ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಬಾಲಕನ ಅಪಹರಣ ಪ್ರಕರಣ ಸುಖಾಂತ್ಯ

Rashmi Kasaragodu
Updated On : 7 Dec 2013, 12:08 pm

ಅರಕಲಗೂಡು: ಶಾಲೆಗೆ ತೆರಳಿದ್ದ ಬಾಲಕನೊಬ್ಬ ಅಪರಿಚಿತ ವ್ಯಕ್ತಿಗಳಿಂದ ಅಪಹರಣಕ್ಕೊಳಗಾಗಿದ್ದ ಘಟನೆ ಸುಖಾಂತ್ಯಗೊಂಡಿದ್ದು, ಬಾಲಕ ಅಪಹರಣಕಾರರಿಂದ ತಪ್ಪಿಸಿಕೊಂಡು ಬಂದಿರುವ ಪ್ರಸಂಗ ನಡೆದಿದೆ. ಗುರುವಾರ ಸಂಜೆ 4.30ರ ಸಮಯದಲ್ಲಿ ಶಾಲೆಯಿಂದ ಮನೆಗೆ ತೆರಳುತ್ತಿದ್ದ ಕನಕನಗರದ ಬಾಲಕ ರವಿಕುಮಾರ (7ನೇ ತರಗತಿ) ಎಂಬಾತನನ್ನು ಮಾರುತಿ ಓಮ್ನಿ ಕಾರಿನಲ್ಲಿ ಬಂದ ಮೂವರು ಅಪರಿಚಿತರು ಬುಜದ ಮೇಲೆ ಹೊಡೆದು ಜ್ಞಾನ ತಪ್ಪಿಸಿ ಕಾರಿನಲ್ಲಿ ಕರೆದೊಯ್ದಿದ್ದರು.
ರಾತ್ರಿಯಾದರೂ ಮನೆಗೆ ಬಾರದ ರವಿಕುಮಾರನನ್ನು ಆತನ ಪೋಷಕರು, ಬಂಧುಗಳೆಲ್ಲಾ ಹುಡುಕಾಡಿದರೂ ಸಿಗದಿದ್ದಾಗ ಅರಕಲಗೂಡು ಠಾಣೆಗೆ ದೂರು ದಾಖಲಿಸಲು ಮುಂದಾಗಿದ್ದರು. ಈ ರೀತಿ ಘಟನೆಯ ಬಗೆಗೆ ಯಾರಿಗೂ ತಿಳಿಯದಿದ್ದ ಕಾರಣ ಪೊಲೀಸರೂ ಮತ್ತೊಮ್ಮೆ ಬಂಧುಗಳ ಮನೆಯಲ್ಲಿ ನೋಡುವಂತೆ ಸೂಚಿಸಿ ಕಳುಹಿಸಿದ್ದರು.
ಆದರೆ, ರಾತ್ರಿ 9 ಗಂಟೆ ವೇಳೆಗೆ ಮೈಸೂರಿನಿಂದ ವ್ಯಕ್ತಿಯೊಬ್ಬರು ಕರೆಮಾಡಿ ನಿಮ್ಮ ಮಗ ಇಲ್ಲಿನ ರೈಲ್ವೆ ಸ್ಟೇಷನ್‌ನಲ್ಲಿ ಅಳುತ್ತಿದ್ದಾನೆ. ಬಂದು ಕರೆದುಕೊಂಡು ಹೋಗಿ ಎಂದು ತಿಳಿಸಿದ್ದಲ್ಲದೇ ರವಿಕುಮಾರನೊಂದಿಗೆ ಮಾತನಾಡಿಸಿದ್ದಾರೆ. ಕೂಡಲೇ ಬಾಲಕನ ಪೋಷಕರು ಮೈಸೂರಿಗೆ ತೆರಳಿ ರವಿಕುಮಾರನನ್ನು ಕರೆತಂದಿದ್ದಾರೆ. ಈ ಮಧ್ಯೆ ಮೈಸೂರಿನ ರೇಲ್ವೆ ಪೊಲೀಸರು ವಿಚಾರಣೆ ನಡೆಸಿದ್ದಾರೆ.
ಬಾಲಕನ ವಿವರಣೆ: ಶಾಲೆಯಿಂದ ಮನೆಗೆ ತೆರಳುತ್ತಿದ್ದ ತನಗೆ ಯಾರೋ ಹೊಡೆದಂತೆ ಆಯ್ತು. ನನಗೆ ಎಚ್ಚರವಾದಾಗ ಇನ್ನೂ ಇಬ್ಬರು ಹುಡುಗರು ಕಾರಿನಲ್ಲಿ ಕಿರುಚಾಡುತ್ತಿದ್ದರು. ಈ ವೇಳೆ ಅವರ ಬಾಯಿಗೆ ಕಾಗದ ತುರುಕಿ ಸುಮ್ಮನಿರಿಸಲಾಯಿತು.ಕತ್ತಲಾಗಿದ್ದ ವೇಳೆ ಬಯಲೊಂದರಲ್ಲಿ ಕಾರು ನಿಲ್ಲಿಸಿ ಅವರಿಬ್ಬರನ್ನೂ ಕಾರಿನಿಂದಿಳಿಸಿ ಅತ್ತ ಕರೆದೊಯ್ಯಲಾಯಿತು.ಈ ವೇಳೆ ನೋಡಿ ತಾನು ಕಾರಿನ ಬಾಗಿಲು ತೆಗೆದು ಓಡಿದೆ.
ಈ ವೇಳೆ ರೈಲಿನ ಶಬ್ದ ಕೇಳಿದ್ದರಿಂದ ಅತ್ತ ಓಡಿದೆ. ಅಲ್ಲಿದ್ದವರು ನಾನು ಯಾರೆಂದು ವಿಚಾರಿಸಿ ಸಮಾಧಾನಪಡಿಸಿ ಮನೆಗೆ ಫೋನ್ ಮಾಡಿಕೊಟ್ಟರು ಎಂದು ಕನ್ನಡಪ್ರಭಕ್ಕೆ ತಿಳಿಸಿದ್ದಾನೆ.ಉಳಿದ ಇಬ್ಬರು ಹುಡುಗರನ್ನು ಎಲ್ಲಿಗೆ ಕರೆದೊಯ್ದರೆಂದು ತನಗೆ ತಿಳಿಯಲಿಲ್ಲ ಎಂದಿದ್ದಾನೆ.
ಆತಂಕ: ಬಾಲಕನ ಅಪಹರಣ ವಿಷಯ ತಿಳಿಯುತ್ತಿದ್ದಂತೆ ಪಟ್ಟಣದಲ್ಲಿ ಆತಂಕ ಸೃಷ್ಟಿಯಾಗಿತ್ತು. ಪೋಷಕರು ತಾವೇ ಮಕ್ಕಳನ್ನು ಶಾಲೆಗೆ ಕರೆತಂದು, ಸಂಜೆ ಮತ್ತೆ ಕರೆದೊಯ್ಯುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement