ಶೇಷೇಗೌಡ, ವಿನಯಗಾಂಧಿ ವಿರುದ್ಧ ಕ್ರಮಕ್ಕೆ ಆಗ್ರಹ
ಕ.ಪ್ರ.ವಾರ್ತೆ ಹಾಸನ ಡಿ. 4
ಪಕ್ಷ ವಿರೋಧಿ ಚಟುವಟಿಕೆ ಮಾಡುತ್ತಿರುವ ವಿನಯಗಾಂಧೀ ಹಾಗೂ ಎಂ.ಕೆ ಶೇಷೇಗೌಡರ ವಿರುದ್ಧ ಕ್ರಮಕೈಗೊಳ್ಳುವಂತೆ ಒತ್ತಾಯಿಸಿ ಹೈಕಮಾಂಡ್ಗೆ ದೂರು ನೀಡಲು ಜಿಲ್ಲಾ ಕಾಂಗ್ರೆಸ್ ಕಾರ್ಮಿಕ ಘಟಕದ ಕಾರ್ಯಕರ್ತರು ಮುಂದಾಗಿದ್ದಾರೆ.
ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ಕಾರ್ಮಿಕ ಘಟಕದ ರಾಜ್ಯ ಕಾರ್ಯದರ್ಶಿ ತಾರಾ ಚಂದನ್ ಮಾತನಾಡಿ, ವಿನಯಗಾಂಧೀ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಸಿ.ಮಹದೇವಪ್ಪನವರು ಜಿಲ್ಲೆಯ ರಸ್ತೆಗಳನ್ನು ಹಾಗೂ ಇತರೆ ಸಮಸ್ಯೆಗಳನ್ನು ನಿರ್ವಹಿಸದ ಕಾರಣ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದ್ದಾರೆ. ಇದರಿಂದ ಪಕ್ಷದ ಕಾರ್ಯಕರ್ತರದಲ್ಲಿ ಬಹಳ ಆಘಾತ ಉಂಟಾಗಿದೆ. ವಿನಯಗಾಂಧೀ ಸಲ್ಲದ ಮಾತುಗಳಿಂದ ಕಾರ್ಯಕರ್ತರಿಗೆ ಮುಜುಗರ ಉಂಟು ಮಾಡಿದೆ ಎಂದಿದ್ದಾರೆ.
ಸಭೆಗಳಿಗೆ ಆಗಮಿಸದ ವಿನಯಗಾಂಧಿ ಜಿಲ್ಲೆಯಲ್ಲಿ ನಡೆಯುತ್ತಿರುವ ಅಭಿವೃದ್ಧಿ ಕೆಲಸ ಕಾರ್ಯಗಳ ಬಗ್ಗೆ ಅವರಲ್ಲಿ ಮಾಹಿತಿ ಇಲ್ಲ ಹಾಗೂ ಪಕ್ಷ ಸಂಘಟನೆಯ ಕಾರ್ಯದಲ್ಲಿಯೂ ಅವರು ಭಾಗಿಯಾಗುವುದಿಲ್ಲ. ಉಸ್ತುವಾರಿ ಸಚಿವರು ಲೋಕೋಪಯೋಗಿ ಇಲಾಖೆ ಕಾಮಗಾರಿಗಳಿಗೆ ಸಂಬಂಧಿಸಿದಂತೆ ಜಿಲ್ಲೆಯ ರಸ್ತೆಗಳ ಬಗ್ಗೆ ವರದಿ ತರಿಸಿಕೊಂಡಿದ್ದಾರೆ. ಹಿಂದಿನ ಸರ್ಕಾರಗಳ ಅವಧಿಯಲ್ಲಿ ಜನಪ್ರತಿನಿಧಿಗಳು ರಸ್ತೆ ಕಾಮಗಾರಿ ಮಾಡದೆ ಬಿಲ್ಗಳನ್ನು ಪಡೆದುಕೊಂಡಿದ್ದಾರೆ. ಈ ಬಗ್ಗೆ ಮಾಹಿತಿಯನ್ನು ಸಚಿವರು ಪಡೆದುಕೊಂಡಿದ್ದಾರೆ ಎಂದು ಹೇಳಿದರು.
ಜಿಲ್ಲೆಯಲ್ಲಿ ರಸ್ತೆಗಳ ಸ್ಥಿತಿಗಳ ಬಗ್ಗೆ ಸಂಪೂರ್ಣ ಮಾಹಿತಿ ಪಡೆದಿರುವ ಸಚಿವರು, ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ವಿನಯಗಾಂಧಿ ಪರಿಶೀಲನೆ ಮಾಡದೆ ಉಸ್ತುವಾರಿ ಸಚಿವರ ಬಗ್ಗೆ ಹೀಗೆಲ್ಲ ಮಾತನಾಡುವುದು ಸರಿಯಲ್ಲ. ಮೊದಲು ಕಚೇರಿಗೆ ಬಂದು ಪಕ್ಷದ ಸಂಘಟನೆ ಕಾರ್ಯದಲ್ಲಿ ತೊಡಗಬೇಕು. ಇಲ್ಲಸಲ್ಲದ ಆರೋಪಗಳನ್ನು ಮಾಡಿ ಬಿಟ್ಟಿ ಪ್ರಚಾರ ಪಡೆದುಕೊಳ್ಳುವುದು ಸರಿಯಲ್ಲ. ಇದರಿಂದ ಪಕ್ಷಕ್ಕೆ ಹೊಡೆತ ಬೀಳಲಿದೆ ಎಂದು ತಿಳಿಸಿದರು.
