ಖರೀದಿ ಕೇಂದ್ರ ಖಾಲಿ ಖಾಲಿ
ಕ.ಪ್ರ.ವಾರ್ತೆ ಹಾಸನ ಡಿ. 4
ಸರ್ಕಾರದ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ನಗರದ ಎಪಿಎಂಸಿ ಆವರಣದಲ್ಲಿ ಆರಂಭಿಸಿರುವ ಮೆಕ್ಕೆಜೋಳ ಖರೀದಿ ಕೇಂದ್ರದಲ್ಲಿ ರೈತರು ಬಾರದೇ ಕೇಂದ್ರ ಬಿಕೋ ಎನ್ನುತ್ತಿದೆ.
ರಾಜ್ಯ ಸಹಕಾರ ಮಾರಾಟ ಮಹಾ ಮಂಡಳಿವತಿಯಿಂದ ರೈತರ ಹಿತದೃಷ್ಟಿಯಿಂದ ಮೆಕ್ಕೆ ಜೋಳಕ್ಕೆ ಬೆಂಬಲ ಬೆಲೆ ನೀಡಿ ಖರೀದಿಸಲು ನಗರದ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ವ್ಯವಸ್ಥೆ ಕಲ್ಪಿಸಲಾಗಿದೆ. ಮೆಕ್ಕೆಜೋಳವನ್ನು ಬೆಂಬಲ ಬೆಲೆ ನೀಡಿ ರೈತರಿಂದ ನೇರವಾಗಿ ಖರೀದಿಸಲು ಏಜೆನ್ಸಿಗಳಿಗೆ ಜಿಲ್ಲಾಧಿಕಾರಿ ಸೂಚನೆ ನೀಡಿದ್ದಾರೆ. ಅದರಂತೆ ಡಿ.1 ರಿಂದ ಎಪಿಎಂಸಿಯಲ್ಲಿ ಮೆಕ್ಕೆಜೋಳ ಖರೀದಿ ಕೇಂದ್ರ ಪ್ರಾರಂಭವಾಗಿದ್ದರೂ ಈವರೆಗೂ ರೈತರು ಖರೀದಿ ಕೇಂದ್ರಕ್ಕೆ ಆಗಮಿಸಿ ಬೆಳೆದ ಜೋಳ ನೀಡಿಲ್ಲ. ಇದರಿಂದ ಖರೀದಿ ಕೇಂದ್ರದಲ್ಲಿ ವ್ಯವಹಾರ ಇಲ್ಲದೇ ಬಿಕೋ ಎನ್ನುತ್ತಿದೆ. ರೈತರಿಗೆ ಅನುಕೂಲವಾಗಲಿ ಎಂಬ ಹಿತದೃಷ್ಟಿಯಿಂದ ಖರೀದಿ ಕೇಂದ್ರ ಪ್ರಾರಂಭಿಸಿದ್ದರೆ ಅದರ ಸದುಪಯೋಗವನ್ನು ರೈತರು ಪಡೆದುಕೊಳ್ಳುತ್ತಿಲ್ಲ.
ಪ್ರಚಾರದ ಕೊರತೆ: ರೈತರಿಂದ ನೇರವಾಗಿ ಸರ್ಕಾರದ ಕನಿಷ್ಟ ಬೆಂಬಲ ಬೆಲೆ ನೀಡಿ ಮೆಕ್ಕೆ ಜೋಳ ಖರೀದಿಸುವ ಬಗ್ಗೆ ಇಲಾಖೆ ಸರಿಯಾಗಿ ಪ್ರಚಾರ ಮಾಡದ ಕಾರಣ ರೈತರಿಗೆ ಸರಿಯಾಗಿ ಮಾಹಿತಿ ಲಭ್ಯವಾಗಿಲ್ಲದ ಕಾರಣ ಮೆಕ್ಕೆಜೋಳ ನೀಡಲು ರೈತರು ಮುಂದೆ ಬಂದಿಲ್ಲ ಹಾಗೂ ಸರ್ಕಾರ ನಿಗಧಿ ಮಾಡಿರುವ ಕನಿಷ್ಟ ಬೆಂಬಲ ಬೆಲೆ ಕಡಿಮೆ ಇರುವುದರಿಂದ ರೈತರ ಬೆಳೆಗೆ ಸೂಕ್ತ ಬೆಲೆ ಇತರ ಕಾರಣ ಇದರತ್ತ ಸುಳಿಯುತ್ತಿಲ್ಲ. ಒಟ್ಟಿನಲ್ಲಿ ಸರ್ಕಾರ ತೆರೆದಿರುವ ಮೆಕ್ಕೆಚೋಳ ಖರೀದಿ ಕೇಂದ್ರಕ್ಕೆ ಈವರೆಗೂ ಒಬ್ಬ ರೈತನು ಬಂದು ಮೆಕ್ಕೆ ಜೋಳ ನೀಡಿಲ್ಲ.