ಸ್ವಾರ್ಥದಿಂದಾಗಿ ಬಡವರ ಸ್ಥಿತಿ ಶೋಚನೀಯ
ಕ.ಪ್ರ.ವಾರ್ತೆ ಹಾಸನ ಡಿ. 5
ಪ್ರಸ್ತುತ ಗ್ರಾಮಗಳಲ್ಲಿ ಹಬ್ಬಿರುವ ಸ್ವಾರ್ಥದ ಪರಿಣಾಮ ಕೆಲವೇ ಕೆಲವು ಕುಟುಂಬಗಳು ಸಮೃದ್ಧಿಯಾಗುತ್ತಿದ್ದು ಬಹುಜನರಾದ ಬಡವರ ಮತ್ತು ಹಿಂದುಳಿದವರ ಸ್ಥಿತಿ ಮಾತ್ರ ಶೋಚಣೀಯವಾಗಿದೆ. ಇದರಿಂದ ಗ್ರಾಮಗಳ ಸರ್ವತೋಮುಖ ಅಭಿವೃದ್ಧಿಯಾಗುವಲ್ಲಿಯೂ ಹಿನ್ನೆಡೆಯಾಗುತ್ತಿದೆ ಎಂದು ಆಲೂರು ತಾಲೂಕಿನ ರಾಯರ ಕೊಪ್ಪಲಿನ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ವಿಶ್ವನಾಥ್ ಅಭಿಪ್ರಾಯಪಟ್ಟರು.
ಇತ್ತೀಚೆಗೆ ಆಲೂರು ತಾಲೂಕಿನ ರಾಯರ ಕೊಪ್ಪಲಿನ ಶಾಲೆಯ ಆವರಣದಲ್ಲಿ ಹಾಸನದ ಚಿಕ್ಕಮಗಳೂರು ಮಲ್ಟಿಪರ್ಪಸ್ ಸೋಷಿಯಲ್ ಸರ್ವೀಸ್ ಸೊಸೈಟಿ(ಸಿ.ಎಂ.ಎಸ್.ಎಸ್.ಎಸ್.) ಸಂಸ್ಥೆ ಮಾದರಿ ಗ್ರಾಮ ನಿರ್ಮಿಸುವ ನಿಟ್ಟಿನಲ್ಲಿ ಕಾರ್ಗೋಡು ಗ್ರಾಮ ಪಂಚಾಯ್ತಿಯ ನೇರಕಡಲೆ ಗ್ರಾಮದ ಹೊಣೆಗಾರರಿಗೆ ಆಯೋಜಿಸಿದ್ದ ಮಾದರಿ ಗ್ರಾಮ ಪರಿಕಲ್ಪನೆ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಇಂದು ಜನರು ವೈಯಕ್ತಿಕ ಪ್ರತಿಷ್ಠೆಗಾಗಿ ತಮ್ಮ ಸ್ವಬೆಳವಣಿಗೆಯನ್ನು ನಿರೀಕ್ಷಿಸಿ ಅದನ್ನು ಸಾಧಿಸಲು ಮಾತ್ರ ಪ್ರಯತ್ನಿಸುವುದಲ್ಲದೇ ಎಲ್ಲರಿಗೂ ಸಮಬಾಳು, ಸಮಪಾಲು ತರುವಲ್ಲಿ ಸಾಮಾಜಿಕ ಕಾಳಜಿ ಕಡಿಮೆಯಾಗುತ್ತಿರುವುದು ದುರಾದೃಷ್ಟ ಎಂದು ವಿಷಾದಿಸಿದರು.
ಸಂಸ್ಥೆಯ ಸಂಯೋಜಕ ವಿನ್ಸೆಂಟ್ ಟಿಕ್ವೇರಾ ಮಾತನಾಡಿ, ಆಧುನಿಕ ಸಮಾಜದಲ್ಲಿ ಮನೆ ಮನೆಗಳು ಹತ್ತಿರವಾಗುತ್ತಿರುವುದು. ಅಲ್ಲದೇ, ಭವ್ಯ ಕಟ್ಟಡಗಳಾಗಿ ರೂಪುಗೊಳ್ಳುತ್ತದೆ. ಆದರೆ ಮನಸ್ಸುಗಳ ಸಂಕುಚಿತ ಮನೋಭಾವವದಿಂದ ದೂರ ದೂರ ಸಾಗುತ್ತಿರುವುದು ಮಾತ್ರ ಕಳವಳಕಾರಿ ಬೆಳವಣಿಗೆ ಎಂದರು.
ಈ ನಿಟ್ಟಿನಲ್ಲಿ ಸಮೃದ್ಧಿ ಗ್ರಾಮಗಳು ದೇಶದ ಅಭಿವೃದ್ಧಿಯ ಆಧಾರ ಸ್ತಂಭಗಳಾಗಿದ್ದು ಪ್ರತಿಯೊಬ್ಬರೂ ಸ್ವಹಿತವನ್ನು ಮಾತ್ರ ಬಯಸದೆ ಹೃದಯ ವೈಶಾಲ್ಯದಿಂದ ಸರ್ವರ ಅಭ್ಯುದಯ ಸಾಧಿಸಲು ಶ್ರಮಿಸಿದಲ್ಲಿ ತನ್ನ ಬದುಕು ಸಾರ್ಥಕವಾಗಿಸಬಹುದು ಎಂದರು.