ಕೋಡಿಮಠ ಸ್ವಾಮೀಜಿ ಬಗ್ಗೆ ಹಗುರ ಮಾತು ಸಲ್ಲ: ಕಾಂಗ್ರೆಸ್ ಕಾರ್ಯಕರ್ತ ಎನಿಸಿಕೊಂಡಿರುವ ಶೇಷೇಗೌಡರು ಕೋಡಿಮಠದ ಸ್ವಾಮಿಜಿಯವರು ಬುರುಡೆ ಸ್ವಾಮೀಜಿ, ಅಲ್ಲಿಗೆ ಹೋಗುವವರು ಅಯೋಗ್ಯರು ಎಂದು ಹೇಳಿದ್ದಾರೆ. ಅದರೆ ಅಲ್ಲಿಗೆ ಮಹಾನ್ ರಾಜಕೀಯ ನಾಯಕರು ಹೋಗಿ ಸ್ವಾಮೀಜಿಯ ಆರ್ಶೀವಾದ ಪಡೆದಿದ್ದಾರೆ. ಸ್ವಾಮೀಜಿಯ ವಿರುದ್ಧ ಹಗುರವಾಗಿ ಹಾಗೂ ಅವಾಚ್ಯ ಶಬ್ಧಗಳಿಂದ ನಿಂದಿಸಿರುವುದರಿಂದ ಮಠದ ಭಕ್ತರಿಗೆ ಹಾಗೂ ಕಾಂಗ್ರೆಸ್ ಕಾರ್ಯಕರ್ತರಿಗೆ ನೋವಾಗಿದೆ ಎಂದು ನುಡಿದರು.
ಸ್ವಾಮೀಜಿಯ ಬಗ್ಗೆ ತಿಳಿಯದೆ ಮಾತನಾಡುವುದು ಸರಿಯಲ್ಲ. ಇದರಿಂದ ಮುಂದಿನ ಲೋಕಸಭೆ ಚುನಾವಣೆಗೆ ಪಕ್ಷ ಸಂಕಷ್ಟವನ್ನು ಎದುರಿಸಬೇಕಾಗುತ್ತದೆ. ಮಠದ ಭಕ್ತರ ಬಳಿ ಹೋಗಿ ನಾವು ನಿಲ್ಲುವುದು ಕಷ್ಟವಾಗುತ್ತದೆ. ಇದರಿಂದ ಪಕ್ಷಕ್ಕೆ ನಷ್ಟವಾಗುತ್ತದೆ. ಈ ಮಠವು ವಿಜಯನಗರ ಸಾಮ್ರಾಜ್ಯ, ಮೈಸೂರು ಅರಸರ ಹಾಗೂ ಹೈದರಾಲಿ ಕಾಲದಿಂದಲೂ ಪ್ರಶಂಸೆ ಪಡೆದುಕೊಂಡಿದೆ. ಇಂತಹ ಮಠದ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡುವುದು ಸರಿಯಲ್ಲ ಎಂದು ಹೇಳಿದರು.
ಸದಾಕಾಲ ಸಚಿವರ ಮನೆ ಮುಂದೆ ನಿಂತು ತಮ್ಮ ಬೇಳೆ ಬೇಯಿಸಿಕೊಳ್ಳುವಂತಹ ಶೇಷೇಗೌಡರು ಸ್ವಾಮೀಜಿ ವಿರುದ್ಧ ಸಲ್ಲದ ಮಾತನಾಡುವುದು ಸರಿಯಲ್ಲ. ಆದ್ದರಿಂದ ಶೇಷೇಗೌಡರು ಸ್ವಾಮೀಜಿ ಬಳಿ ಕ್ಷಮೆಯಾಚಿಸಬೇಕು ಎಂದು ಒತ್ತಾಯಿಸಿದರು.ಕಾರ್ಮಿಕ ಘಟಕದ ರಾಜ್ಯ ಕಾರ್ಯದರ್ಶಿ ಕುಮಾರಸ್ವಾಮಿ, ಸನ್ನಿ ಆಂಡ್ರೋಸ್, ಅಪ್ಪಾಜಿಗೌಡ ಇದ್ದರು.
ಸ್ವಾಮೀಜಿ ಹೇಳಿಕೆಗೆ ಸಹಮತ
ಶಿವಯೋಗಿ ಸ್ವಾಮೀಜಿ ಹೇಳಿಕೆಗೆ ನಮ್ಮ ಸಹಮತವಿದೆ. ಬೆಳಗಾವಿಯಲ್ಲಿ ನಡೆದ ರೈತ ಆತ್ಮಹತ್ಯೆಯಂತಹ ಪ್ರಕರಣಗಳು ಮತ್ತೆ ರಾಜ್ಯದಲ್ಲಿ ಮರು ಕಳಿಸುತ್ತಾ ಹೋದಲ್ಲಿ ಸರ್ಕಾರಕ್ಕೆ ತೊಂದರೆ ಉಂಟಾಗಲಿದೆ ಎಂದು ಸ್ವಾಮೀಜಿ ಹೇಳಿದ್ದಾರೆ ಅಷ್ಟೇ. ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜೀನಾಮೆ ಕೊಟ್ಟೇ ಬಿಡುತ್ತಾರೆ ಅಂತ ಸ್ವಾಮೀಜಿ ಹೇಳಿಲ್ಲ ಎಂದು ಸಮಜಾಯಿಸಿಕೊಂಡರು.