ಸಂಭ್ರಮದ ಕಾರ್ತೀಕ ದೀಪೋತ್ಸವ
ಕ.ಪ್ರ.ವಾರ್ತೆ ಅರಸೀಕೆರೆ ಡಿ. 5
ಹೊಯ್ಸಳರ ನೆಲೆವೀಡಾದ ತಾಲೂಕಿನ ಕಣಕಟ್ಟೆ ಗ್ರಾಮದ ಐತಿಹಾಸಿಕ ದೇವತೆಗಳಾದ ಶ್ರೀವೀರಭದ್ರಸ್ವಾಮಿ, ಶ್ರೀಲಕ್ಷ್ಮೀನಾರಾಯಣಸ್ವಾಮಿ, ಶ್ರೀಕರಿಯಮ್ಮ ಮತ್ತು ಪಂಚಲಿಂಗೇಶ್ವರ (ಕಲ್ಲೇಶ್ವರ, ವಿಶ್ವೇಶ್ವರ, ಜಗತೇಶ್ವರ, ಕಮಟೇಶ್ವರ, ಶೃಂಗನಾಥೇಶ್ವರ) ದೇವಸ್ಥಾನಗಳಲ್ಲಿ ಕಾರ್ತಿಕ ಮಾಸದ ಅಮಾವಾಸ್ಯೆಯ ಅಂಗವಾಗಿ ಸಹಸ್ರ ದೀಪೋತ್ಸವವನ್ನು ಆಯೋಜಿಸಲಾಗಿತ್ತು.
ತಲಕಾಡಿನಲ್ಲಿ ಏರ್ಪಡಿಸಿದ್ದ ಪಂಚಲಿಂಗ ದರ್ಶನದ ಮಾದರಿಯಲ್ಲೇ ಇಲ್ಲೂ ಧಾರ್ಮಿಕ ಕಾರ್ಯಕ್ರಮಗಳನ್ನು ಏರ್ಪಡಿಸಿದ್ದು ವಿಶೇಷವಾಗಿತ್ತು. ಕಾರ್ತಿಕ ಮಾಸದ ಪ್ರಾರಂಭದಿಂದ ಇಂದಿನವರೆಗೂ ಪ್ರತಿದಿನವೂ ದೀಪೋತ್ಸವವನ್ನು ದೇವಸ್ಥಾನದ ಸಮಿತಿ ವತಿಯಿಂದ ನಡೆಸಲಾಗುತ್ತಿತ್ತು.
ಕಡೇ ಕಾರ್ತಿಕದ ಪ್ರಯುಕ್ತ ವಿಶೇಷ ಪೂಜಾ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು, ಅದರ ಅಂಗವಾಗಿ ದೇವಸ್ಥಾನಗಳನ್ನು ತಳಿರು ತೋರಣಗಳಿಂದ ಸಿಂಗರಿಸಿ ಬೆಳಗಿನಿಂದಲೇ ರುದ್ರಾಭಿಷೇಕ, ಅರ್ಚನೆ, ಸ್ತೋತ್ರಪಠಣ ಮತ್ತು ಮಹಾಮಂಗಳಾರತಿ ಮುಂತಾದ ಧಾರ್ಮಿಕ ಕಾರ್ಯಕ್ರಮಗಳು ನೆರವೇರಿದವು.
ಸಂಜೆ ದೇವಸ್ಥಾನಗಳಲ್ಲಿ ಭಜನಾ ಕಾರ್ಯಕ್ರಮ, ದೀಪೋತ್ಸವ, ಪ್ರಸಾದ ವಿತರಣೆ ಮತ್ತು ರಾತ್ರಿ ಸಾರ್ವಜನಿಕರಿಗೆ ಅನ್ನ ಸಂತರ್ಪಣೆ ಏರ್ಪಡಿಸಲಾಗಿತ್ತು.
ಪ್ರಮುಖ ದೇವರಿಗೆ ವೇ.ಬ್ರ.ಶ್ರೀ. ರಮೇಶಭಟ್ಟರ ನೇತೃತ್ವದ ತಂಡದ ವತಿಯಿಂದ ವಿಶೇಷ ಅಲಂಕಾರ ಏರ್ಪಡಿಸಲಾಗಿತ್ತು. ಈ ವಿಶೇಷ ಅಲಂಕಾರ ವೀಕ್ಷಿಸಲು ಸುತ್ತಮುತ್ತಲಿನ ಹಳ್ಳಿಯ ಸಾವಿರಾರು ಭಕ್ತರು ಆಗಮಿಸಿದ್ದರು.
ಕಳೆದ ಒಂದು ವಾರದಿಂದ ಪ್ರತಿದಿನವೂ ನಡೆಯುತ್ತಿದ್ದ ಈ ಧಾರ್ಮಿಕ ಆಚರಣೆಯ ಉಸ್ತುವಾರಿಯನ್ನು ಸೇವಾರ್ಥದಾರರು ಹಾಗೂ ಗ್ರಾಪಂ ಸದಸ್ಯರು ವಹಿಸಿಕೊಂಡು ಗ್ರಾಮಸ್ಥರ ಮತ್ತು ಭಕ್ತಾದಿಗಳ ಸಹಕಾರದೊಂದಿಗೆ ವ್ಯವಸ್ಥಿತವಾಗಿ ನೆರವೇರಿಸಿದರು.
ಸಂಚಾಲಕ ನಾಗೇಶ್ ರಾವ್, ಗ್ರಾಪಂ ಸದಸ್ಯರಾದ ನಾಗರಾಜ್, ಕೆ.ಬಿ.ಶಿವಕುಮಾರ್, ಸತೀಶ್, ಲಕ್ಷ್ಮೀಧನಂಜಯ, ತಾಪಂ ಸದಸ್ಯ ದಿನೇಶ್, ರೈಲ್ವೆ ಸತೀಶ್ ಹಾಗೂ ಗ್ರಾಮದ ಮುಖಂಡರು ಇದ್ದರು.