ಜಮೀನಿಗೆ ಬದು ಹಾಕಿ ಮಳೆ ನೀರು ಉಳಿಸಿ
ಕ.ಪ್ರ.ವಾರ್ತೆ ಬೇಲೂರು ಡಿ. 4
ರೈತರು ತಮ್ಮ ಜಮೀನಿಗೆ ಸಂಪರ್ಕ ಬದುಗಳನ್ನು ನಿರ್ಮಿಸದೇ ಇರುವುದರಿಂದ ಮಳೆ ನೀರು ಕೆರೆ ಕಟ್ಟೆಗಳ ಪಾಲಾಗುತ್ತಿದೆ ಎಂದು ಹೊಳೆನರಸೀಪುರ ಕಾಡಾ ಪ್ರಭಾರ ಸಹಾಯಕ ಕೃಷಿ ನಿರ್ದೇಶಕ ಬಿ.ಎ.ರಾಮಮೂರ್ತಿ ತಿಳಿಸಿದರು.
ತಾಲೂಕಿನ ಈರಗುಪ್ಪೆ ಗ್ರಾಮದಲ್ಲಿ ಅಚ್ಚುಕಟ್ಟು ಅಭಿವೃದ್ಧಿ ಪ್ರಾಧಿಕಾರ ಕಾಡಾ, ಕಾವೇರಿ ಜಲಾನಯನ ಯೋಜನೆಗಳು ಮೈಸೂರು, ನೀರು ಬಳಕೆದಾರರ ಸಹಕಾರ ಸಂಘ ಈರಗುಪ್ಪೆ ಆಶ್ರಯದಲ್ಲಿ ನೀರು ಬಳಕೆದಾರರಿಗೆ ಏರ್ಪಡಿಸಿದ್ದ ಒಂದು ದಿನದ ತರಬೇತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕೊಳವೆ ಬಾವಿಯಲ್ಲಿನ ನೀರನ್ನು ಹೆಚ್ಚಾಗಿ ಬಳಕೆ ಮಾಡುವುದರಿಂದ ಭೂಮಿಯ ಸವಕಳಿಗೆ ಮೂಲವಾಗಿ ಇಳುವರಿ ಕುಂಠಿತವಾಗುತ್ತದೆ. ರೈತರು ತಮ್ಮ ಹೊಲ ಗದ್ದೆಗೆ ಸಂಪರ್ಕ ನೀರು ಉಳಿಸುವ ವ್ಯವಸ್ಥೆಯನ್ನು ಮೊದಲು ಕಲಿಯಬೇಕು ಎಂದು ತಿಳಿಸಿದರು.
ಕಾಡಾ ಪ್ರಾಧಿಕಾರ ಈ ನಿಟ್ಟಿನಲ್ಲಿ ನಾಲೆಗಳ ಅಭಿವೃದ್ಧಿ ಮತ್ತು ಇನ್ನಿತರ ರೈತರ ಯೋಜನೆಗಳನ್ನು ಕೈಗೊಂಡಿದೆ. ಈ ಬಳಕೆಯನ್ನು ಸಂಘವು ಸಂಪೂರ್ಣ ಉಪಯೋಗ ಮಾಡಿಕೊಳ್ಳಬೇಕು ಎಂದು ಸಂಘದ ಸದಸ್ಯರಿಗೆ ಕರೆ ನೀಡಿದರು. ತಾಲೂಕಿನ ಯಗಚಿ ಜಲನಯನ ಅಚ್ಚಕಟ್ಟು ಪ್ರದೇಶದ ನೀರು ಬಳಕೆಗೆ ಸುಮಾರು 70 ಲಕ್ಷ ರು. ಕ್ರಿಯಾಯೋಜನೆ ತಯಾರಿಸಲಾಗಿದೆ ಎಂದು ತಿಳಿಸಿದರು.
