ರೈತರ ಆಕ್ರೋಶ; ಅಧಿಕಾರಿಗಳಿಗೆ ದಿಗ್ಬಂಧನ
ಕ.ಪ್ರ.ವಾರ್ತೆ ಆಲೂರು ಡಿ. 4
ತಾಲೂಕಿನ ಕೆ.ಹೊಸಕೋಟೆ ಹೋಬಳಿಯ ಮಾದಿಹಳ್ಳಿ ಗ್ರಾಮದಲ್ಲಿ ಮಂಗಳವಾರ ರಾತ್ರಿ ಕಾಡಾನೆಗಳು ಲಕ್ಷಾಂತರ ಮೌಲ್ಯದ ಬೆಳೆ ನಾಶಗೊಳಿಸಿವೆ. ಇದರಿಂದ ರೊಚ್ಚಿಗೆದ್ದ ಗ್ರಾಮಸ್ಥರು ಬುಧವಾರ ಸ್ಥಳ ಪರಿಶೀಲಿಸಲು ಬಂದ ಅರಣ್ಯ ಇಲಾಖೆಯ ನೌಕರರಿಗೆ ಘೇರಾವ್ ಹಾಕಿದರಲ್ಲದೇ ದಿಗ್ಭಂಧನ ವಿಧಿಸಿ ಪ್ರತಿಭಟನೆ ನಡೆಸಿದರು.
ಮಂಗಳವಾರ ದೊಡ್ಡಬೆಟ್ಟ ಅರಣ್ಯ ಪ್ರದೇಶದಲ್ಲಿ ಬೀಡು ಬಿಟ್ಟಿದ್ದ 15 ಆನೆಗಳ ಹಿಂಡು ರಾತ್ರಿ ಗ್ರಾಮಕ್ಕೆ ನುಗ್ಗಿ ಚಂದ್ರೇಗೌಡ, ಪ್ರಸನ್ನ, ರಿತೇಶ್ಗೌಡ, ಗಂಗಾಧರ್, ಪಿ.ಜಿ.ಚಂದ್ರಶೇಖರ್, ಪುಟ್ಟೆಗೌಡ, ಬೋರೇಗೌಡ ಎಂಬುವವರ ಗದ್ದೆಗೆ ನುಗ್ಗಿದ ಕಾಡಾನೆಗಳು ಗದ್ದೆಯನ್ನು ಸಂಪೂರ್ಣ ನಾಶ ಗೊಳಿಸಿವೆ. ನಂತರ ಅದೇ ಗ್ರಾಮದ ಕಾಂತರಾಜು ಎಂಬುವರ ಕಾಫಿ ತೋಟಕ್ಕೆ ನುಗ್ಗಿ ಕಾಫಿ ಬೆಳೆಯನ್ನು ಹಾಳುಗೆಡೆವಿ ಪಕ್ಕದ ಲೋಕೇಶ್ ಎಂಬುವರ ತೋಟದಲ್ಲಿ ಬೆಳೆದಿದ್ದ 50 ಕಿತ್ತಲೆ ಗಿಡಗಳನ್ನು ಮುರಿದು ನಾಶ ಗೊಳಿಸಿವೆ.
ಕಳೆದ 5 ದಿನಗಳಿಂದಲೂ ದೊಟ್ಟಬೆಟ್ಟ ಅರಣ್ಯ ಪ್ರದೇಶದಲ್ಲಿ ಬೀಡು ಬಿಟ್ಟಿರುವ ಆನೆಗಳು ಪ್ರತಿ ದಿನ ರಾತ್ರಿ ಮಾದಿಹಳ್ಳಿ ಗ್ರಾಮಕ್ಕೆ ನುಗ್ಗಿ ಅಪಾರ ಪ್ರಮಾಣದ ಬೆಳೆಯನ್ನು ನಾಶಗೊಳಿಸುತ್ತಿದ್ದು ಈ ಸಂಬಂಧವಾಗಿ ಅರಣ್ಯ ಇಲಾಖೆಯ ಆರ್ ಎಫ್ ಓ ರವರಿಗೆ ದೂರು ನೀಡಲಾಗಿತ್ತು. ಅವರಾಗಲಿ ಅಥವಾ ಇಲಾಖೆಯ ಸಿಬ್ಬಂದಿ ಅತ್ತ ಸುಳಿಯದೆ ಬೇಜಾವ್ದಾರಿತನ ಪ್ರದರ್ಶಿಸಿದರು.
