ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಜಿಲ್ಲಾದ್ಯಂತ ಅಂಬೇಡ್ಕರ್ ಪರಿನಿರ್ವಾಣ ದಿನ

Rashmi Kasaragodu
Updated On : 7 Dec 2013, 12:06 pm

ಕ.ಪ್ರ.ವಾರ್ತೆ  ಹಾಸನ  ಡಿ 6
ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್ ಡಾ.ಬಿ. ಆರ್. ಅಂಬೇಡ್ಕರ್ ಅವರ 57ನೇ ಪರಿ ನಿರ್ವಾಣವನ್ನು ಶುಕ್ರವಾರ ಜಿಲ್ಲಾದ್ಯಂತ ಆಚರಿಸಲಾಯಿತು.
ಸಕಲೇಶಪುರ, ಬೇಲೂರು, ಅರಸೀಕೆರೆ, ಚನ್ನರಾಯಪಟ್ಟಣ, ಆಲೂರು, ಹೊಳೆನರಸೀಪುರ ಮತ್ತು ಅರಕಲಗೂಡು ತಾಲೂಕುಗಳಲ್ಲಿ ಅಂಬೇಡ್ಕರ್ ಪರಿ ನಿರ್ವಾಣ ದಿನಾಚರಿಸಿ, ಅವರ ಸಾಧನೆ, ತ್ಯಾಗ ನೆನಪಿಸಿಕೊಳ್ಳಲಾಯಿತು.
ಹಾಸನ ನಗರದ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಇರುವ ಡಾ.ಬಿ.ಆರ್. ಅಂಬೇಡ್ಕರ್ ಪ್ರತಿಮೆಗೆ ಶಾಸಕ ಎಚ್.ಎಸ್. ಪ್ರಕಾಶ್, ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ಅಂಬಿಕಾ ರಾಮಣ್ಣ, ನಗರಸಭೆ ಅಧ್ಯಕ್ಷೆ ಶ್ರೀವಿದ್ಯಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರವಿ ಡಿ.ಚನ್ನಣ್ಣನವರ, ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಉಪೇಂದ್ರ ಪ್ರತಾಪ್ ಸಿಂಗ್, ಕಾಂಗ್ರೆಸ್ ಮುಖಂಡರಾದ ಡಿ. ಮಲ್ಲೇಶ್, ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ನಾರಾಯಣಗೌಡ, ಹೆಚ್ಚುವರಿ ಜಿಲ್ಲಾಧಿಕಾರಿ ಗೋಪಾಲ ಕೃಷ್ಣ ಸೇರಿದಂತೆ ಇತರರು ಮಾಲಾರ್ಪಣೆ ಮಾಡಿ, ನಮನ ಸಲ್ಲಿಸಿದರು.
ಶಕ್ತಿ ಪಡೆದಿರುತ್ತಾರೆ: ಶಾಸಕ ಎಚ್.ಎಸ್. ಪ್ರಕಾಶ್ ಮಾತನಾಡಿ, ಅಂಬೇಡ್ಕರ್ ಅವರ ಪರಿನಿರ್ವಾಣ ದಿನದಂದೇ ದಕ್ಷಿಣ ಆಫ್ರಿಕಾದ ಗಾಂಧಿ ಎಂದೇ ಖ್ಯಾತಿ ಪಡೆದಿರುವಂತಹ ನೆಲ್ಸನ್ ಮಂಡೇಲಾ ಮೃತಪಟ್ಟಿದ್ದಾರೆ. ಇಂತಹ ಮಹಾನ್ ನಾಯಕರು ಹುಟ್ಟಿದಾಗಿನಿದಂಲೆ ಶಕ್ತಿಯನ್ನು ಪಡೆದುಕೊಂಡು ಜನಿಸಿರುತ್ತಾರೆ.
ಆದ್ದರಿಂದ ಅಂಬೇಡ್ಕರ್ ಅವರ ಪರಿನಿರ್ವಾಣ ದಿನದಂದೇ ಮಂಡೇಲಾ ಅವರ ಸಾಧನೆಯನ್ನು ನೆನೆಯುವಂತಾಗಿದೆ. ಮಂಡೇಲಾ ಅವರು ತಮ್ಮ ಹೋರಾಟದ ದಿನಗಳಲ್ಲಿ ಸಾಕಷ್ಟು ವರ್ಷಗಳು ಜೈಲಿನಲ್ಲಿ ಕಳೆದ್ದಾರೆ. ಅದೇ ಅಂಬೇಡ್ಕರ್ ಅವರು ತಮ್ಮ ಜೀವಿತಾವಧಿಯಲ್ಲಿ ಸಾಕಷ್ಟು ಹೋರಾಟಗಳನ್ನು ಮಾಡಿದ್ದಾರೆ. ಅಸ್ಪೃಶ್ಯತೆ ಹೋಗಲಾಡಿಸಲು ಹೋರಾಟ ಮಾಡಿದರು. ಅಂಬೇಡ್ಕರ್ ಅವರ ತತ್ವ ಸಿದ್ಧಾಂತ ಎಂತಹುದು ಎಂಬುದನ್ನು ನಾವು ಅರಿಯಬೇಕು ಎಂದರು.
ಹೋರಾಟದಿಂದ ಸಾಧ್ಯ: ಮಹಿಳೆಯರು ಇವತ್ತು ನಾನಾ ಸ್ಥಾನಗಳನ್ನು ಅಲಂಕರಿಸಲು ಸಾಧ್ಯವಾಗಿರುವುದು ಅಂಬೇಡ್ಕರ್ ಅವರ ಹೋರಾಟದಿಂದ ಮಾತ್ರ ಸಾಧ್ಯ. ಅವರು ಕೇವಲ ಒಂದು ವರ್ಗಕ್ಕೆ ಸೀಮಿತವಾಗದೇ ಎಲ್ಲಾ ವರ್ಗದವರ ನಾಯಕರಾಗಿದ್ದರು ಎಂದ ಅವರು, ಮೂಢನಂಬಿಕೆ, ಬಾಲ್ಯವಿವಾಹದ ವಿರುದ್ಧ ಅರಿವನ್ನು ಮೂಡಿಸುವುದು ಅವಶ್ಯಕವಾಗಿದ್ದು, ಕಾನೂನುಗಳ ಮೂಲಕ ಇದನ್ನು ತಡೆಗಟ್ಟಲು ಸಾಧ್ಯವಿಲ್ಲ. ವಿಶಾಲವಾದ ಮನೋಭಾವದಿಂದ ತಿಳಿವಳಿಕೆಯಿಂದ ಕಡಿಮೆ ಮಾಡಲು ಸಾಧ್ಯ ಎಂದು ಹೇಳಿದರು.
ಅಂಬೇಡ್ಕರ್ ಅವರು ಹೋರಾಟಗಳನ್ನು ಮಾಡಿ ದೇಶಕ್ಕೆ ಕೊಡುಗೆ ನೀಡಿದ್ದಾರೆ. ಆದರೆ ಇವತ್ತು ಇನ್ನೂ ಸಹ ಗ್ರಾಮೀಣ ಪ್ರದೇಶದಲ್ಲಿ ಸರ್ಕಾರದ ಸವಲತ್ತುಗಳು ಸರಿಯಾಗಿ ಲಭ್ಯವಾಗುತ್ತಿಲ್ಲ. ಎಷ್ಟೋ ಜನರಿಗೆ ಸಮಾಜದ ಅರಿವೇ ಇಲ್ಲದಂತಹ ಪರಿಸ್ಥಿತಿ ಇನ್ನೂ ಜೀವಂತಾಗಿದೆ. ಗ್ರಾಮೀಣ ಪ್ರದೇಶದ ಮಕ್ಕಳಿಗೆ ಹೆಚ್ಚಿ ಶಿಕ್ಷಣವನ್ನು ನೀಡುವ ಮೂಲಕ ಅವರಿಗೆ ಕಾನೂನಿನ ಅರಿವನ್ನೂ ಮೂಡಿಸಬೇಕು ಎಂದು ಕರೆ ನೀಡಿದರು.
ಮಹಾನ್ ಮಾನವತಾವಾದಿ: ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ಅಂಬಿಕಾ ರಾಮಣ್ಣ ಮಾತನಾಡಿ, ಡಾ.ಬಿ.ಆರ್. ಅಂಬೇಡ್ಕರ್ ಅವರ ಬದುಕು, ಬವಣೆ, ಜೀವನದ ಮೌಲ್ಯಗಳು, ಸಂವಿಧಾನ ರಚನೆ ಹಾಗೂ ಸಾಮಾಜಿಕ ಆರ್ಥಿಕ ಸುಧಾರಣೆಯಲ್ಲಿ ವಹಿಸಿದ್ದನ್ನು ನಾನು ನೆನೆಯಬೇಕು. ಈತ ಒಬ್ಬ ಮಹಾನ್ ಮಾನವತಾವಾದಿಯಾಗಿದ್ದರು. ಅವರು ದೇಶಕ್ಕೆ ನೀಡಿದಂತಹ ಕೊಡುಗೆಯನ್ನು ನಾಡು ಪ್ರತಿನಿತ್ಯ ನೆನೆಯಬೇಕು. ಅವರು ಆದರ್ಶ ಗುಣಗಳನ್ನು ಮೈಗೂಡಿಸಿಕೊಳ್ಳಬೇಕು ಎಂದರು.