ಕಂದಲಿ ಕೆವಿಕೆ ಕೃಷಿ ವಿಜ್ಞಾನ ತರಬೇತಿ ಮುಖ್ಯಸ್ಥ ಡಾ. ಬಿ.ಎಸ್.ಬಸವರಾಜು ಮಾತನಾಡಿ, ಜಮೀನಿಗೆ ನೀರನ್ನು ಉತ್ತಮ ರೀತಿಯಲ್ಲಿ ಬಳಕೆ ಮಾಡುವ ಗುಣ ರೈತರಲ್ಲಿ ಬಂದಾಗ ಮಾತ್ರ ಬೆಳೆಗೆ ಕನಿಷ್ಠ ನೀರಿನ ಉಪಯೋಗ ವಾಗಲಿದೆ ಎಂದು ಅಭಿಪ್ರಾಯಪಟ್ಟರು.
ಮಣ್ಣಿನ ಫಲವತ್ತತೆಗೆ ನೀರಿನ ಬಳಕೆ ಮುಖ್ಯ ಇರುವಂತೆ ಸಮರ್ಪಕ ಗೋಬ್ಬರ ಮತ್ತು ಬೇಸಾಯ ಕ್ರಮದಿಂದ ರೈತರು ಉತ್ತಮ ಹಾಗೂ ಹೆಚ್ಚು ಇಳುವರಿ ಪಡೆಯಬಹುದು. ರೈತರು ಸಮಗ್ರ ಕೃಷಿ ಪದ್ಧತಿಯಲ್ಲಿ ತಮ್ಮ ಬೇಸಾಯದಲ್ಲಿ ಹಸಿರು ಎಲೆ ಗೊಬ್ಬರದ ಬಳಕೆಗೆ ಬೆಳೆಯ ಮಧ್ಯೆ ಮಿಶ್ರ ದ್ವಿದಳ ಬೆಳಗಳು ಮತ್ತು ಸೆಣಬಿನಂತಹ ಹಸಿರು ಬೆಳೆಗಳಿಗೆ ರೈತರು ಮಹತ್ವ ನೀಡಬೇಕು ಎಂದರು.
ಹೊಳರಸೀಪುರ ಕಾಡಾ ಸಹಾಯಕ ಕೃಷಿ ಅಧಿಕಾರಿ ಎಂ. ವೆಂಕಟಪ್ಪ ಮಾತನಾಡಿ, ಕಾಡಾ ಪ್ರಾಧಿಕಾರದಿಂದ ನೀರು ಬಳಕೆದಾರರಿಗೆ ನಾನಾ ಯೋಜನೆಗಳ ಲಾಭವಿದ್ದು, ರೈತರು ಈ ಸಂಘಕ್ಕೆ ಸದಸ್ಯರಾಗಬೇಕು. ಯಗಚಿ ನೀರಾವರಿ ಯೋಜನೆಯ ಅಚ್ಚಕಟ್ಟು ಪ್ರದೇಶದಲ್ಲಿನ ರೈತರಿಗೆ ಕೆರೆ ಕಟ್ಟೆಗಳ ನೀರಿನ ಸದ್ಬಳಕೆ ಬಗ್ಗೆ ಪ್ರಾತ್ಯಕ್ಷಿಕೆ ಮೂಲಕ ನೀರು ಉಳಿಸಿ, ಉತ್ತಮ ಇಳುವರಿ ಪಡೆಯುವ ಸಮಗ್ರ ಕೃಷಿ ಬಗ್ಗೆ ತಿಳಿವಳಿಕೆ ಮೂಡಿಸಲಾಗುತ್ತದೆ ಎಂದು ಹೇಳಿದರು. ಕೆ.ಎಸ್.ರಾಜಶೇಖರ್, ಹಿರಿಯ ನಿರೀಕ್ಷ ತಿಪ್ಪೇಸ್ವಾಮಿ, ಶಿವಕುಮಾರ್, ಇಲಾಯತ್ ಉಲ್ಲಾ, ಚಂದ್ರೇಗೌಡ, ಕಾರ್ಯದರ್ಶಿ ಶಿವಣ್ಣ, ಚಂದ್ರನಾಯಕ್ ಇನ್ನು ಇತರರು ಇದ್ದರು.