ಪೂಜೆಗೆ ಬಂದ ದಲಿತನಿಗೆ ಥಳಿತ
ಕ.ಪ್ರ.ವಾರ್ತೆ ಹೊಳೆನರಸೀಪುರ ಡಿ. 4
ಕಾರ್ತೀಕ ಮಾಸದ ವಿಶೇಷ ಪೂಜೆಗೆಂದು ದೇವಸ್ಥಾನಕ್ಕೆ ಬಂದಿದ್ದ ಭೈರಾಜು ಎಂಬ ದಲಿತ ಯುವಕನಿಗೆ ಗ್ರಾಮಸ್ಥರು ಥಳಿಸಿದ ಘಟನೆ ವರದಿಯಾಗಿದೆ. ತಾಲೂಕಿನ ಕೆರಗೋಡು ಮುದ್ದೇನಹಳ್ಳಿ ಗ್ರಾಮದ ವೀರೇಶ್ವರ ದೇವಸ್ಥಾನಕ್ಕೆ ಸೋಮವಾರ ರಾತ್ರಿ ದಲಿತ ಯುವಕ ಭೈರಾಜು ಪೂಜೆಗೆಂದು ತೆರಳಿದ್ದ ವೇಳೆ ದೇವಸ್ಥಾನದ ಒಳಗೆ ಹೋದ ಕಾರಣ ಅಲ್ಲಿನ ಕೆಲ ಸವರ್ಣೀಯ ಯುವಕರು ಏಕಾಏಕಿ ಭೈರಾಜುನನ್ನು ನೆಲಕ್ಕೆ ಹಾಕಿ ತುಳಿದು ಹಲ್ಲೆ ಮಾಡಿದ್ದಾರೆ. ಆತನ ಕಡೆಯವರು ಎಷ್ಟೇ ಕೇಳಿಕೊಂಡರೂ ಬಿಡದೇ ನಿಂದಿಸಿ ಈ ಕೃತ್ಯ ವೆಸಗಿದ್ದಾರೆ. ಗಾಯಾಳು ಭೈರಾಜು ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಗ್ರಾಮಾಂತರ ಪೊಲೀಲಿಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.