಯ ಸಾಧನೆಯನ್ನು ಬಣ್ಣಿಸಿದರು ಅವರು, ಸೆ. 9ರಿಂದ ನ. 23ರವರೆಗೆ ರಾಷ್ಟ್ರಾದ್ಯಂತ ಏಕಕಾಲಲ್ಲೇ ನಡೆದ ಬೃಹತ್ ಜನತಾ ನ್ಯಾಯಾಲಯದಲ್ಲಿ ಒಟ್ಟು 547 ಪ್ರಕರಣಗಳು ಇತ್ಯರ್ಥಗೊಂಡಿದ್ದು ಆಲೂರು. ಕಾ.ಸೇ. ಸಮಿತಿ. 4ನೇ ಸ್ಥಾನದಲ್ಲಿದೆಯೆಂದು ಹೇಳಿದರು. ವಕೀಲರ ಸಂಘದ ಅಧ್ಯಕ್ಷ ಕೆ.ಎನ್.ಮಹೇಂದ್ರ ಮಾತನಾಡಿ, ಪ್ರಸ್ತುತ ವಕೀಲರಿಗೆ ಯಾವುದೇ ಭದ್ರತೆಯಿಲ್ಲ ಸರ್ಕಾರ ಈ ಬಗ್ಗೆ ಸೂಕ್ತ ಕಾಯ್ದೆಗಳನ್ನು ರೂಪಿಸುವ ಅವಶ್ಯಕತೆ ಇದೆ ಎಂದು ಹೇಳಿದರು. ವಕೀಲ ಕೆ.ಕೆ.ಮಂಜೇಗೌಡ, ಕೆ.ನಾಗರಾಜ್, ಹೆಚ್.ಪಿ.ಪ್ರೇಮ್ ಹಾಗೂ ಜೀವನ್ ಇತರರು ಇದ್ದರು.