ಅಂಬೇಡ್ಕರ್ ಕೇವಲ ಒಂದು ಜಾತಿ, ವರ್ಗ, ಧರ್ಮದ ನಾಯಕನಾಗಿರದೇ ಇಡೀ ದೇಶದ ಎಲ್ಲ ಜನ ಸಮುದಾಯಗಳ ಮಾರ್ಗದರ್ಶಕರು ಮತ್ತು ಮಾದರಿ ಪುರುಷನೂ ಶೋಷಿತರ ಬಾಳಿನ ಆಶಾಕಿರಣವಾಗಿದ್ದರು. ಅಸ್ಪೃಶ್ಯತೆಯನ್ನು ಹೋಗಲಾಡಿಸಲು ಶ್ರಮಿಸಿದರು. ಇಂತಹ ಮಹಾನ್ ವ್ಯಕ್ತಿ ಹಾಕಿಕೊಟ್ಟಂತಹ ಹಾದಿಯಲ್ಲಿ ಸಾಗಬೇಕು ಎಂದು ಹೇಳಿದರು.
ಮಂಡೇಲಾ ಅವರನ್ನೂ ನೆನೆಯಬೇಕು: ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರವಿ ಡಿ. ಚನ್ನಣ್ಣನವರ್ ಮಾತನಾಡಿ, ಅಂಬೇಡ್ಕರ್  ಪರಿ ನಿರ್ವಾಣ ದಿನದಂದೇ ಜಗತ್ತು ಕಂಡ ಅಪ್ರತಿಮ ಹೋರಾಟಗಾರ ನೆಲ್ಸನ್ ಮಂಡೇಲಾ ಸಾವನ್ನಪ್ಪಿದ್ದಾರೆ. ಅವರನ್ನೂ ಸಹ ನಾವು ಇಲ್ಲಿ ನೆನೆಯಬೇಕು ಎಂದ ಅವರು, ಸಮಯ ಪ್ರಜ್ಞೆ, ಶಿಕ್ಷಣ, ಸ್ವಾಭಿಮಾನ, ತತ್ವ ಸಿದ್ಧಾಂತದ ಮೇಲೆ ನಾವೆಲ್ಲರೂ ಒಳ ಜಗಳವಿಲ್ಲದೆ ಹೊಂದಾಣಿಕೆಯಿಂದ ಜೀವಿಸಬೇಕು ಎಂದರು.
ಸರ್ಕಾರ ಎಸ್ಸಿ-ಎಸ್ಟಿ ಜನಾಂಗಕ್ಕೆ ಮೀಸಲಿಡುವಂತಹ ಅನುದಾನ ಬೇರೆ ಯಾವುದಕ್ಕೂ ಬಳಕೆ ಮಾಡದಂತೆ ಈ ಸಮುದಾಯಕ್ಕೆ ಸದುಪಯೋಗ ಆಗಬೇಕು ಎಂಬ ಕಾನೂನು ಜಾರಿಗೆ ಅನುಮೋದಿಸಿರುವುದನ್ನು ಎಲ್ಲರೂ ಅರಿಯಬೇಕು. ಜೊತೆಗೆ ಅಂಬೇಡ್ಕರ್ ಅವರ ಆದರ್ಶ, ತತ್ವಗಳನ್ನು ಮೈಗೂಡಿಸಿಕೊಂಡು ಸಾಗೋಣ ಎಂದು ಹೇಳಿದರು.
ಈ ಸಂದರ್ಭದಲ್ಲಿ ನಗರಸಭೆ ಅಧ್ಯಕ್ಷೆ ಶ್ರೀವಿದ್ಯಾ, ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಉಪೇಂದ್ರ ಪ್ರತಾಪ್ ಸಿಂಗ್, ಉಪವಿಭಾಗಾಧಿಕಾರಿ ಶರತ್, ಎಸ್ಪಿ ರಶ್ಮಿ, ಜಿಲ್ಲಾ ಸಮಾಜ ಕಲ್ಯಾಣಾಆಧಿಕಾರಿ ಪುರುಷೋತ್ತಮ್, ದಲಿತ ಮುಖಂಡ ಸಂದೇಶ್, ಎಲ್ಲಾ ಜನಪ್ರತಿನಿಧಿಗಳು, ಅಧಿಕಾರಿಗಳು, ನೌಕರರು ಮತ್ತು ಸಂಘ ಸಂಸ್ಥೆಯ ಮುಖಂಡರು ಮತ್ತು ಸಾರ್ವಜನಿಕರು ಭಾಗವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement