ಒಂದೇ ಸಿಮ್ಗೆ ಹಲವರ ನೇಮ್
ಹಾಸನ: ಇತ್ತೀಚೆಗೆ ಜನನಿಬಿಡ ಸ್ಥಳಗಳಲ್ಲಿ ಪೊಲೀಸ್ ಇಲಾಖೆಯಿಂದ ದೂರು ಪೆಟ್ಟಿಗೆ ಅಳವಡಿಸಲಾಗಿದೆ. ಇದರಿಂದ ನಾನಾ ಕಾನೂನುಬಾಹಿರ ಚಟುವಟಿಕೆಗಳ ಪಕ್ಕಾ ಮಾಹಿತಿ ಪೊಲೀಸರಿಗೆ ಲಭ್ಯವಾಗುತ್ತಿದೆ. ಇದು ಉತ್ತಮ ಬೆಳವಣಿಗೆಯೇ. ಆದರೆ ದೂರು ಪೆಟ್ಟಿಗೆಯ ದೂರುಗಳ ಆಧಾರದ ಮೇಲೆ ಹಣ ವಸೂಲಿ ಮಾಡುವುದು ಹೆಚ್ಚಾಗಿದೆ ಎಂದು ಸಾರ್ವಜನಿಕ ವಲಯದಲ್ಲಿ ಆರೋಪಿಸಲಾಗುತ್ತಿದೆ.
ಅದಕ್ಕೆ ಉದಾಹರಣೆಯಾಗಿ ಹಾಸನ ನಗರದಲ್ಲಿ ಒಂದು ಮೊಬೈಲ್ ಸಿಮ್ ಅನ್ನು ಒಂದೇ ಹೆಸರಿನಲ್ಲಿ ಹಲವರಿಗೆ ಮಾರಾಟ ಮಾಡಿರುವ ಪ್ರಕರಣವಲ್ಲಿ ಕೆಲ ಪೊಲೀಸರು ನಡೆದುಕೊಳ್ಳುತ್ತಿರುವ ರೀತಿನೀತಿಗಳನ್ನು ನೀಡಲಾಗುತ್ತಿದೆ. ಕೆಲ ದಿನಗಳ ಹಿಂದೆ ನಗರ ಪೊಲೀಸರು 9 ಕಂಪನಿಗಳ ಸಿಮ್ಗಳ ಚಿಲ್ಲರೆ ಮಾರಾಟಗಾರರು (ರಿಟೇಲ್ ಸೇಲರ್ಸ್ ) ಒಂದೇ ಸಿಮ್ ಅನ್ನು ಹಲವರಿಗೆ ಮಾರಾಟ ಮಾಡಿದ್ದರು. ಇದು ತಪ್ಪು ಎಂಬುದರಲ್ಲಿ ಯಾವುದೇ ಅನುಮಾನವೇ ಇಲ್ಲ. ಆದರೆ ಇದೊಂದು ಹಣ ವಸೂಲಿ ಮಾಡುವ ಕಾರ್ಯಕ್ರಮವಾದರೆ ಹೇಗೆ ಎಂದು ಪ್ರಶ್ನಿಸಲಾಗುತ್ತಿದೆ.
ಒಂದೇ ಸಿಮ್ ಹಲವರಿಗೆ ಮಾರಾಟ ಮಾಡುತ್ತಿದ್ದ ಆರೋಪದ ಮೇರೆಗೆ 21 ರಿಟೈಲ್ ಮಾರಾಟಗಾರರನ್ನು ಬಂಧಿಸಿ ಠಾಣೆಗೆ ಕರೆ ತರಲಾಯಿತು. ಅದರಲ್ಲಿ ಮೂವರ ವಿರುದ್ಧ ಕೇಸ್ ದಾಖಲು ಮಾಡಿ, ಉಳಿದವರನ್ನು ಬಿಡಲಾಗಿದೆ. ಇದರ ಹಿಂದೆ ಭಾರೀ ಭ್ರಷ್ಟಾಚಾರ ನಡೆದಿದೆ. ಹಣ ಕೊಟ್ಟವರ ವಿರುದ್ಧ ಯಾವುದೇ ಕೇಸ್ ದಾಖಲು ಮಾಡಿಲ್ಲ. ಪ್ರಭಾವಿ ವ್ಯಕ್ತಿಗಳ ಕಡೆಯವರನ್ನೂ ಸುಮ್ಮನೆ ಬಿಟ್ಟಿಲ್ಲ. ಒಂದೇ ಸಿಮ್ ಹಲವರಿಗೆ ಮಾರಾಟ ಮಾಡಿರುವುದು ತಪ್ಪು. ಅದನ್ನು ಅಲ್ಲಗೆಳೆಯುವಂತಿಲ್ಲ. ಆದರೆ ಕೆಲವರ ವಿರುದ್ಧ ಕ್ರಮ ಜರುಗಿಸಿದರೇ ಹೇಗೆ ಎಂದು ನಗರಸಭೆ ಮಾಜಿ ಅಧ್ಯಕ್ಷ ಸಿ.ಆರ್. ಶಂಕರ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಮೊಬೈಲ್ ಕಂಪನಿಯೊಂದು ಹೆಚ್ಚು ಸಿಮ್ ಮಾರಾಟ ಮಾಡಿದರೆ ಬೈಕ್ ಉಚಿತವಾಗಿ ನೀಡಲಾಗುವುದು ಎಂದು ಘೋಷಣೆ ಮಾಡಿದ್ದು, ಈ ಹಿನ್ನೆಲೆಯಲ್ಲಿ ರಿಟೇಲ್ ಮಾರಾಟಗಾರರು ಸಿಮ್ ಹೆಚ್ಚು ಮಾರಾಟ ಮಾಡಲು ಒಂದೇ ಸಿಮ್ ಅನ್ನು ಹಲವರಿಗೆ ನೀಡಿದ್ದಾರೆ. ಈ ಬಗ್ಗೆಯೂ ಭ್ರಷ್ಟಾಚಾರ ರಹಿತವಾಗಿ ತನಿಖೆ ನಡೆಸಲಿ ಎಂದು ಆಗ್ರಹಿಸಲಾಗಿದೆ.
ಹಿಂದೆಯೂ ಹೀಗಾಗಿತ್ತು: ಈಗಿನ ಎಸ್ಪಿ ರವಿ ಚನ್ನಣ್ಣನವರ್ ಅನ್ಯ ಮಾರ್ಗಗಳಿಂದ ಹಣ ಮಾಡಲು ಅವಕಾಶ ನೀಡದೇ ಇರುವ ಕಾರಣ ಕೆಲ ಪೊಲೀಸರು ಇಂಥಹ ಕ್ರಮ ಹುಡುಕಿಕೊಂಡಿದ್ದಾರೆ. ಕೆಲ ತಿಂಗಳ ಹಿಂದೆ ಮೊಬೈಲ್ ಕಂಪನಿಗಳ ಸಿಮ್ ಮಾರಾಟ ಪ್ರಕರಣದಲ್ಲಿ ಭಾರಿ ಹಣ ವಸೂಲಿ ಮಾಡಲಾಗಿದೆ ಎಂದು ಆರೋಪ ಬಂದಿತ್ತು. ಈ ಪ್ರಕರಣದ ರೂವಾರಿಯಾಗಿದ್ದ ಅಧಿಕಾರಿಯೊಬ್ಬರು ಅಪಘಾತದಲ್ಲಿ ತೀರಿಕೊಂಡರು. ಮತ್ತೆ ಸಿಮ್ ಹೆಸರಿನಲ್ಲಿ ಹಣ ಮಾಡಲಾಗುತ್ತಿದೆ ಎಂದು ಟೀಕಿಸಲಾಗುತ್ತಿದೆ.
ಕ್ಷಣದಲ್ಲಿ ಕ್ರಮ: ಅಧಿಕಾರಿಯೊಬ್ಬರು ನಾನು ಎಸ್ಪಿ ಸಂಬಂಧಿಕ ಎಂದು ಹೇಳುತ್ತಿರುವುದು ಮತ್ತು ಸಿಮ್ ಹೆಸರಿನಲ್ಲಿ ಹಣ ವಸೂಲಿ ಮಾಡುತ್ತಿರುವ ಆರೋಪದ ಬಗ್ಗೆ ಪರಿಶೀಲನೆ ನಡೆಸಲಾಗುವುದು. ಯಾರಾದರೂ ಮೌಖಿಕವಾಗಿ, ಲಿಖಿತವಾಗಿ ದೂರು ನೀಡಿದರೆ, ಕ್ಷಣಾರ್ಧದಲ್ಲಿ ಕ್ರಮ ಜರುಗಿಸುವುದಾಗಿ ಎಸ್ಪಿ ರವಿ ದ್ಯಾಮಪ್ಪ ಚನ್ನಣ್ಣನವರ 'ಕನ್ನಡಪ್ರಭ'ಕ್ಕೆ ತಿಳಿಸಿದರು.
ಆರೋಪ ಏನು ಎತ್ತ?: 9 ಮೊಬೈಲ್ ಕಂಪನಿಗಳ ಮುಖ್ಯ ಡೀಲರ್ಗಳಿಗೆ ಸಿಮ್ಗಳನ್ನು ಮಾರಾಟ ಮಾಡಲು ರಿಟೇಲ್ ಮಾರಾಟಗಾರರಿಗೆ ನೀಡಿದ್ದರು. ವಾಸ್ತವವಾಗಿ ಸಿಮ್ ನೀಡುವಾಗ, ಸಿಮ್ ಖರೀದಿಸುವವನ ವಿಳಾಸ ಮತ್ತಿತರ ದಾಖಲೆಗಳನ್ನು ಪಡೆದು ನೀಡಬೇಕು. ಹೀಗೆ ಪಡೆದ ದಾಖಲೆಗಳನ್ನು ಕಂಪನಿಗೆ ಕಳುಹಿಸಿ ದಾಖಲಿಸುವ ಪ್ರಕ್ರಿಯೆ ನಡೆಸಬೇಕು. ಆದರೆ ಪ್ರೀ- ಪೇಯ್ಡ್ ಸಿಮ್ಗಳನ್ನು ಹೆಚ್ಚು ಮಾರಾಟ ಮಾಡಿದರೆ ಬೈಕ್ ಮತ್ತಿತರ ಬಹುಮಾನ ಸಿಗುತ್ತವೆ ಮತ್ತು ಕಮಿಷನ್ ಹಣ ಹೆಚ್ಚು ಸಿಗುತ್ತದೆ ಎಂದು ಒಂದೇ ಸಿಮ್ ಅನ್ನು ಒಂದೇ ಹೆಸರಿನಲ್ಲಿ ಹಲವರಿಗೆ ಮಾರಾಟ ಮಾಡಿದ್ದಾರೆ.
ಹೀಗೆ ಮಾರಾಟ ಮಾಡುವುದು ಅಕ್ಷಮ್ಯ ಅಪರಾಧ ಎಂಬುದರಲ್ಲಿ ಮರು ಮಾತಿಲ್ಲ. ಆದರೆ ನ್ಯಾಯಯುತ ಕ್ರಮ ತೆಗೆದುಕೊಳ್ಳದೇ ಹಣ ವಸೂಲಿ ಮಾಡುವ ಮಾರ್ಗವನ್ನಾಗಿ ಪರಿವರ್ತಿಸಿಕೊಳ್ಳುವುದು ತಪ್ಪು ಎಂದು ಕೆಲ ಪೊಲೀಸ್ ಅಧಿಕಾರಿಗಳ ವಿರುದ್ಧ ಆರೋಪ ಕೇಳಿ ಬಂದಿತ್ತು. ಈ ಬಗ್ಗೆ ಜನಮುಖಿಯಾಗಿ ಕಾರ್ಯ ನಿರ್ವಹಿಸುತ್ತಿರುವ ಎಸ್ಪಿ ಅವರು ಸೂಕ್ತ ರೀತಿಯಲ್ಲಿ ಗಮನಹರಿಸಬೇಕಾಗಿದೆ. ಇಲ್ಲದಿದ್ದರೇ ಎಸ್ಪಿ ಅವರ ಕಾರ್ಯದಕ್ಷತೆ, ಪ್ರಾಮಾಣಿಕತೆ ಹೊಳೆಯಲ್ಲಿ ಹುಣಸೆಹಣ್ಣು ತೊಳೆದಂತೆ ಆಗುತ್ತದೆ ಎಂಬುದನ್ನು ತಳ್ಳಿ ಹಾಕುವಂತಿಲ್ಲ.
ದಯಾಶಂಕರ ಮೈಲಿ