ಹೊಳೆನರಸೀಪುರ: ಡಯಾಲಿಸಿಸ್ ಸೇವೆ ಆರಂಭ
ಕ.ಪ್ರ.ವಾರ್ತೆ ಹೊಳೆನರಸೀಪುರ ಡಿ.5
ತಾಲೂಕು ಮಟ್ಟದ ಸರ್ಕಾರಿ ಆಸ್ಪತ್ರೆಗಳಲ್ಲಿ ಅತ್ಯಾಧುನಿಕ ಸೌಲಭ್ಯಗಳನ್ನು ಒಳಗೊಂಡಿರುವ ಹಾಗೂ ರಾಜ್ಯದ ತಾಲೂಕು ಮಟ್ಟದ ಆಸ್ಪತ್ರೆಗಳಲ್ಲೇ ಮೊದಲ ಬಾರಿ ಹೈಟೆಕ್ ಡಯಾಲಿಸಿಸ್ ಕೇಂದ್ರ ಆರಂಭಿಸಿದ ಹೆಗ್ಗಳಿಕೆ ಹೊಂದಿರುವ ಇಲ್ಲಿನ ಸಾರ್ವಜನಿಕ ಆಸ್ಪತ್ರೆಯಲ್ಲಿ ಡಯಾಲಿಸಿಸ್ ಸೇವೆಯನ್ನು ಗುರುವಾರ ವಿದ್ಯುಕ್ತವಾಗಿ ಆರಂಭಿಸಲಾಯಿತು.
ನೂತನ ಡಯಾಲಿಸಿಸ್ ಸೇವಾ ಕೇಂದ್ರವನ್ನು ಇಲ್ಲಿನ ಸಾರ್ವಜನಿಕ ಆಸ್ಪತ್ರೆಯಲ್ಲಿ ಇತ್ತೀಚೆಗಷ್ಟೇ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಉದ್ಘಾಟಿಸಿದ್ದರು. ನಂತರದಲ್ಲಿ ಡಯಾಲಿಸಿಸ್ ಸೇವೆಯ ಆರಂಭಕ್ಕೆ ಅಗತ್ಯವಾದ ಎಲ್ಲಾ ಮೂಲಭೂತ ಹಾಗೂ ಅವಶ್ಯಕ ಪೂರ್ವ ತಯಾರಿಯನ್ನೂ ಸಿದ್ಧಗೊಳಿಸಿದ ನಂತರ ಡಯಾಲಿಸಿಸ್ ಸೇವೆಯನ್ನು ಗುರುವಾರದಿಂದ ಅಧಿಕೃತವಾಗಿ ಆರಂಭಿಸಲಾಯಿತು.
ಡಯಾಲಿಸಿಸ್ ಸೇವೆ ನೀಡುವುದಕ್ಕೂ ಮೊದಲು ಈ ಚಿಕಿತ್ಸೆಗೆ ಬಳಸಲ್ಪಡುವ ಇಲ್ಲಿನ ನೀರಿನ ಮಾದರಿಯನ್ನು ಪ್ರಯೋಗಾಲಯಕ್ಕೆ ಕಳುಹಿಸಿ, ವಿವಿಧ ಪರೀಕ್ಷೆಗಳನ್ನು ನಡೆಸಿ ತಜ್ಞರ ಸವಿವರವಾದ ವರದಿ ಬಂದ ನಂತರವಷ್ಟೇ ಸೂಕ್ತ ಹಾಗೂ ವ್ಯವಸ್ಥಿತ ತಯಾರಿಯೊಂದಿಗೆ ಡಯಾಲಿಸಿಸ್ ಚಿಕಿತ್ಸಾ ಕಾರ್ಯಕ್ಕೆ ಮುಂದಾಗಿದ್ದಾಗಿ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ.ಟಿ.ಎಸ್. ಲಕ್ಷ್ಮೀಕಾಂತ್ ತಿಳಿಸಿದರು.
ಸಾರ್ವಜನಿಕ ಆಸ್ಪತ್ರೆಯಲ್ಲಿ ನೂತನವಾಗಿ ಡಯಾಲಿಸಿಸ್ ಸೇವೆಯು ಆರಂಭಗೊಂಡ ನಂತರದಲ್ಲಿ ಮೊದಲ ಡಯಾಲಿಸಿಸ್ ಸೇವೆಯನ್ನು ಪಟ್ಟಣದ ನಿವೃತ್ತ ಆರೊಗ್ಯ ಇಲಾಖೆಯ ನೌಕರರಾದ ಕೃಷ್ಣಮೂರ್ತಿ ಅವರಿಗೆ ನೀಡುವ ಮೂಲಕ ಡಯಾಲಿಸಿಸ್ಸೇವೆಯ ತಜ್ಞ ವೈದ್ಯರಾದ ಡಾ.ಡಿ. ನಟರಾಜ್ ಹಾಗೂ ಅವರ ತಂಡ ಕಾರ್ಯಾರಂಭ ಮಾಡಿತು. ಈ ರೋಗಿಗೆ ಡಯಾಲಿಸಿಸ್ ಸೇವೆ ನೀಡುವುದಕ್ಕೂ ಮೊದಲು ಎಚ್ಐವಿ, ಎಚ್ಬಿಎಸ್, ಎಚ್ಸಿವಿ, ಸಿರಮ್ ಎಲೆಕ್ಟ್ರೋಲೈಟ್ ಮೊದಲಾದ ಪೂರ್ವಭಾವಿ ಪರೀಕ್ಷೆಗಳನ್ನು ಮಾಡಿಸಿ, ಅದರ ವರದಿ ಬಂದ ಮೇಲೆ ಡಯಾಲಿಸಿಸ್ ಚಿಕಿತ್ಸೆ ಆರಂಭಗೊಳಿಸಲಾಯಿತು.
ಈ ಸಂದರ್ಭದಲ್ಲಿ ತುರ್ತು ಸೇವೆಗಾಗಿ ಅರವಳಿಕೆ ತಜ್ಞ ಡಾ.ಡಿ.ಎಸ್. ವಿಜಯಕುಮಾರ್ ಹಾಗೂ ಡಯಾಲಿಸಿಸ್ ತಂತ್ರಜ್ಞ ಪ್ರದೀಪ್ ಹಾಗೂ ನುರಿತ ಶುಶ್ರೂಷಕಿಯರು ಇದ್ದರು.