ಬುಧವಾರ ಸ್ಥಳಕ್ಕೆ ಬಂದ ಫಾರೆಸ್ಟರ್ ಪ್ರದೀಪ್, ಗಾರ್ಡ್ ಜಯಪಾಲ್, ಕಾಳಿಂಗಪ್ಪರವರನ್ನು ಗ್ರಾಮಸ್ಥರು ಎಳೆದುಕೊಂಡು ಹೋಗಿ ಗ್ರಾಮದಲ್ಲಿ ಬಂಧನದಲ್ಲಿ ಇರಿಸಿದರು. ಒಂದು ಹಂತದಲ್ಲಿ ಅವರ ವಾಹನಗಳಿಗೆ ಬೆಂಕಿ ಹಚ್ಚುವ ಮಟ್ಟಕ್ಕೆ ಕುಪಿತರಾಗಿದ್ದ ಗ್ರಾಮಸ್ಥರನ್ನು ಕರ್ನಾಟಕ ಸಮರ ಸೇನೆಯ ಅಧ್ಯಕ್ಷ ರತೀಶ್ಗೌಡ ಕಾರ್ಯದರ್ಶಿ ಸಂತೋಷ್ ಸಮಾಧಾನ ಪಡಿಸಿ ಯಾವುದೇ ಅನಾಹುತ ಆಗದಂತೆ ನೋಡಿ ಕೊಂಡರು.
ದಿನದಿನಕ್ಕೆ ಆನೆಗಳ ದಾಳಿ ಹೆಚ್ಚಳ: ಆನಂತರ ಮಾತನಾಡಿದ ಪ್ರತಿಭಟನಾನಿರತ ಗ್ರಾಮಸ್ಥರು ಕಳೆದ ಒಂದು ವಾರದಿಂದ ಕಾಡಾನೆಗಳು ದಾಳಿ ನಡೆಸಿ ಬೆಳೆದ ಬೆಳೆಗಳೆನ್ನೆಲ್ಲ ನಾಶಗೊಳಿಸಿವೆ. ದಿನ ದಿನಕ್ಕೆ ಆನೆಗಳ ದಾಳಿ ವಿಪರೀತಗೊಳ್ಳುತ್ತಿದ್ದರೂ, ಅರಣ್ಯ ಇಲಾಖೆಯವರು ಸ್ಥಳಕ್ಕೆ ಬಂದು ಪರಿಶಿಲಿಸಿ ಪರಿಹಾರ ನೀಡಲು ಕ್ರಮಕೈಗೊಳ್ಳದೆ ತಮಗೆ ಸಂಬಂಧವಿಲ್ಲದವರಂತೆ ಆರಾಮವಾಗಿದ್ದಾರೆ. ಸುತ್ತ ಮುತ್ತಲ ಪ್ರದೇಶದಲ್ಲಿ ಪ್ರತಿದಿನ ಆನೆಗಳು ಬೆಳೆಹಾನಿ ಮಾಡುತ್ತಿದ್ದು, ಅರಣ್ಯ ಇಲಾಖೆಯವರು ಆನೆ ಹಾವಳಿ ತಡೆಯುವುದನ್ನು ಬಿಟ್ಟು ಬೇಜಾವ್ದಾರಿತನ ಪ್ರದರ್ಶಿಸುತ್ತಿದ್ದು, ನಾಮಕಾವಸ್ತಗೆ ಇಂದು ಗ್ರಾಮಕ್ಕೆ ಅರಣ್ಯ ಇಲಾಖೆಯ ಫಾರೆಸ್ಟ್ರ್ ಹಾಗೂ ಗಾರ್ಡ್ಗಳನ್ನು ಕಳುಹಿಸಿದ್ದಾರೆ. ಅವರು ಸಹ ಗ್ರಾಮಸ್ಥರೊಂದಿಗೆ ಉಡಾಫೆಯಿಂದ ವರ್ತಿಸಿದ್ದು, ಇದರಿಂದಾಗಿ ಅವರನ್ನು ಬಂಧನದಲ್ಲಿ ಇರಿಸಿದ್ದೇವೆ ಎಂದು ತಿಳಿಸಿದರು.
