ಹಠಾತ್ ಮಳೆಯಿಂದ ಕಾಫಿ, ಬತ್ತ ನಾಶ
ಕ.ಪ್ರ.ವಾರ್ತೆ ಸಕಲೇಶಪುರ ಡಿ.5
ಇತ್ತೀಚೆಗೆ ಸುರಿದ ಹಠಾತ್ ಮಳೆಯಿಂದಾಗಿ ಕಾಫಿ ಹಾಗೂ ಬತ್ತದ ಬೆಳೆಗಾರರಿಗೆ ಲಕ್ಷಾಂತರ ರು. ಹಾನಿ ಉಂಟಾಗಿದೆ.
ತಾಲೂಕಿನಾದ್ಯಂತ ಅರೇಬಿಕ ಕಾಫಿ ಹಣ್ಣಾಗಿದ್ದು ಏಕಾಏಕಿ ಮಳೆ ಸುರಿದ ಪರಿಣಾಮ ಹಣ್ಣಾಗಿರುವ ಕಾಫಿ ನೆಲ ಸೇರಿದ್ದರೆ, ಕೊಯಿಲು ನಡೆಸಿ ಕಣದಲ್ಲಿ ಒಣ ಹಾಕಿದ್ದ ಕಾಫಿ ಹಣ್ಣುಗಳು ಸಹ ಕೊಚ್ಚಿಹೋಗಿದೆ.
ಮುನ್ಸೂಚನೆ ಇಲ್ಲದೇ ಗುಡುಗು ಸಹಿತ ಬಾರಿ ಮಳೆ ಸುರಿದ ಪರಿಣಾಮ ಕಣದಲ್ಲಿದ್ದ ಕಾಫಿ ರಕ್ಷಿಸಿಕೊಳ್ಳಲು ಬಹುತೇಕ ಬೆಳೆಗಾರರು ವಿಫಲರಾಗಿದ್ದರೆ. ಮಳೆಗೆ ಒದ್ದೆಯಾಗಿರುವ ಕಾಫಿಹಣ್ಣು ಕಪ್ಪು ಮೂಡುವುದರಿಂದ ಮಾರುಕಟ್ಟೆಯಲ್ಲಿ ಧಾರಣೆ ಕಡಿತಗೊಳ್ಳುವುದರಿಂದ ಬೆಳೆಗಾರರನ್ನು ಚಿಂತೆಗೀಡು ಮಾಡಿದೆ.
ಬತ್ತದ ಗದ್ದೆಗಳ ಕೊಯಿಲು ಆರಂಭವಾಗಿದ್ದು ಕೊಯಿಲು ನಡೆಸಿ ಗದ್ದೆಯಲ್ಲೇ ಒಣಗಲು ಬಿಟ್ಟಿದ್ದ ಬತ್ತದ ಪೈರು ಮಳೆಗೆ ತುತ್ತಾಗಿದ್ದರೆ, ಕಣದಲ್ಲಿ ಒಕ್ಕಣೆಗೆ ಹಾಕಿದ್ದ ಸಾಕಷ್ಟು ಬತ್ತದ ಪೈರು ನೆನೆದು ಹಾಳಾಗಿದ್ದು ನೆನೆದಿರುವ ಬತ್ತದ ಧಾರಣೆ ಸಹ ಕಡಿಮೆಯಾಗುವುದರಿಂದ ಕೈಗೆ ಬಂದ ತುತ್ತನ್ನು ದಿಢೀರ್ ಮಳೆ ಕಿತ್ತುಕೊಂಡಿದೆ. ಇದಲ್ಲದೆ ಮತ್ತೆ ಮಳೆ ಸುರಿದ ಕಾರಣ ಕಾಫಿ ಹಣ್ಣು ಕೊಯಿಲು ನಿಲುಗಡೆ ಮಾಡಿದ್ದರೆ, ಕೊಯ್ಲು ನಡೆಸಿರುವ ಬತ್ತದ ಪೈರನ್ನು ರಕ್ಷಿಸಲು ರೈತರು ಮುಗಿಬಿದ್ದಿದ್ದಾರೆ.
ಒಟ್ಟಿನಲ್ಲಿ ಮಲೆನಾಡ ರೈತರ ಬೆಂಬಿಡದ ಮಳೆ ಸಾಕಷ್ಟು ನಷ್ಟ ಉಂಟುಮಾಡಿದೆ.