ವರ್ತಮಾನದ ಬಗ್ಗೆ ಚಿಂತಿಸಿದಾಗ ಜೀವನ ಹಸನು
ಹಾರನಹಳ್ಳಿ (ಅರಸೀಕೆರೆ ತಾ.): ಮನುಷ್ಯ ಮಾನವೀಯತೆ ಮರೆಯಬಾರದು. ಮನಸ್ಸಿನ ದುಗುಡ ಕಡಿಮೆ ಮಾಡಿಕೊಳ್ಳಬೇಕು. ನಾವು ಕಳೆದು ಹೋದ ಭೂತ ಕಾಲ ಹಾಗೂ ಭವಿಷ್ಯದ ಬಗ್ಗೆ ಚಿಂತಿಸುವುದನ್ನು ಬಿಟ್ಟು ವರ್ತಮಾನದ ಬಗ್ಗೆ ಚಿಂತಿಸಿದಾಗ ಜೀವನ ಹಸನಾಗಲು ಸಾಧ್ಯ ಎಂದು ಮಾಜಿ ಅಡ್ವೋಕೇಟ್ ಜನರಲ್ ಹಾಗೂ ಲೋಕ ಶಿಕ್ಷಣ ಟ್ರಸ್ಟ್ ಅಧ್ಯಕ್ಷ ಅಶೋಕ್ ಹಾರನಹಳ್ಳಿ ಅಭಿಪ್ರಾಯಪಟ್ಟರು.
ಹಾರನಹಳ್ಳಿ ಗ್ರಾಮ ದೇವತೆ ಕೋಡಮ್ಮ ದೇವಾಲಯದಲ್ಲಿ ನಡೆದ ಚಂಡಿಕಾ ಹೋಮ ಹಾಗೂ ಧಾರ್ಮಿಕ ಕಾರ್ಯಕ್ರಮದ ನಂತರ ಹಾರನಹಳ್ಳಿ ಕೋಡಮ್ಮದೇವಿ ಸಮುದಾಯ ಭವನದಲ್ಲಿ ನಡೆದ ಸತ್ಸಂಗ ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಸಮಾಜದಲ್ಲಿ ನಡೆಯುವ ಕ್ರೌರ್ಯ, ದುರಾಡಳಿತ, ಅತ್ಯಾಚಾರಗಳ ಬಗ್ಗೆಯೇ ಮಾಧ್ಯಮಗಳು ಹೆಚ್ಚು ವೈಭವೀಕರಿಸುತ್ತಿರುವುದರ ಬಗ್ಗೆ ವಿಷಾದಿಸಿ ಇಂದು ವಿಷಯಗಳ ಆಕ್ರಮಣವಾಗುತ್ತಿದೆ. ನಾವು ನಡೆಯುವ ದಾರಿಯ ಬಗ್ಗೆ ಚಿಂತಿಸುತ್ತಿಲ್ಲ, ಇಂತಹ ಸುಳಿಯಲ್ಲಿ ನಾವು ಸಿಲುಕಿದ್ದೇವೆ ಸತ್ಸಂಗ ಎಂದರೆ ಒಳ್ಳೆಯ ಮಾತುಗಳ ವಿನಿಮಯ ಎಂದು ವಿಶ್ಲೇಷಿಸಿದರು.
ಸಾನಿಧ್ಯ ವಹಿಸಿದ್ದ ತುಮಕೂರು ಹಿರೇಮಠದ ಡಾ.ಶಿವಾನಂದ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಅಧ್ಯಾತ್ಮ ಬೇಕಾಗಿರುವುದು ಯೌವನದಲ್ಲಿ, ವೃದ್ಧಾಪ್ಯದಲ್ಲಲ್ಲ. ಮನುಷ್ಯರ ಬದುಕಿನ ಅವಧಿ ಕಡಿಮೆ ಇದೆ. ಆದ್ದರಿಂದ ನಾವು ಸಾಧಿಸಬೇಕಾದುದ್ದನ್ನು ಬೇಗನೆ ಸಾಧಿಸಬೇಕು ಎಂದು ಹೇಳಿದರು.