ಪ್ರತಿ ದಿನ ಆನೆಗಳನ್ನು ರಾತ್ರಿ ಇಡೀ ಕಾವಲಿದ್ದು ಕಾಯಬೇಕಾದ ಪರಿಸ್ಥಿತಿ ಇದ್ದು ನಾವು ಗದ್ದೆಗಳಲ್ಲಿ ಗುಡಿಸಲು ನಿರ್ಮಿಸಿಕೊಂಡು ಕಾಯಬೇಕಾದ ಪರಿಸ್ಥಿತಿ ಎದುರಾಗಿದೆ. ಜವಾಬ್ದಾರಿ ವಹಿಸಿಬೇಕಾಗಿದ್ದ ಅರಣ್ಯ ಇಲಾಖೆಯವರು ಮನೆಯಲ್ಲಿ ಆರಾಮವಾಗಿದ್ದು, ನಾವುಗಳು ರಾತ್ರಿ ಇಡಿ ಚಳಿ-ಮಳೆಯನ್ನದೆ, ಆನೆಗಳು ಗದ್ದೆಗಳಿಗೆ ನುಗ್ಗದಂತೆ ಕಾವಲು ಕಾಯುತ್ತಿದ್ದೇವೆ. ಇಲಾಖೆಯವರು ಕನಿಷ್ಠ ಸಿಡಿ ಮದ್ದುಗಳನ್ನು ಕೇಳಿದರೂ ಸಹ ನೀಡದೆ ಸತಾಯಿಸುತ್ತಿದ್ದಾರೆ ಎಂದು ದೂರಿದರು.
ಸರ್ಕಾರ ಕೇವಲ ಒಂದೇ ಒಂದು ಆನೆಯನ್ನು ಹಿಡಿಯಲು ಅನುಮತಿ ನೀಡಿರುವುದು ಯಾರಿಗೇ ಪ್ರಯೋಜನವಾಗುತ್ತದೆ ಎಂದು ಪ್ರಶ್ನಿಸಿದ ಅವರು ಶೀಘ್ರ ಎಲ್ಲಾ ಆನೆಗಳನ್ನು ಹಿಡಿದು ಸ್ಥಳಾಂತರಸದಿದ್ದರೆ, ಪ್ರತಿ ದಿನವೂ ಅರಣ್ಯ ಇಲಾಖೆಯವರನ್ನು ಇದೆ ರೀತಿ ಬಂಧಿಸುವುದಾಗಿ ಎಚ್ಚರಿಸಿದರು.
ಆರ್ಎಫ್ಓ ಮನವೊಲಿಕೆ: ಸಂಜೆಯ ವೇಳೆಗೆ ಸ್ಥಳಕ್ಕೆ ಆಗಮಿಸಿದ ಆರ್ಎಫ್ಓ ದೇವರಾಜ್ ಗ್ರಾಮಸ್ಥರ ಮನವೊಲಿಸಿ ಅರಣ್ಯ ಇಲಾಖೆ ಸಿಬ್ಬಂದಿಯೊಂದಿಗೆ ದೊಡ್ಡಬೆಟ್ಟ ಅರಣ್ಯ ಪ್ರದೇಶದಲ್ಲಿ ಬೀಡುಬಿಟ್ಟಿದ್ದ ಕಾಡಾನೆಗಳನ್ನು ಹೇಮಾವತಿ ಹಿನ್ನೀರಿನ ಆಚೆಗೆ ಓಡಿಸುವುದಾಗಿ ಭರವಸೆ ನೀಡಿದಾಗ, ಗ್ರಾಮಸ್ಥರು ಬಂಧನದಲ್ಲಿರಿಸಿದ್ದ ಅರಣ್ಯ ಇಲಾಖೆಯ ಸಿಬ್ಬಂದಿಗಳನ್ನು ಬಿಡುಗಡೆಗೊಳಿಸಿ ಪ್ರತಿಭಟನೆ ಹಿಂಪಡೆದರು.