ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಶೇ. 60 ಯೋಜನೆ ಜಾರಿಗೆ ತರುವಲ್ಲಿ ಯಶಸ್ವಿ: ಶೇಷೇಗೌಡ

Rashmi Kasaragodu
Updated On : 5 Dec 2013, 12:57 pm

ಕನ್ನಡಪ್ರಭ ವಾರ್ತೆ, ಹಾಸನ, ಡಿ. 4
ಸರ್ಕಾರ ಅಧಿಕಾರಕ್ಕೆ ಬಂದು 6 ತಿಂಗಳಲ್ಲಿ ಭರವಸೆ ನೀಡಿದ್ದ ಯೋಜನೆಗಳ ಪೈಕಿ ಶೇ. 60ರಷ್ಟು ಯೋಜನೆಗಳನ್ನು ಜಾರಿಗೆ ತರುವಲ್ಲಿ ಯಶಸ್ವಿಯಾಗಿದೆ ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಪ್ರಧಾನ ಕಾರ್ಯದರ್ಶಿ ಎಂ.ಕೆ. ಶೇಷೇಗೌಡ ಹೇಳಿದ್ದಾರೆ.
 ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸರ್ಕಾರದ 6 ತಿಂಗಳ ಅಧಿಕಾರವಧಿಯಲ್ಲಿ ಬಡವರು, ರೈತರು ಹಾಗೂ ಶೋಷಿತರ ಪರ ಅನೇಕ ಜನಪರ ಕಾರ್ಯಕ್ರಮಗಳನ್ನು ಜಾರಿಗೆ ತಂದಿದೆ. ಬಡ ಜನರ ಮನೆ ಬಾಗಿಲಿಗೆ ಜನಪ್ರಿಯ ಕಾರ್ಯಕ್ರಮದ ಸವಲತ್ತುಗಳು ತಲುಪುತ್ತಿವೆ. ಇದರಿಂದ ಜನ ಸಾಮಾನ್ಯರ ಬದುಕಿನಲ್ಲಿ ಬದಲಾವಣೆ ಕಾಣುತ್ತಿದೆ ಎಂದು ಹೇಳಿದರು.
 ವಿರೋಧ ಪಕ್ಷಗಳು ಇದನ್ನು ಸಹಿಸದೆ ಕಬ್ಬು ಬೆಳೆಗಾರರ ಹೋರಾಟವನ್ನು ಹೈಜಾಕ್ ಮಾಡಿ ತನ್ನ ರಾಜಕೀಯ ತೆವಲು ತೀರಿಸಿಕೊಳ್ಳುತ್ತಿವೆ. ಬಡ ರೈತ ಕುಟುಂಬದಿಂದ ಬಂದಿರುವ ಮುಖ್ಯಮಂತ್ರಿ ಸಿದ್ದರಾಮಯ್ಯನವರು ರೈತರ ನೋವು- ನಲಿವುಗಳನ್ನು ಚೆನ್ನಾಗಿ ಬಲ್ಲವರಾಗಿದ್ದಾರೆ. ಯಾವುದೇ ಸಂದರ್ಭದಲ್ಲೂ ರೈತರಿಗೆ ತೊಂದರೆಯಾಗಲು ಸರ್ಕಾರ ಬಿಡುವುದಿಲ್ಲ. ಆದ್ದರಿಂದ ಬಜೆಟಟ್ನಲ್ಲಿ ಕೃಷಿ ಬೆಲೆ ಆಯೋಗ ರಚಿಸಲು ತೀರ್ಮಾನಿಸಲಾಗಿದೆ.
 ಇವೆಲ್ಲ ಕಾರ್ಯರೂಪಕ್ಕೆ ಬಂದಲ್ಲಿ ರೈತರ ಸರ್ವಾಂಗಿಣ ಅಭಿವೃದ್ಧಿ ಸಾಧ್ಯವಾಗುತ್ತದೆ. ಇದು ಗೊತ್ತಿದ್ದರು ಕೆಲವು ಕಿಡಿಗೇಡಿಗಳು ರೈತರ ಹೆಸರಿನಲ್ಲಿ ಸರ್ಕಾರಕ್ಕೆ ಮಸಿ ಬಳಿಯುವ ಪ್ರಯತ್ನ ಮಾಡುತ್ತಿವೆ. ಈ ಕೃತ್ಯವನ್ನು ಎಸಗುತ್ತಿರುವ ಬಗ್ಗೆ ಸರ್ಕಾರ ಹಾಗೂ ಪಕ್ಷಕ್ಕೆ ಗೊತ್ತಿದ್ದು, ಎಲ್ಲದಕ್ಕೂ ಸಮಯ ಬಂದಾಗ ಅಂತವರ ವಿರುದ್ಧ ತಕ್ಕ ಪಾಠ ಕಲಿಸಲಾಗುತ್ತದೆ ಎಂದು ಹೇಳಿದರು.
 2006ರಿಂದ 12ರವರೆಗೆ ಸುಮಾರು 300ಕ್ಕೂ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಒಟ್ಟಾರೆಯಿಂಗ ರೈತರಿಗೆ ಸಂಕಷ್ಟಕ್ಕೆ ಪರಿಹಾರವಾಗಿ ಸುಮಾರು 300 ಕೋಟಿ ರು.ಗಳು ಜಿಲ್ಲೆಗೆ ಬಂದಿದ್ದು, ಈ ಪೈಕಿ 200 ಕೋಟಿ ರು.ಗಳನ್ನು ಶಾಸಕ ಎಚ್.ಡಿ.ರೇವಣ್ಣ ಅವರು ಡೈರಿ ಹಾಗೂ ಮತ್ತಿತ್ತರೆ ಕೆಲಸ ಕಾರ್ಯಗಳಿಗೆ ಬಳಸಿಕೊಂಡಿದ್ದಾರೆ. ಜೊತೆಗೆ ವಿದರ್ಭ ಯೋಜನೆಯಡಿಯಲ್ಲಿ ಕೇಂದ್ರ ಸರ್ಕಾರ ರಾಜ್ಯಕ್ಕೆ 3600 ಕೋಟಿ ರು.ಗಳನ್ನು ನೀಡಿದೆ. ಆ ಹಣವನ್ನು ಅಡಳಿತ ನಡೆಸುತ್ತಿದ್ದಂತಹ ಸರ್ಕಾರಗಳು ತಿಂದು ತೇಗಿದ್ದಾವೆ ಎಂದರು.
ಅಯೋಗ್ಯರು: ಕೋಡಿಮಠದ ಸ್ವಾಮೀಜಿ ಬುರುಡೆ ಸ್ವಾಮೀಜಿ ಆಗಿದ್ದು, ಅವರು ಹೇಳುವುದೆಲ್ಲ ನಿಜವಲ್ಲ. ಅಂತಹ ಸ್ವಾಮೀಜಿ ಬಳಿ ಹೋಗುವಂತಹ ರಾಜಕಾರಣಿಗಳು ಆಯೋಗ್ಯರು ಎಂದು ಟೀಕಿಸಿದರು.
 ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪಂಚಾಂಗ ನೋಡಿ ಸರ್ಕಾರವನ್ನು ರಚಿಸಲು ಸಾಧ್ಯವಿಲ್ಲ. ಅವರ ಪಂಚಾಂಗದಿಂದ ಕಾಂಗ್ರೆಸ್ಸ್ರ್ಕಾರ ಅಧಿಕಾರಿ ಕಳೆದುಕೊಳ್ಳುವುದಿಲ್ಲ. ಅದನ್ನು ಸಮಾಜದ ಜನ ತೀರ್ಮಾನ ಮಾಡಬೇಕು ಎಂದ ಅವರು, ಕೋಡಿಮಠದ ಸ್ವಾಮಿಗಳು ಹೇಳುವುದೆಲ್ಲ ಬುರುಡೆಯಾಗಿದೆ. ಅಲ್ಲಿಗೆ ಹೋಗುವಂತಹ ಎಲ್ಲಾ ರಾಜಕಾರಣಿಗಳು ಯೋಗ್ಯರಲ್ಲ ಎಂದರು.
 ಈ ಸಂದರ್ಭದಲ್ಲಿ ಕೆಪಿಸಿಸಿ ಸದಸ್ಯ ವಿನಯ್ ಗಾಂಧಿ, ರಮೇಶ್, ಬಾಬು ಹಾಗೂ ಇತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement