ವಿನಯ ಗಾಂಧಿ ವಿರುದ್ಧ ಕ್ರಮಕ್ಕೆ ಆಗ್ರಹ
ಕ.ಪ್ರ.ವಾರ್ತೆ ಹಾಸನ ಡಿ 5
ಕೆಪಿಸಿಸಿ ಸದಸ್ಯ ವಿನಯ್ ಗಾಂಧಿ ಅವರು ಜಿಲ್ಲಾ ಉಸ್ತುವಾರಿ ಸಚಿವರ ವಿರುದ್ಧ ಮಾತನಾಡಿರುವ ಬಗ್ಗೆ ಶಿಸ್ತುಕ್ರಮ ಜರುಗಿಸುವಂತೆ ಸಿಎಂ, ಹೈಕಮಾಂಡ್‌ಗೆ ಒತ್ತಾಯಿಸುವುದಾಗಿ ಜಿಲ್ಲಾ ಕಾಂಗ್ರೆಸ್‌ನ ಪರಿಶಿಷ್ಟ ಜಾತಿ ವಿಭಾಗದ ಪದಾಧಿಕಾರಿಗಳು ಹೇಳಿದ್ದಾರೆ.
ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಪರಿಶಿಷ್ಟ ಜಾತಿ ವಿಭಾಗದ ಉಪಾಧ್ಯಕ್ಷ ಜಯಕುಮಾರ್ ಮಾತನಾಡಿ, ಸಚಿವ ಎಚ್.ಸಿ. ಮಹದೇವಪ್ಪನವರು ಉಸ್ತುವಾರಿ ವಹಿಸಿಕೊಂಡ ನಂತರ ಸಾಕಷ್ಟು ಬಾರಿ ಜಿಲ್ಲೆಗೆ ಆಗಮಿಸಿ ಕೆಡಿಪಿ ಸಭೆಯನ್ನು ನಡೆಸಿದ್ದಾರೆ. ಅನ್ನಭಾಗ್ಯ ಯೋಜನೆ, ಜೀತಮುಕ್ತರಿಗೆ ಭೂ ಮಂಜೂರಾತಿ ಹಕ್ಕುಪತ್ರದ ಕಾರ್ಯಕ್ರಮ, ಅರಕಲಗೂಡಿನಲ್ಲಿ ನಡೆದಂತಹ ಕಾರ್ಯಕ್ರಮಗಳು ಸೇರಿದಂತೆ ಸಾಕಷ್ಟು ಬಾರಿ ಜಿಲ್ಲೆಗೆ ಆಗಮಿಸಿದ್ದಾರೆ. ಆದರೆ ವಿನಯ್ ಗಾಂಧಿ ಅವರು ಸಚಿವರು ವಿರುದ್ಧ ಸುಳ್ಳು ಆರೋಪಗಳನ್ನು ಮಾಡಿರುವುದು ಸರಿಯಲ್ಲ ಎಂದರು.
ವಿನಯ್ ಗಾಂಧಿ ಅವರು ತಮ್ಮ ಬೇಳೆ ಬೇಯಿಸಿಕೊಳ್ಳುವ ಸಲುವಾಗಿ ಹಾಗೂ ಚುನಾವಣೆಯ ಹಿನ್ನೆಲೆಯಲ್ಲಿ ಹೈಕಮಾಂಡ್‌ನ ಗಮನ ಸೆಳೆಯಲು ಈ ರೀತಿ ಪಕ್ಷದಲ್ಲಿ ಇದ್ದುಕೊಂಡು ಪಕ್ಷದ ಸಚಿವರ ವಿರುದ್ಧ ಸುಳ್ಳು ಆರೋಪಗಳನ್ನು ಮಾಡುವುದು ಪಕ್ಷ ವಿರೋಧಿ ಕೃತ್ಯವಾಗಿದೆ. ತಮ್ಮ ವೈಯಕ್ತಿಕ ಕೆಲಸ ಕಾರ್ಯಗಳನ್ನು ಮಾಡಿಕೊಳ್ಳುವ ಸಲುವಾಗಿ ಹತಾಷ ಭಾವದಿಂದ ಮಾತನಾಡಿರುವುದು ಪಕ್ಷಕ್ಕೆ ದ್ರೋಹ ಎಸಗಿದಂತಾಗಿದೆ ಎಂದು ದೂರಿದರು.
ಆದ್ದರಿಂದ ವಿನಯ್ ಗಾಂಧಿ ವಿರುದ್ಧ ಶಿಸ್ತು ಕ್ರಮಕೈಗೊಳ್ಳುವಂತೆ ಆಗ್ರಹಿಸಿ ಮುಖ್ಯಮಂತ್ರಿ, ಕೆಪಿಸಿಸಿ ಅಧ್ಯಕ್ಷರಿಗೆ ದೂರು ನೀಡುವುದಾಗಿ ಹೇಳಿದರು.
ಈ ಸಂದರ್ಭದಲ್ಲಿ ಉಪಾಧ್ಯಕ್ಷ ಜಿ.ಎಸ್. ಕುಮಾರಸ್ವಾಮಿ, ಜಿಲ್ಲಾ ಸಂಚಾಲಕ ಜಿ.ಆರ್. ಹೇಮರಾಜು, ಎಸ್ಸಿ ವಿಭಾಗದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಸ್.ಕೆ. ರಾಜು, ಎಚ್.ಬಿ.ಶಿವಕುಮಾರ್, ಜಯರಾಂ ಇದ್ದರು.