ಸಂಕಲ್ಪ ಶಕ್ತಿ ಬಹಳ ಮುಖ್ಯ ಒಳ್ಳೆಯ ಕೆಲಸ ಮಾಡುವುದನ್ನು ಮುಂದೆ ಹಾಕದೆ ಬೇಗ ಮಾಡಿ. ಕೆಟ್ಟದನ್ನು ತಕ್ಷಣ ಮಾಡದೆ ಆಲೋಚಿಸಿ ಮಾಡಿ ಇದನ್ನ ಜೀವನದಲ್ಲಿ ಅಳವಡಿಸಿಕೊಂಡರೆ ಬದುಕು ಸಾರ್ಥಕ ಎಂದರು.
ಭರಮಸಾಗರದ ಬ್ರಹ್ಮಾನಂದ ಗುರೂಜಿ ಮಾತನಾಡಿ, ಭಾರತ ದೇಶದಲ್ಲಿ ಧರ್ಮಕ್ಕೆ ಹೆಚ್ಚಿನ ಪ್ರಾಧಾನ್ಯತೆ ಇದೆ. ನಾವು ಧರ್ಮವನ್ನು ಮರೆತು ಹೃದಯ ಭಾವನೆಗಳಿಂದ ಕುಗ್ಗುತ್ತಿದ್ದೇವೆ. ವಿಶಾಲ ದೃಷ್ಟಿಕೋನವನ್ನು ಜೀವನದಲ್ಲಿ ಅಳವಡಿಸಿಕೊಂಡು ಸನ್ಮಾರ್ಗದಲ್ಲಿ ನಡೆಯಬೇಕು. ಹಾರನಹಳ್ಳಿ ಭಾವೈಕ್ಯತೆಯ ಸಂಗಮ ಕೇಂದ್ರ ಎಂದು ನುಡಿದರು.
ಕಿರುತೆರೆಯ ಹಿರಿಯ ಕಲಾವಿದ ಹಾರನಹಳ್ಳಿ ಹಿರಿಯಣ್ಣ ಮಾತನಾಡಿ, ಧರ್ಮ ದೇವರ ಬಗ್ಗೆ ಯೇ ಇಂದು ಜಿಜ್ಞಾಸೆ ಇದೆ. ನನ್ನ ದೃಷ್ಟಿಯಲ್ಲಿ ಕಷ್ಟದಲ್ಲಿರುವವರನ್ನ, ಕೆಳಗೆ ಬಿದ್ದವರನ್ನು, ಧ್ವನಿಯಿಲ್ಲದವರನ್ನ ಮೇಲೆತ್ತುವುದೇ ಧರ್ಮ ಎಂದು ವಿಶ್ಲೇಷಿಸಿದರು.
ಪತ್ರಕರ್ತ ಹುಣಸವಾಡಿ ರಾಜನ್, ವಕೀಲ ವಿಜಯಭಾಸ್ಕರ ರೆಡ್ಡಿ ಮಾತನಾಡಿದರು.
ಲೋಕ ಶಿಕ್ಷಣ ಟ್ರಸ್ಟಿನ ಮಾಜಿ ಕಾರ್ಯದರ್ಶಿ ಎಚ್.ಎಸ್.ನಾರಾಯಣಮೂರ್ತಿ ಮಾತನಾಡಿ, ಹಾರನಹಳ್ಳಿ ಒಂದು ಭಾವೈಕ್ಯತೆಯ ಕೇಂದ್ರ. ಇಲ್ಲಿ ಪ್ರತಿ ವರ್ಷ ಲೋಕ ಕಲ್ಯಾಣಾರ್ಥ ಚಂಡಿಕಾ ಹೋಮ ನಡೆಯುತ್ತಿದ್ದು, ಸತ್ಸಂಗದ ಮೂಲಕ ಸಮಾಜ ಪರಿವರ್ತನೆಯ ಕಾರ್ಯ ನಡೆಯುತ್ತಿದೆ ಎಂದು ಹೇಳಿದರು.
ಸುಮಾ ರವಿಶಂಕರ್ ಪ್ರಾರ್ಥಿಸಿದರು. ಎನ್.ಮಂಜುನಾಥ್ ಸ್ವಾಗತಿಸಿದರು. ಪತ್ರಕರ್ತ ಬಿ.ಎಸ್.ಸೇತುರಾಂ ನಿರೂಪಿಸಿದರು.