ಗ್ರಾಮೀಣ ಜನರ ಆರ್ಥಿಕ ಮಟ್ಟ ಸುಧಾರಿಸುವುದು, ಗ್ರಾಮದಲ್ಲಿ ಮೂಲಭೂತ ಸೌಕರ್ಯಗಳನ್ನು ಅಳವಡಿಸಿದಾಗ ಮಾತ್ರ ಅದು ಅಭಿವೃದ್ಧಿಯ ಮಾದರಿ ಎನ್ನಲು ಸಾಧ್ಯವಿಲ್ಲ. ಈ ದಿಸೆಯಲ್ಲಿ ಪ್ರತಿಯೊಂದು ಕುಟುಂಬವು ಪರಿಸರ ಕಾಳಜಿಯೊಂದಿಗೆ ಸಮಾನತೆ ಮತ್ತು ಸಮತೆಯೊಂದಿಗೆ ಜೀವಿಸಿದಲ್ಲಿ ಗ್ರಾಮ ಅಭಿವೃದ್ಧಿ ಹೊಂದುತ್ತಿದೆ ಎನ್ನಬಹುದು ಎಂದು ಹೇಳಿದರು.
ಪ್ರತಿಯೊಬ್ಬರೂ ಗ್ರಾಮದ ಉನ್ನತಿಗೆ ಸಕರಾತ್ಮಕವಾಗಿ ಚಿಂತಿಸಿ ಯೋಚಿಸಿ ತೊಡಗಿಸಿಕೊಳ್ಳಬೇಕು. ಜತೆಗೆ ಸರ್ಕಾರದ ಇಲಾಖೆಗಳು, ಸಂಘ ಸಂಸ್ಥೆಗಳು, ಜನಪ್ರತಿನಿಧಿಗಳು ಮತ್ತು ಮಾಧ್ಯಮದವರು ಮಾರ್ಗದರ್ಶನ, ಪ್ರೋತ್ಸಾಹ ಮತ್ತು ಸಹಕಾರವನ್ನು ಪ್ರಾಮಾಣಿಕವಾಗಿ ನೀಡಿದಲ್ಲಿ ಮಾದರಿ ಗ್ರಾಮದ ಕನಸು ನನಸಾಗಬಹುದು ಎಂದು ಹೇಳಿದರು.
ಆದರೆ, ಎಲ್ಲದಕ್ಕಿಂತಲೂ ಬಹು ಮುಖ್ಯವಾಗಿ ಬದಲಾವಣೆ ಬಾಹ್ಯವಾಗಿರದೆ ಜನರ ಮನೋಭಾವದಲ್ಲಿ ಉಂಟಾದರೆ ಮಾತ್ರ ಆ ಪ್ರಕ್ರಿಯೆ ನಿರಂತರ ನಡೆದು ಅಲ್ಲಿನ ಸಮುದಾಯದ ಸುಸ್ಥಿರ ಅಭಿವೃದ್ಧಿಯಾಗಲು ಸಾಧ್ಯವಾಗಿ ಇದುವೇ ಇತರರಿಗೆ ಪ್ರೇರಣೆ ನೀಡುವಂತಹ ಮಾದರಿ ವ್ಯವಸ್ಥೆಯಾಗುತ್ತದೆ ಎಂದು ತಿಳಿಸಿದರು.
ಗ್ರಾಮ ಪಂಚಾಯ್ತಿ ಕಾರ್ಯದರ್ಶಿ ಶ್ರೀಯುತ. ಚಂದ್ರು, ಪಂಚಾಯ್ತಿ ಸದಸ್ಯರಾದ, ಪಾರ್ವತಮ್ಮ, ಸದಸ್ಯರು ಮತ್ತು ಸಂಸ್ಥೆಯ ಕಾರ್ಯಕರ್ತೆಯರಾದ ಕವಿತಾ, ಅಂಗನವಾಡಿ ಕಾರ್ಯಕರ್ತೆ ರೂಪ, ಆಶಾ ಕಾರ್ಯಕರ್ತೆ ಪದ್ಮ, ಸಂಸ್ಥೆಯ ಸಂಯೋಜಕಿ ಲೂಸಿ, ಸ್ನೇಹ ಜ್ಯೋತಿ ಮಹಾಸಂಘದ ಅಧ್ಯಕ್ಷೆ ನಾಗಮ್ಮ ಇದ್ದರು. ನೇರಕಡಲೆ ಗ್ರಾಮದ ಮಹಿಳಾ ಸ್ವಸಹಾಯ ಸಂಘದ 35 ಪದಾಧಿಕಾರಿಗಳು ಭಾಗವಹಿಸಿ ಮಾದರಿ ಗ್ರಾಮ ಮಾಡುವಲ್ಲಿ ಸಲಹೆ- ಸೂಚನೆ ನೀಡಿದರು. ಚೆಲ್ವಿ ಸ್ವಾಗತಿಸಿದರು. ಶೋಭ ವಂದಿಸಿದರು.