ಧೂಮಪಾನ ನಿಷೇಧ ಕಾಯಿದೆ ಕಾರ್ಯಾಗಾರ ಇಂದು
ಹಾಸನ: ರಾಜ್ಯ ತಂಬಾಕು ನಿಷೇಧ ಕೋಶ, ಬೆಂಗಳೂರು, ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯತ್, ಹಾಸನ, ಬ್ಲೂಮ್ಬರ್ಗ್ ಇನಿಷಿಯೇಟಿವ್ ಯೋಜನೆ, ಬೆಂಗಳೂರು, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಹಾಸನ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಕಚೇರಿ, ಹಾಸನ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಆಶ್ರಯದಲ್ಲಿ ಡಿ. 5ರಂದು ಬೆಳಗ್ಗೆ 9.30ಕ್ಕೆ ನಗರದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಸಭಾಂಗಣ, ಹಾಸನ ಇಲ್ಲಿ ಜಿಲ್ಲಾ ಮಟ್ಟದ ಧೂಮಪಾನ ನಿಷೇಧ ಕಾಯಿದೆ ಕಾರ್ಯಾಗಾರವನ್ನು ಏರ್ಪಡಿಸಲಾಗಿದೆ.
ಕಾರ್ಯಾಗಾರವನ್ನು ಜಿಲ್ಲಾ ಪ್ರಧಾನ ನ್ಯಾಯಾಧೀಶ ಜೆ.ಎಸ್.ಸೋಮಶೇಖರ್ ಉದ್ಘಾಟಿಸುವರು. ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ಅಂಬಿಕಾ ರಾಮಣ್ಣ ಅಧ್ಯಕ್ಷತೆ ವಹಿಸುವರು. ಹಾಸನ ವೈದ್ಯಕೀಯ ಕಾಲೇಜಿನ ಸಹ ಪ್ರಾಧ್ಯಾಪಕ ಡಾ. ಸಿ.ಎನ್. ಜಗದೀಶ್ಕಾರ್ಯಾಗಾರ ಕುರಿತು ಪ್ರಧಾನ ಉಪನ್ಯಾಸ ನೀಡುವರು.
ಪ್ರಧಾನ ಸಿವಿಲ್ ನ್ಯಾಯಾಧೀಶ ಮುಸ್ತಫ ಹುಸೇನ್, ಜಿಲ್ಲಾಧಿಕಾರಿ ವಿ.ಅನ್ಬುಕುಮಾರ್, ಜಿಪಂ ಮುಖ್ಯ ಕಾರ್ಯ ನಿರ್ವಾಹಣಾಧಿಕಾರಿ ಉಪೇಂದ್ರ ಪ್ರತಾಪ್ಸಿಂಗ್, ಜಿಲ್ಲಾ ಎಸ್ಪಿ ರವಿ ಚನ್ನಣ್ಣನವರ್, ಅಪರ ಜಿಲ್ಲಾಧಿಕಾರಿ ಡಾ. ಎಚ್.ಎನ್.ಗೋಪಾಲಕೃಷ್ಣ, ಡಾ.ಎನ್.ರಾಚೇಗೌಡ, ಡಾ.ಪಿ.ಜಗನ್ನಾಥ್ ಇತರರು ಭಾಗವಹಿಸುವರು.
ಬಿಡಾಡಿ ದನಗಳು ಗೋ ಶಾಲೆಗೆ
ಹಾಸನ: ನಗರದಲ್ಲಿ ಬಿಡಾಡಿ ದನಗಳ ಹಾವಳಿ ಹೆಚ್ಚಾಗಿದ್ದು ಜನನಿಬಿಡ ಪ್ರದೇಶಗಳು ಮತ್ತು ವಾಹನದಟ್ಟಣೆ ಹೆಚ್ಚಾಗಿರುವ ರಸ್ತೆಗಳಲ್ಲಿ ಅಡ್ಡಾದಿಡ್ಡಿ ಓಡಾಡುತ್ತಿರುವುದರಿಂದ ವಾಹನಗಳ ಸುಗಮ ಸಂಚಾರಕ್ಕೆ ತೊಂದರೆಯಾಗುತ್ತಿದ್ದು ಈ ಬಿಡಾಡಿ ದನಗಳಿಂದಾಗಿ ಹಲವಾರು ಅಪಘಾತಗಳೂ ಸಹ ಸಂಭವಿಸುತ್ತಿದೆ.
ನಗರಸಭೆ ವ್ಯಾಪ್ತಿಯಲ್ಲಿರುವ ಬಿಡಾಡಿ ದನಗಳನ್ನು ನಗರಸಭೆ ವತಿಯಿಂದ ಹಿಡಿಸಿ ದೂರದ ಗೋಶಾಲೆಗೆ ಬಿಡಲು ಕ್ರಮ ಕೈಗೊಳ್ಳಲಾಗುತ್ತಿರುವುದರಿಂದ ಪಾಲಕರು ತಮ್ಮ ದನಗಳನ್ನು ತಕ್ಷಣವೇ ತಮ್ಮ ಮನೆಗಳಲ್ಲಿ ಕಟ್ಟಿಹಾಕಿ ಕೊಳ್ಳಲು ತಿಳಿಸಲಾಗಿದೆ. ಮುಂದಿನ ಅಗುಹೋಗುಗಳಿಗೆ ನಗರಸಭೆಯು ಜವಾಬ್ದಾರಿಯಾಗುವುದಿಲ್ಲ ಎಂದು ನಗರಸಭೆ ಪೌರಾಯುಕ್ತ ವಿ.ಎಚ್.ಕೃಷ್ಣಮೂರ್ತಿ ಸೂಚಿಸಿದ್ದಾರೆ.
ರಾಮನಾಥಪುರದಲ್ಲಿ
ಲಕ್ಷ ದೀಪೋತ್ಸವ
ಅರಕಲಗೂಡು:ದಕ್ಷಿಣ ಕಾಶಿ ಎಂದೇ ಪ್ರಸಿದ್ಧವಾಗಿರುವ ಸಂಪುಟ ನರಸಿಂಹಸ್ವಾಮಿ ಸುಬ್ರಹ್ಮಣ್ಯ ಮಠದ ಶ್ರೀ ವಿದ್ಯಾ ಪ್ರಸನ್ನ ತೀರ್ಥರ ಅಡಳಿತಕ್ಕೆ ಸೇರಿದ ತಾಲೂಕಿನ ರಾಮನಾಥಪುರದ ಪ್ರಸನ್ನ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದಲ್ಲಿ ಸೋಮವಾರ ಸಂಜೆ ಲಕ್ಷದೀಪೋತ್ಸವ ನಡೆಯಿತು.
ಸುಬ್ರಹ್ಮಣ್ಯಸ್ವಾಮಿ ದೇವಸ್ಥಾನದ ಪಾರುಪತ್ತೇದಾರ ಸೀತಾರಾಮಾಚಾರ್ಯ ನೇತೃತ್ವದಲ್ಲಿ ಜರುಗಿತು. ರಾಮನಾಥಪುರ ಗಣಪತಿ ಯುವಕ ಸಂಘದ ವತಿಯಿಂದ ಇಲ್ಲಿಯ ಬಸವೇಶ್ವರ ವೃತ್ತದಲ್ಲಿರುವ ಪ್ರಸನ್ನ ಗಣಪತಿ ದೇವಸ್ಥಾನದ ಅವರಣದಲ್ಲಿ ಲಕ್ಷದೀಪೋತ್ಸವವು ನಡೆಯಿತು. ಲಕ್ಷದೀಪೋತ್ಸವ ನಂತರ ಚಲನಚಿತ್ರ ನಟ ಡಿಂಗ್ರಿ ನಾಗರಾಜು ತಂಡದವರಿಂದ ರಸಮಂಜರಿ ಕಾರ್ಯಕ್ರಮ ನಡೆಯಿತು.
ಬಾಲಕಿ ಮೇಲೆ ಪೂಜಾರಿ ಅತ್ಯಾಚಾರ
ಹಾಸನ: ಅಪ್ರಾಪ್ತ ಬಾಲಕಿಯ ಮೇಲೆ ಪೂಜಾರಿಯೊಬ್ಬ ಅತ್ಯಾಚಾರ ಎಸಗಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ತಾಲೂಕಿನ ಆನಗಳಲೆ ಚಂದ್ರ (35) ಎಂಬಾತ ಅತ್ಯಾಚಾರ ಎಸಗಿದ ಆರೋಪಿ. ತನ್ನ ಮನೆಯಲ್ಲೇ 9ನೇ ತರಗತಿ ವ್ಯಾಸಂಗ ಮಾಡುತ್ತಿದ್ದ ಅಕ್ಕನ ಮಗಳನ್ನು ಎರಡು ತಿಂಗಳ ಹಿಂದೆ ಕಾಫಿ ತೋಟಕ್ಕೆ ಕರೆದುಕೊಂಡು ಹೋಗಿ ಅತ್ಯಾಚಾರ ಎಸಗಿದ್ದ. ಆಕೆಯನ್ನು ನೋಡಲು ಆನಗಳಲೆ ಗ್ರಾಮಕ್ಕೆ ಬಂದ ಆಕೆಯ ತಾಯಿಗೆ ಬಾಲಕಿ ವಿಷಯ ತಿಳಿಸಿದ ನಂತರ, ಬಾಲಕಿಯ ಅಣ್ಣ ಆಲೂರು ಠಾಣೆಗೆ ದೂರು ನೀಡಿದ್ದರು. ಈ ಸಂಬಂಧ ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಒಪ್ಪಿಸಿದ್ದಾರೆ. ಆರೋಪಿ ಗ್ರಾಮದಲ್ಲಿ ಅಣ್ಣಮ್ಮಸ್ವಾಮಿ ದೇವಾಲಯದ ಪೂಜಾರಿ ಎಂದು ತಿಳಿದು ಬಂದಿದೆ.